BREKING NEWS

ಸೋಮವಾರ, ಏಪ್ರಿಲ್ 28, 2025

ಲೇಖನ: ಬಲಪಂಥೀಯರ ಸುಳ್ಳಿನ ಕಥೆಗಳೇ ಇತಿಹಾಸವಾಗುವ ಆತಂಕ

 



ಮನುವಾದಿ ಬಲಪಂಥೀಯರ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳಿನ ಕಟ್ಟುಕಥೆಗಳೇ ಮುಂದಿನ ತಲೆಮಾರಿಗೆ ನೈಜ ಇತಿಹಾಸವಾಗುವ ಸಾಧ್ಯತೆ ಇದ್ದು ಪ್ರಜ್ಞಾವಂತರು ಎಚ್ಚೆತ್ತು ನೈಜ ಇತಿಹಾಸವನ್ನು  ದಾಖಲಿಸುವ ತುರ್ತು ಇಂದು ಎದುರಾಗಿದೆ

 
ಮನುವಾದಿ ರಾಜಕಾರಣ ಮನುಕುಲ ವಿರೋಧಿ ಎಂಬ ಗಾಢ ಅನುಭವ ಜನರಿಗೆ ಈಗ ಆಗುತ್ತಿದೆ. ಈ ಅನುಭವ ಆಗುತ್ತಿಲ್ಲ ಎಂದರೆ ಆತ ಅಕ್ಷರಶಃ ಅಂಧ ಭಕ್ತ ಅಥವಾ ಮಿದುಳು ನಿಷ್ಕ್ರಿಯಗೊಂಡ ಬೌದ್ಧಿಕ ಗುಲಾಮ ಎಂದೇ ಪರಿಗಣಿಸಬೇಕಾಗುತ್ತದೆ.

ವೈದಿಕರು ಹಿಂದುತ್ವದ ಬೀಜ ಬಿತ್ತಿ ಸ್ವತಂತ್ರ ಭಾರತದಲ್ಲಿ ಸುಮಾರು ನೂರು ವರ್ಷಗಳು ಸಮೀಪಿಸುತ್ತಿವೆ. ವಂಚನೆ, ಕಪಟ, ದ್ವೇಷ, ಹಿಂಸೆ, ಅನ್ಯಾಯಗಳೆಂಬ ಫಸಲನ್ನು ದೇಶಾದ್ಯಂತ ತುಂಬಿದ್ದಾರೆ. ಹಾಗೆ ನೋಡಿದರೆ ಭಾರತ ಎಂಬ ಉಪಖಂಡದಲ್ಲಿ ಎರಡು ಸಾವಿರ ವರ್ಷಗಳಿಂದಲೂ ವೈದಿಕರು ಜನರ ಮಿದುಳನ್ನು ಆಪೋಷನ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈ ಕುತಂತ್ರಗಳ ವಿರುದ್ಧ ಜನತೆಯನ್ನು ವಿಮೋಚನೆಗೊಳಿಸಲು ಮಹಾವೀರ, ಬುದ್ಧ, ಕಬೀರ, ಬಸವಣ್ಣ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಜ್ಯೋತಿಬಾಪುಲೆ, ಅಂಬೇಡ್ಕರ್, ಗಾಂಧಿ ಪೆರಿಯಾರ್, ಲೋಹಿಯಾ ಮುಂತಾಗಿ ಸಾವಿರಾರು ದಾರ್ಶನಿಕರು, ಸಮಾಜ ಸುಧಾರಕರು, ಚಿಂತಕರು, ಹೋರಾಟ ರೂಪಿಸುತ್ತಲೇ ಬಂದಿದ್ದರು.

ಈ ಎಲ್ಲಾ ಹೋರಾಟಗಳನ್ನು ನುಂಗಿ ನೊಣೆದಿರುವ, ಹಿಂದುತ್ವ ಎಂಬ ಬ್ರಾಂಡಿನ ರಾಜಕೀಯ ದೇಶವನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದೆ. ಆದರೆ ಅಮಲಿನಲ್ಲಿರುವ ಅಂದ ಭಕ್ತರು ಸ್ಮಶಾನದಲ್ಲಿ ನಿಂತು ಸಹ, ಮೋದಿ ಇರುವುದಕ್ಕೆ ಇಷ್ಟಾದರೂ ಸಹ ಉಳಿದಿದೆ ಎನ್ನುತ್ತಿದ್ದಾರೆ. ಸನಾತನತೆ ಆಧುನಿಕತೆಯ ಹೆಗಲ ಮೇಲೆ ಕುಳಿತು ನಿರಂತರ ಸುಳ್ಳು ಬಿತ್ತಿ ಧರ್ಮದ ಅಮಲನ್ನು ಉಣಿಸಿದ ಪರಿಣಾಮ ಈ ದಿವಾಳಿಯ ಸ್ಥಿತಿ ಬಂದೊದಗಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂಬ ಹಸಿ ಸುಳ್ಳನ್ನು ಹೇಳಿದರು. ಜನ ಅದನ್ನು ನಂಬಿ ಬಹುಮತವನ್ನು ನೀಡಿದರು. ಅಂದಿನಿದ ಈ ದೇಶದಲ್ಲಿ ಸುಳ್ಳು ಚಲಾವಣೆಗೆ ಬರುತ್ತದೆ ಎಂಬ ಸತ್ಯವನ್ನು ಮನಗಂಡ ಬಲಪಂಥೀಯರು ಸುಳ್ಳಿನ ಕಾರ್ಖಾನೆಯನ್ನು ತೆರೆದು ದೇಶವನ್ನು ದಿಕ್ಕೆಡಿಸಿದರು. ಸಾಮಾಜಿಕ ಜಾಲತಾಣಗಳನ್ನು ಪ್ರಬಲ ಅಸ್ತ್ರವನ್ನಾಗಿಸಿ, ದೇಶದ ಬಹುಸಂಖ್ಯಾತ ಯುವಜನರ ಮಿದುಳನ್ನು ಆಲೋಚನಾ ಕ್ರಮದಿಂದ ನಿಷ್ಕ್ರಿಯಗೊಳಿಸಿರುವುದು ಇಂದಿನ ದುರಂತ.

ಮಾಹಿತಿ ಎನ್ನುವುದು ಜನರನ್ನು ಸದಾ ಜಾಗ್ರತೆಯಲ್ಲಿ ಇರಿಸಲು ಸಹಾಯವಾಗುತ್ತದೆ. ಇದರಿಂದ ಆರೋಗ್ಯಕರ ನಾಗರಿಕ ಸಮಾಜವು ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಮಾಹಿತಿಗಳು ತಪ್ಪು ಮತ್ತು ಸುಳ್ಳುಗಳಿಂದ ಕೂಡಿದರೆ, ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಇದು ಬಲಪಂಥೀಯ ರಾಜಕಾರಣದ ಬಂಡವಾಳ ಆಗಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಬಳಕೆ ಅತ್ಯಧಿಕವಾಗಿದೆ. ಅವನ್ನು ಕೈ ವಶಪಡಿಸಿಕೊಂಡಿರುವ ಮನುವಾದಿಗಳು ಈ ಅವಕಾಶವನ್ನು ಬಳಸಿಕೊಂಡು ಸುಳ್ಳುಗಳ ಮೂಲಕವೇ ಜನರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯನ್ನು ನಾಶಗೊಳಿಸುವ ಹುನ್ನಾರವು ಅವರದ್ದಾಗಿದೆ. ಇದರಲ್ಲಿ ಬಹುತೇಕ ಪತ್ರಿಕಾ ಮತ್ತು ದೃಶ್ಯಮಾಧ್ಯಮಗಳು ಶಾಮೀಲಾಗಿದೆ.

ಇಸ್ಲಾಂ ಧರ್ಮವನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಮುಸ್ಲಿಮರಿಂದ ಹಿಂದೂ ಧರ್ಮದ ಅವನತಿ ಆಗುತ್ತಿದೆ, ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ, ನಕ್ಸಲರೂ ಇಸ್ಲಾಂ ಭಯೋತ್ಪಾದಕರೊಂದಿಗೆ ಒಂದಾಗಿದ್ದಾರೆ, ಕಾಂಗ್ರೆಸ್ ಪಾಕಿಸ್ತಾನದ ಪರವಾಗಿದೆ; ಹಿಂದೂ ವಿರೋಧಿಯಾಗಿದೆ, ಬಿಜೆಪಿಯವರು ಪ್ರಾಮಾಣಿಕರು, ದೇಶಭಕ್ತರು, ದೈವಭಕ್ತರು, ಇತರೆ ರಾಜಕೀಯ ಪಕ್ಷಗಳ ನಾಯಕರು ನೀತಿಗೆಟ್ಟವರು, ದೇಶದ್ರೋಹಿಗಳು, ಭ್ರಷ್ಟರು – ಮುಂತಾದ ವಿಷಯಗಳನ್ನು ಮುಖ್ಯ ಸಾರವಾಗಿಟ್ಟುಕೊಂಡು ಕ್ಷಣಕ್ಕೊಂದು ಸುಳ್ಳು ಬಿತ್ತಲಾಗುತ್ತಿದೆ.

ರಾಜ್ಯದಲ್ಲೂ ಈ ಕುತಂತ್ರಗಳು ಬಲಪಂಥೀಯರ ಕೆಲ ಮಾಧ್ಯಮಗಳ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸುಳ್ಳುಗಳಿಂದಲೇ ಇತಿಹಾಸವನ್ನು ತಿರುಚಲಾಗುತ್ತಿದೆ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಮಾತ್ರವಲ್ಲದೆ ವೈಜ್ಞಾನಿಕ ಕ್ಷೇತ್ರವನ್ನು ಬಿಟ್ಟಿಲ್ಲ. ಕೆಲವರ್ಷಗಳ ಹಿಂದೆ, ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ, ಕ್ಲೋನಿಂಗ್ ವ್ಯವಸ್ಥೆಯನ್ನು ಮಹಾಭಾರತ ಕಾಲದಲ್ಲಿ ಕಂಡುಹಿಡಿಯಲಾಗಿತ್ತು ಎಂದು ಹೇಳಿದ್ದರು. ರಾಮಾಯಣ ಕಾಲದಲ್ಲಿ ವಿಮಾನವನ್ನು ಕಂಡು ಹಿಡಿದಿದ್ದರೂ ಎಂದು ಭಕ್ತರು ಹೇಳುತ್ತಾರೆ. ಗೋಮೂತ್ರ ಕುಡಿದರೆ ಕೊರೊನಾ ಬರುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆ ಸಗಣಿಯನ್ನು ಮೈಯಿಗೆ ಬಳಿದುಕೊಂಡು ಗೋಮೂತ್ರ ಕುಡಿಯುವ ಸಮಾವೇಶಗಳು ನಡೆದಿವೆ.

ಬಲಪಂಥೀಯರ ಕೆಲ ಸಂಘಟನೆಗಳು ಮತ್ತು ಮಾಧ್ಯಮಗಳು ಗಲಭೆಗಳಿಗೆ ಪ್ರೇರೇಪಣೆ ನೀಡಿ, ಸಮಾಜದಲ್ಲಿ ಅಶಾಂತಿ ಎಬ್ಬಿಸಲು ನಿರಂತರ ಸುಳ್ಳುಗಳನ್ನು ಹರಡಲಾಗುತ್ತಿದೆ.

ಆಯ್ದ ಒಂದೆರಡು ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತಿದ್ದೇನೆ. 

2018ರ ಅಕ್ಟೋಬರ್ ನಲ್ಲಿ ಪಂಜಾಬ್ ನ ಅಮೃತಸರದಿಂದ ಹೊರಟಿದ್ದ ರೈಲೊಂದು ಭೀಕರ ಅಪಘಾತಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ರೈಲು ಬರುವುದಿಲ್ಲವೆಂದು, ದಸರಾ ಹಬ್ಬದ ರಾವಣ ದಹನ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನೂರಾರು ಜನ ಸ್ಟೇಡಿಯಂನಲ್ಲಿ ನಿಂತಂತೆ ರೈಲ್ವೆ ಹಳಿಯ ಅಕ್ಕಪಕ್ಕ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ರೈಲು 60 ಜನರನ್ನು ಆಹುತಿ ತೆಗೆದುಕೊಂಡು ಹಲವು ಜನರಿಗೆ ಗಂಭೀರ ಗಾಯಗಳಾಗಿದ್ದವು.

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಸಿಹಸಿ ಸುಳ್ಳು ಬಿತ್ತರವಾಯಿತು. ಇದು ಹಿಂದೂಗಳನ್ನು ಸಾಮೂಹಿಕವಾಗಿ ಕೊಲ್ಲುವ ಟ್ರೈನ್ ಜಿಹಾದ್ ಎಂಬ ಮುಸಲ್ಮಾನರ ಪಿತೂರಿ. ಈ ಟ್ರೈನ್ ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದು. ಆತ ಜನರ ಗುಂಪನ್ನು ನೋಡಿ ರೈಲನ್ನು ನಿಲ್ಲಿಸಬಹುದಿತ್ತು. ಆದರೆ ಸಾಮೂಹಿಕವಾಗಿ ಹಿಂದೂಗಳನ್ನು ಹತ್ಯೆಗೈಯ್ಯುವ ಉದ್ದೇಶದಿಂದಲೇ ರೈಲನ್ನು ನಿಲ್ಲಿಸಲಿಲ್ಲ. ಈ ಘಟನೆಯಲ್ಲಿ 250 ಹಿಂದೂ ಬಾಂಧವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿಗಳನ್ನು ಬಿತ್ತರಿಸಿದವರು ಬಿಜೆಪಿಯ  ಐಟಿ ಸೆಲ್ ನವರು ಮತ್ತು ಮೋದಿಯವರ ಅಭಿಮಾನಿಗಳು.

ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ  ಎ.ಎನ್.ಐ. ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ರೈಲಿನ ಚಾಲಕನ ಹೆಸರು ಅರವಿಂದ ಕುಮಾರ್. ಆದರೆ ಈ ಸತ್ಯ ಹೊರ ಬರುವ ಮುನ್ನವೇ, ಇಮ್ತಿಯಾಜ್ ಆಲಿ ಎಂಬ ವ್ಯಕ್ತಿ ಈ ಘಟನೆಗೆ ಉದ್ದೇಶಪೂರ್ವಕ ಕಾರಣ ಎಂದು ಜನ ನಂಬಿದ್ದರು.

2017ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ಕೋಮುಗಲಭೆ ನಡೆದಿತ್ತು. ಈ ಗಲಭೆ ನಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಎಂಬ 21 ವರ್ಷದ ಯುವಕನ ದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ದಿಡೀರ್ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಜಿಹಾದಿ ಕಾರ್ಯಕರ್ತರೇ ಪರೇಶ್ ಮೇಸ್ತನನ್ನು, ತಲೆ ಕೈಕಾಲು ಕತ್ತರಿಸಿ ಬರ್ಬರ ಕೊಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ಮುನ್ನವೇ ಘೋಷಿಸಿದರು. ಅವರ ಹೇಳಿಕೆಯನ್ನು ಆಧರಿಸಿ 2018ರ ಡಿಸೆಂಬರ್ 11ರಂದು ಇಂಡಿಯಾ ಟುಡೇ ಸುದ್ದಿವಾಹಿನಿ ಪ್ರಮುಖ ಸುದ್ದಿಯಾಗಿ ಬಿತ್ತರಿಸಿ ಮಸಾಲವನ್ನು ಸೇರಿಸಿತು. ಪರೇಶನ್ ಮೇಲೆ ಕುದಿಯುವ ಎಣ್ಣೆ ಸುರಿದು ಕೈಕಾಲು ರುಂಡಗಳನ್ನು ಬೇರ್ಪಡಿಸಲಾಗಿತ್ತು ಎಂಬ ವರದಿ ಪ್ರಕಟಿಸಿತ್ತು. ಸುದ್ದಿವಾಹಿನಿಗಳಿಗೆ ಟಿ ಆರ್ ಪಿ ಮುಖ್ಯವಾಗುತ್ತದೆ.

ಪೊಲೀಸರು ಮಣಿಪಾಲದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆತನ ಕಳೇಬರವನ್ನು ನೀಡಿದರು. ಕೆಲ ದಿನಗಳ ನಂತರ ಈ ಸಾವಿನ ಬಗ್ಗೆ ತಜ್ಞರು ವರದಿ ನೀಡಿದರು. ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡಿಸಿರುವ ಗುರುತುಗಳು ಇರಲಿಲ್ಲ. ರುಂಡ ಸೇರಿದಂತೆ ಅಂಗಾಂಗಗಳು ಬೇರ್ಪಟ್ಟಿರಲಿಲ್ಲ. ಬಹಳ ದಿನಗಳ ನಂತರ ಶವ ಪತ್ತೆಯಾಗಿದ್ದರಿಂದ ಚರ್ಮ ಕೊಳೆತಿದೆಯೇ ಹೊರತು ಕುದಿಯುವ ಎಣ್ಣೆ ಆತನ ದೇಹದ ಮೇಲೆ ಬಿದ್ದಿರಲಿಲ್ಲ. ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವ ಉದ್ದೇಶಕ್ಕಾಗಿ ವಾಟ್ಸಾಪ್ ಗಳಲ್ಲಿ ಈ ರೀತಿ ಸುದ್ದಿಯನ್ನು ಹರಿಯಬಿಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಷಯವನ್ನು ವಿಷಯ ತಜ್ಞರು ತಿಳಿಸುವ ಮುನ್ನವೇ ಸಂಸ್ಥೆಯು ಹೇಳಿರುವ ಸುಳ್ಳನ್ನೇ ಜನರು ನಂಬಿದ್ದರು.

ಉತ್ತರಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವ ಅನುಭವಿಸಿತ್ತು. ಗೋರಖ್ ಪುರ, ಫುಲ್ ಪುರ್ ಮತ್ತು ಖೈರಾನ  ಕ್ಷೇತ್ರಗಳಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಗೆದ್ದಿತ್ತು. ಖೈರಾನ ಕ್ಷೇತ್ರದಿಂದ ಗೆದ್ದಿದ್ದ ಬೇಗಂ ತಬ್ಸಂ ಹಸನ್ ಅವರು ಹೇಳಿಕೆ ನೀಡಿ, ಇದು ರಾಮನ ಸೋಲು, ಅಲ್ಲಾಹುವಿನ ಗೆಲುವು ಎಂದಿದ್ದಾರೆ ಎಂದು ಬಿಜೆಪಿ ನಾಯಕ ಕಮಲ್ ತ್ಯಾಗಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಅದು ಪ್ರಸರಣವಾದ ನಂತರ ಡಿಲೀಟ್ ಮಾಡಿದ್ದ. ಆದರೆ ಸಂಸದೆ ತಬ್ಸಂ ಖಳನಾಯಕಿ ಸ್ಥಾನದಲ್ಲಿ ನಿಂತಿದ್ದರು. ಅವರು ಇಂತಹ ಹೇಳಿಕೆಯನ್ನೇ ನೀಡಿಲ್ಲ ಎಂದು ಸ್ಪಷ್ಟನೆ ಕೊಡುವ ಮುನ್ನವೇ ಸುಳ್ಳು ವ್ಯಾಪಿಸಿತ್ತು.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ, Hindu girl stabbed to death by a Muslim  ಎಂಬ ಹೆಡ್ಡಿಂಗ್ ಇರುವ ಕ್ಲಿಪ್ಪಿಂಗ್ ವೊಂದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಕಿಕೊಂಡು ನಂತರ ಡಿಲೀಟ್ ಮಾಡಿದ್ದರು. ಇದರ ಅಸಲೀಯತ್ತು ಏನು ಎಂದರೆ, ಆ ಪತ್ರಿಕೆಯಲ್ಲಿ  Day after  being stabbed by a stalker  21 year old dies  ಎಂಬ ಹೆಡ್ಡಿಂಗ್ ನೀಡಲಾಗಿತ್ತು ಎಂದು ಆ  ಪತ್ರಿಕೆ  ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿತ್ತು. ವಾಸ್ತವದಲ್ಲಿ ಭಕ್ತನೊಬ್ಬ ಫೋಟೋಶಾಪ್ ಮಾಡಿ, ಮುಸ್ಲಿಂ ಯುವಕನಿಂದ ಹಿಂದು ಯವತಿಯ ಕೊಲೆ ಎಂದು ಹೆಡ್ಡಿಂಗ್ ವಿರೂಪಗೊಳಿಸಿದ್ದ.

ಮೈಸೂರು ರಂಗಾಯಣದ ನಿರ್ದೇಶಕನೊಬ್ಬ ಟಿಪ್ಪು ನಿಜಕನಸುಗಳು ಎಂಬ ಕಪೋಲಕಲ್ಪಿತ ನಾಟಕ ಬರೆದು ಇಲ್ಲದ ಉರಿಗೌಡ ನಂಜೇಗೌಡರೆಂಬ ಪಾತ್ರಗಳನ್ನು ಸೃಷ್ಟಿಸಿ ಸೌಹಾರ್ದತೆಯಿಂದ ಇರುವ ಮುಸ್ಲಿಂ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ

ಈಗ ಕೇರಳ ಸ್ಟೋರಿ ಎಂಬ ಹಿಂದಿ ಚಲನಚಿತ್ರದಲ್ಲಿ ಮೊದಲ ನೋಟಕ್ಕೆ ಕೋಮು ಧ್ರುವೀಕರಣ ಮತ್ತು ಕೇರಳದ ವಿರುದ್ಧ ದ್ವೇಷ ಅಭಿಯಾನ ನಡೆಸುವ ಪ್ರಚಾರದ ಚಿತ್ರವಾಗಿ ಕಾಣಿಸುವ ಹಿಂದಿ ಸಿನಿಮಾ ‘ಕೇರಳ ಸ್ಟೋರಿ’  ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳಿಗೆ ಹೆಸರಾದ ಕೇರಳವನ್ನು ಧಾರ್ಮಿಕ ಮೂಲಭೂತವಾದದ ಕೇಂದ್ರವಾಗಿ ರೂಪಿಸುವ ಸಂಘಪರಿವಾರದ ಪ್ರಚಾರವನ್ನು ಚಲನಚಿತ್ರವು ಬಲಪಡಿಸುತ್ತದೆ ಎಂದು ಸೂಚಿಸುತ್ತದೆ. ಕೇರಳದ ಚುನಾವಣಾ ರಾಜಕೀಯದಲ್ಲಿ ಲಾಭಗಳಿಸಲು ಸಂಘಪರಿವಾರದ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇಂತಹ ಪ್ರಚಾರದ ಚಲನಚಿತ್ರಗಳು ಮತ್ತು ಮುಸ್ಲಿಂ ಜೀವನದ ಬೆಂಕಿಯ ಚಿತ್ರಣವನ್ನು ನೋಡಬೇಕಾಗಿದೆ.

ಕೇಂದ್ರ ಗೃಹ ಸಚಿವಾಲಯ, ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಂದ ತಳ್ಳಿಹಾಕಲ್ಪಟ್ಟ  'ಲವ್ ಜಿಹಾದ್'  ಎಂಬ ಕಪೋಲಕಲ್ಪಿತ ಆಧಾರದ ಮೇಲೆ ಸಿನಿಮಾ ಮಾಡಲಾಗಿದೆ

 ಕೇರಳವನ್ನು ಉದ್ದೇಶಪೂರ್ವಕವಾಗಿ ಜಗತ್ತಿನ ಮುಂದೆ ಕೆಡಿಸಲು ಈ ಸುಳ್ಳು ಆರೋಪವನ್ನು ಚಿತ್ರದ ಮೂಲಭೂತ ಆಧಾರವನ್ನಾಗಿ ಮಾಡಲಾಗಿದೆ. ಸಂಘಪರಿವಾರವು ಕೋಮು ವಿಷಬೀಜವನ್ನು ಬಿತ್ತಿ ಕೇರಳದಲ್ಲಿ ಇರುವ ಧಾರ್ಮಿಕ ಸೌಹಾರ್ದತೆಯ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದೆ.  

ಸಂಘಪರಿವಾರದ ಪ್ರಯತ್ನ ಮತ್ತು ಪರೀಕ್ಷಿತ ತಂತ್ರಗಳು ಕೇರಳದಲ್ಲಿ ಫಲ ನೀಡಲಿಲ್ಲ ಮತ್ತು ಆದ್ದರಿಂದ ಅವರು ಸುಳ್ಳು ನಿರೂಪಣೆಗಳನ್ನು ಅವಲಂಬಿಸಿರುವ ಚಲನಚಿತ್ರಗಳ ಮೂಲಕ ತಮ್ಮ ವಿಭಜನೆಯ ರಾಜಕೀಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ. ಸಂಘ ಪರಿವಾರದ ಇಂತಹ ದೊಡ್ಡ ಕಥೆಗಳಿಗೆ ಯಾವುದೇ ಆಧಾರ ಅಥವಾ ಪುರಾವೆಗಳಿಲ್ಲ. ಕೇರಳದಲ್ಲಿ 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂಬುದು  ಸಂಪೂರ್ಣ ಸುಳ್ಳು. ಇಂಥದ್ದೊಂದು ಕಥೆ ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನ.

-ಅರೆಯೂರು ಚಿ.ಸುರೇಶ್
ಲೇಖಕರು, ಪತ್ರಕರ್ತರು
ತುಮಕೂರು ಮೊಬೈಲ್: 7090564603

ಕಥೆ: ಪ್ರೀತಿಸಿದವಳು ಸಿಗದಿರಲಿ!

 





ಕೊನೆಗೂ ಅವಳು ತಿರುಗಲಿಲ್ಲ.

ನೀನು ನೋಡುತ್ತಿದ್ದೆ.. ಕವಲು ದಾರಿಯಲ್ಲವಳು ತಿರುಗಿ ಮರೆಯಾಗುವವರೆಗೂ ನೋಡುತ್ತಿದ್ದೆ. ಜಗತ್ತಿನ ಮತ್ಯಾವ ಹೆಣ್ಣಿಗೂ ಇಲ್ಲದ ಆ ಮುದ್ದು ಜಡೆಯನ್ನು ತೂಗಾಡಿಸುತ್ತಾ ನಡೆದುಹೋದ ಮೊಲದಂತಹ ಆ ಹುಡುಗಿ ನಡೆಯುತ್ತಲೇ ಇದ್ದಳು. ಯಾವುದೋ ದೂರ ತೀರಕ್ಕೆ ಹೊರಟ ಹಡಗಿನಂತೆ.. ಆಳ ಕಣಿವೆಯೊಳಕ್ಕೆ ಕೈಜಾರಿ ಉರುಳುತ್ತಿರುವ ನವಿಲುಗರಿಯಂತೆ.. ಇನ್ನೆಂದೂ ಮರಳದ ಸೌಭಾಗ್ಯದಂತೆ... ಕಣ್ಣೆದುರೇ ತೊರೆದುಹೋಗುತ್ತಿರುವ ಪ್ರಾಣದಂತೆ...

ಅವಳು ನಡೆಯುತ್ತಲೇ ಇದ್ದಳು.

ಕೆಲವೇ ನಿಮಿಷದ ಕೆಳಗೆ ಕೊಂಚ ಕೈ ಚಾಚಿದರೂ  ಸಿಕ್ಕುಬಿಡುವಷ್ಟು ಸಮೀಪದಲ್ಲಿದ್ದ ಹುಡುಗಿ.. ಕಳೆದ ಎಷ್ಟೋ ವರ್ಷದ ಅಸಂಖ್ಯಾತ ನಿಮಿಷಗಳಿಂದ ನೀನು ಧ್ಯಾನಿಸುತ್ತಲೇ ಬಂದಿರುವ ಹುಡುಗಿ... ಯಾರೆಂದರೆ ಯಾರನ್ನೂ ತನ್ನ ಹತ್ತಿರ ಬಿಟ್ಟುಕೊಳ್ಳದ ಹುಡುಗಿ.. ನಿನ್ನೊಂದಿಗೆ ಮಾತ್ರ ಅದೊಂದು ತೆರನಾದ ಆತ್ಮೀಯತೆಯಿಂದಿದ್ದ ಹುಡುಗಿ.. ನೀನು ಮಾತುಬಿಟ್ಟ ಆ ಸಂಜೆ 'ಯಾಕೆ ನನ್ನೊಂದಿಗೆ ಮಾತಾಡ್ತಿಲ್ಲ?' ಎಂದು ಅಳುಮುಖ ಮಾಡಿಕೊಂಡು ನಿಂತಿದ್ದ ಹುಡುಗಿ.. ನೂರು ಗೆಳತಿಯರ ನಡುವಿನಿಂದಲೂ ನಿನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದ್ದ ಹುಡುಗಿ.. ಸೀರೆಯುಟ್ಟ ದಿನ ಸಾಕ್ಷಾತ್ ದೇವತೆಯಂತೆ ಕಂಗೊಳಿಸಿದ್ದ ಹುಡುಗಿ..

ಮೊಟ್ಟ ಮೊದಲ ಬಾರಿಗೆ ಖುಷಿಯಲ್ಲಿಯೂ ನಿನ್ನ ಕಣ್ತುಂಬಿಬರುವಂತೆ ಮಾಡಿದ್ದ ಹುಡುಗಿ...

ಅವಳು ಕೊನೆಗೂ ನಿನಗೆ ಸಿಗಲಿಲ್ಲ.

ನೀನವಳನ್ನು ಮರೆಯಲೂ ಇಲ್ಲ.

                  **************

ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಯಾರದೋ ಮದುವೆಯ ಸ್ವಾಗತ ಫಲಕ.. ನೋಡುತ್ತಿದ್ದಂತೆಯೇ ಎದೆಯೊಳಗೆ ಸಾವಿರ ವೋಲ್ಟ್ ವಿದ್ಯುತ್ ಹರಿದ ಅನುಭವ. ಹತ್ತಾರು ಹೂಗಳನ್ನು ಒಂದಕ್ಕೊಂದು ಪೋಣಿಸಿ ಬರೆದಿರುವ ಆ ಫಲಕದಲ್ಲಿರುವ ಮದುಮಗಳ ಹೆಸರು... ಅದು ಅವಳದೇ! ನಿನಗೆ ಗೊತ್ತು: ಹೆಸರು ಅವಳದಾದ ಮಾತ್ರಕ್ಕೆ ಮದುಮಗಳೂ ಅವಳೇ ಆಗಬೇಕಿಲ್ಲ. ಆದರೂ ಭಯ ನಿನಗೆ! ಒಮ್ಮೆ ಕಲ್ಯಾಣ ಮಂಟಪದೊಳಗೆ ಇಣುಕಿ ನೋಡುವ ಕಾತುರ ಅಲ್ವಾ? ಒಂದುವೇಳೆ ಅವಳೇ ಆಗಿದ್ದರೆ? ಇರಬಹುದು.. ಅವಳೇ ಇರಬಹುದು.. ನೀನು ಏನು ತಾನೇ ಮಾಡಬಲ್ಲೆ? ಕನಸಿನಲ್ಲಿ ನೀನು ನೂರು ಬಾರಿ ಹಿಡಿದು ನಡೆದಿದ್ದ ಆ ಕೈಗಳನ್ನು ಇನ್ಯಾರದೋ ಕೈಗಳೊಂದಿಗೆ ಬೆಸೆದು ನಿಂತಿರುವವಳ ಮೇಲೆ ನಾಲ್ಕು ಅಕ್ಷತೆಕಾಳುಗಳನ್ನು ಹಾಕಿ ಆಶೀರ್ವದಿಸುವುದಲ್ಲದೆ.. 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಹಾರೈಸುವುದಲ್ಲದೆ.. ಇರುಳ ಚಾದರದ ತುಂಬಾ ನಿರ್ನಿದಿರೆಯ ಹೊದ್ದುಕೊಂಡು ಹೊರಳಾಡುವುದಲ್ಲದೆ.. 'ಯಾಕೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಹೋದೆ?' ಎಂದು ಅವಳ ಹಳೆಯ (ನಿರ್)ಭಾವ ಚಿತ್ರವನ್ನು ಪ್ರಶ್ನಿಸುವುದಲ್ಲದೆ...

ಹೇಳು... ಇನ್ನೇನು ತಾನೇ ಮಾಡಬಲ್ಲೆ?

ಸಾಧ್ಯವಿದೆ..‌

ಎಲ್ಲಿಗೋ ಹೋಗುತ್ತಿರುವಾಗ ಎಲ್ಲಿಂದಲೋ ಅವಳ ಹೆಸರು ಕೇಳಿಬಂದಾಗ ರಸ್ತೆಯ ನಟ್ಟನಡುವೆ ಥಟ್ಟನೆ ನಿಂತುಬಿಡಬಹುದು. ಹಿಂದೊಮ್ಮೆ ಜೊತೆಯಾಗಿ ನಡೆದ ದಾರಿಯುದ್ದಕ್ಕೂ ಮತ್ತೆ ಮತ್ತೆ ನಡಯುತ್ತಾ ಅವಳ ಹೆಜ್ಜೆಗಳನ್ನು ಹುಡುಕಬಹುದು. ಅವಳ ನೆನಪುಗಳೇ ತುಂಬಿರುವ ಹಾಡೊಂದನ್ನು ಕೇಳಿ ಕೇಳಿ ತಣಿಯಬಹುದು. ನಡೆದದ್ದೆಲ್ಲವೂ ಸುಳ್ಳಾಗಿ, ಅವಳು ಮತ್ತೆ ನಿನ್ನವಳೇ ಆಗಿ ಬಳಿಬಂದಂತೆ ಕನಸು ಬಿದ್ದ ಆ ಬೆಳಗಿನ ಜಾವವೊಂದರಲ್ಲಿ ಹೊದ್ದ ಹೊದಿಕೆಗಷ್ಟೇ ತಿಳಿಯುವಂತೆ ಮುಗುಳ್ನಗಬಹುದು. ಕಂಡದ್ದು ಕನಸೆಂದು ಅರಿವಾದ ಮರುಕ್ಷಣ ಬದುಕೇ ಕಳೆದು ಹೋದಂತೆ ಮಂಕಾಗಬಹುದು. ಗಂಡನ ಹೆಗಲು ತಬ್ಬಿ ನಿಂತವಳನ್ನು ಫೋಟೋವೊಂದರಲ್ಲಿ ನೋಡಿ ಜಗತ್ತಿನ ಮತ್ಯಾರಿಗೂ ಅರ್ಥವಾಗದ ವೇದನೆಯಲ್ಲಿ ಮಮ್ಮಲ ಮರುಗಬಹುದು...

ಇನ್ನೂ ಏನೇನೋ ಸಾಧ್ಯವಿದೆ!

                  **************

ಯಾರು ಹೇಳಿದ್ದು ಪ್ರೀತಿಸಿದವರು ಸಿಗಲೇಬೇಕು ಅಂತ?

ಒಮ್ಮೆ ಯೋಚಿಸಿ ನೋಡು? ಅವಳು ನಿನಗೆ ಸಿಕ್ಕಿದ ಮರುಕ್ಷಣ  ಅವಳ ಊರಿನ ಹೆಸರು ನಿನ್ನೆದೆಯೊಳಗಿದ್ದ ತನ್ನ ಹಿಂದಿನ ವಿಶೇಷತೆಯನ್ನು ಕಳೆದುಕೊಳ್ಳುತ್ತದೆ. ಅವಳ ಪ್ರೀತಿಗಾಗಿ ಹಂಬಲಿಸಿದ ಕ್ಷಣಗಳು ಒಂದೊಂದಾಗಿ ಮರೆತುಹೋಗುತ್ತವೆ. 'ಅವಳು' ಎಂದ ಕೂಡಲೇ ಮೊಗ್ಗಂತೆ ನಾಚುವ ನಿನ್ನೀ ಗಾಢ ಆರಾಧನೆ ಕಡಿಮೆಯಾಗುತ್ತದೆ. ಮಗ್ಗುಲಲ್ಲೇ ಮಲಗಿರುವ ಮಡಿದಿ, ಅಂದೆಂದೋ ಮಿಂಚಿನಂತೆ ಬಳಿಸುಳಿದು ಮರೆಯಾದ ಪ್ರೇಯಸಿಯಂತೆ ಕಾಡಬಲ್ಲಳೇ? ಒಂದೊಂದು ದಿನವನ್ನೂ ಎಣಿಸುತ್ತಾ, ಕಾದು ಬರಮಾಡಿಕೊಂಡ ಅವಳ ಹುಟ್ಟಿದ ದಿನದಂದು ಎಂದೂ ಹೋಗದ ದೇವಸ್ಥಾನಕ್ಕೆ ಹೋಗಿ "ಅವಳು ಖುಷಿಯಾಗಿರಲಿ ದೇವರೇ" ಎಂದು ಕಣ್ಮುಚ್ಚಿ ಪ್ರಾರ್ಥಿಸುವ ಆ ನಿರ್ಮಲ ಕ್ಷಣ ಮುಗಿದೇ ಹೋಗುತ್ತದೆ. ಸಿಕ್ಕುವುದು ಹಾಗೂ ದಕ್ಕುವುದು.. ಇವೆರೆಡರ ನಡುವಿನ ವ್ಯತ್ಯಾಸ ನಿನಗೆ ಗೊತ್ತಿಲ್ಲ ಹುಚ್ಚಾ..  ಪ್ರೀತಿಸಿದವರು ಜೊತೆಗಿಲ್ಲವೆನ್ನುವುದು ಅವರನ್ನು ಅಪಾರವಾಗಿ ಪ್ರೀತಿಸುವುದಕ್ಕೆ ನಿನಗಿರುವ ದಿವ್ಯ ನೆಪ. ನಿಜ ಹೇಳಬೇಕೆಂದರೆ ಅವಳೇನಾದರೂ ಸಿಕ್ಕಿದ್ದರೆ ಎಷ್ಟು ಪ್ರೀತಿಸುತ್ತಿದ್ದೆಯೋ ಅದಕ್ಕಿಂತ ಹತ್ತು ಪಟ್ಟು ಮಿಗಿಲಾಗಿದೆ ನಿನ್ನೀ ಪ್ರೇಮ.. ಪ್ರೀತಿ ಹಾಗೂ ಪ್ರೀತಿಸುವವರು- ಇವೆರೆಡೂ ಒಟ್ಟಾಗಿರುವ ಸಂದರ್ಭಗಳು ತುಂಬಾ ಕಡಿಮೆ.

                  **************

ಮೊದಲೇ ಹೇಳಿಬಿಡ್ತೀನಿ, ನೀನು ಹೀಗೆ ಅವಳನ್ನು ಹಚ್ಚಿಕೊಂಡಿರುವುದರಲ್ಲಿ ಅವಳ ತಪ್ಪು ಕೊಂಚವೂ ಇಲ್ಲ. ಸಂತೆಯ ಜಂಗುಳಿಯಲ್ಲಿ ಎದುರಿಗೆ ಬರುವ ಸಾವಿರಾರು ಅನಾಮಿಕರಂತೆಯೇ ಕಣ್ಮುಂದೆ ಹಾದವಳು ಅವಳು; ಆದರೆ ಅವಳ ಹೆಸರು ತಿಳಿದುಕೊಂಡು, ಅವಳು ನಿನಗೆ ಹೀಗೆ ಎದುರಾಗಿ ಸಿಕ್ಕ ಕಾಕತಾಳೀಯಕ್ಕೆ ಯಾವ್ಯಾವುದೋ ಜನ್ಮಗಳ ಲಿಂಕ್ ಕೊಟ್ಟು, ಅವಳು ಹೆಜ್ಜೆ ಹಾಕುತ್ತಿರುವ ಹಾದಿಯ ಆಚೆ ತುದಿ ನಿನ್ನ ಬದುಕಿನ ಬಾಗಿಲೇ ಎಂದು ಭ್ರಮಿಸಿ, ಈ ಎಲ್ಲ ಪ್ರಹಸನಗಳಿಗೂ 'ಪ್ರೀತಿ' ಎಂಬ ಚಂದದ ಹೆಸರುಕೊಟ್ಟ ಅಧಿಕ ಪ್ರಸಂಗಿ ನೀನೇ. ಅವಳು ಅಂತಹಾ ಸುಂದರಿಯೇನಲ್ಲ; ಆದರೆ ಹಾಗಂತ ಒಪ್ಪಿಕೊಳ್ಳುವುದಕ್ಕೆ ನಿನಗಿಷ್ಟವಿಲ್ಲ. ಅಥವಾ ಆ ಸತ್ಯ ನಿನಿಗೆ ಗೊತ್ತೇ ಇಲ್ಲ! ಹೆಣ್ಣಿನ ಸ್ನೇಹವೆಂದರೇನೆಂದೇ ಗೊತ್ತಿಲ್ಲದ, ಅವಳ ಮುಗುಳ್ನಗು ಮಾತ್ರದಿಂದಲೇ ಹುಟ್ಟಿಕೊಳ್ಳುವ ಆ ನವಿರು ಪುಳಕಗಳನ್ನು ಹಿಂದೆಂದೂ ಅನುಭವಿಸಿರದ, ಮುಡಿದ ಹೆಣ್ಣಿನಿಂದಾಗಿ ಹೂವು ಸುಂದರವಾಯಿತೇ ಹೊರತು, ಹೂವಿನಿಂದ ಹೆಣ್ಣು ಸುಂದರವಾಗಿದ್ದಲ್ಲವೆನ್ನುವ ಪರಮ ಸತ್ಯವನ್ನು ಈಗಷ್ಟೇ ತಿಳಿದುಕೊಳ್ಳುತ್ತಿರುವ ನಿನ್ನೀ ಗಂಡು ಹೃದಯವನ್ನು ಪ್ರೀತಿಯಲ್ಲಿ ಬೀಳಿಸುವವಳು ತ್ರಿಪುರ ಸುಂದರಿಯೇ ಆಗಿರಬೇಕಿಲ್ಲ,
ಆಕೆ ಹೆಣ್ಣಾಗಿದ್ದರೆ ಸಾಕು.

ಅವಳು ಮಾಮೂಲಾಗಿಯೇ ನೋಡಿದಳು. ನಿನ್ನ ಎದೆಯಲ್ಲಿ ಮಿಂಚು ಹರಿಯಿತು. ಅವಳು ತನ್ನ ಕಪ್ಪು ಮಲ್ಲಿಗೆಯಂತಹಾ ಜಡೆಯನ್ನು ಕತ್ತಿನ ಮುಂಭಾಗದಲ್ಲಿ ಇಳಿಬಿಟ್ಟುಕೊಂಡಳು. ನಿನ್ನ ಹೃದಯ ಬಡಿತವೊಂದನ್ನು ಸ್ಕಿಪ್ ಮಾಡಿತು. ಅವಳು ಸೀರೆಯುಟ್ಟು ಕಣ್ಮುಂದೆ ಹಾದಳು. ಅಂದು ರಾತ್ರೆಯಿಡೀ ನೀನು ನಿದ್ರಿಸಲಿಲ್ಲ. ಅವಳೊಮ್ಮೆ ನಿನ್ನೆಡೆಗೆ ನೋಡಿ ಮುಗುಳ್ನಕ್ಕಳು...

ಆ ದಿವ್ಯ ಘಳಿಗೆಯನ್ನು ನೀನು ಮತ್ತೆಂದೂ ಮರೆಯಲೇ ಇಲ್ಲ.

                  **************

ಹೇಗೆ ತಾನೇ ಒಪ್ಪಿಯಾಳು ನಿನ್ನ?

ನಿನಗೆ ಗೊತ್ತಾ.. ಅವಳ ಕನಸಿನಲ್ಲಿ ಬರುವ ರಾಜಕುಮಾರ ಅದೆಷ್ಟು ಸುಂದರನೆಂಬುದು? ಬಡತನವನ್ನೇ ಹಾಸಿ ಹೊದ್ದವಳು ಕಲ್ಪನೆಯಲ್ಲಿ ಕಟ್ಟಿಕೊಂಡ ಅರಮನೆಯ ಒಂದು ಮೆಟ್ಟಿಲನ್ನೂ ಕಟ್ಟಲಾರೆ ನೀನು! ಇದ್ದಿರಬಹುದು, "ನಂಗೆ ಪಪ್ಪ ಇಲ್ಲ" ಎಂದು ವಿಷಾದದಿಂದ ಹೇಳಿಕೊಂಡವಳ ಎದೆಯೊಳಗೆಲ್ಲೋ ನಿನ್ನ ಬಗ್ಗೆ ಸೆಳೆತದ ಅಲೆಯೊಂದು ಎದ್ದಿರಬಹುದು. ಅಂದ ಮಾತ್ರಕ್ಕೇ ಅದು ಪ್ರೇಮವೇ ಆಗಬೇಕಿಲ್ಲ. ಅವಳನ್ನು ಪ್ರೀತಿಸುವವರು ಹಲವರು. ಆದರೆ ಅವಳಿಂದ ಪ್ರೀತಿಸಲ್ಪಟ್ಟವರು? ಅಷ್ಟಕ್ಕೂ ಅವಳು ಅರ್ಥವಾಗಿದ್ದಾದರೂ ಯಾರಿಗೆ ಹೇಳು? ಕಾಳಜಿಯ ನಾಟಕವಾಡಿ, ಪ್ರೀತಿಸುವೆನೆಂದು ನಂಬಿಸಿ ಘಾಸಿಗೊಳಿಸಿದ ಅವನಿಗೆ ಅರ್ಥವಾದಳೇ? ಹಿಂದಿನಿಂದ ಆಡಿಕೊಂಡು ನಕ್ಕ ಗೆಳೆಯ-ಗೆಳತಿಯರಿಗೆ ಅರ್ಥವಾದಳೇ? ತಂದೆಯಿಲ್ಲದ ಅವಳು ತಮಗೇ ಸೇರಬೇಕೆಂದು ಹಕ್ಕು ಚಲಾಯಿಸಿದ ಬಂಧುಗಳಿಗೆ ಅರ್ಥವಾದಳೇ?

ಬಿಡು.. ಅವಳು ಯಾರಿಗೂ ದಕ್ಕುವಳಲ್ಲ. ಅವಳ ಪಾಡು ಅವಳಿಗಿರಲಿ..

                  **************

ಫೋನಿನಲ್ಲಿರುವ, ಪ್ರೊಫೈಲ್ ಫೋಟೋ ಕಾಣದ ಅವಳ ವಾಟ್ಸಾಪ್ ಖಾತೆ ಹಾಗೇ ಉಳಿದುಬಿಡಲಿ. ಎಲ್ಲ ಡಿಲೀಟ್ ಮಾಡಿದ ಮೇಲೂ ಗ್ಯಾಲರಿಯ ಮೂಲೆಯೊಂದರಲ್ಲಿ ಉಳಿದು ಹೋದ, ಅವಳು ನಗುತ್ತಾ ನಿಂತಿರುವ ಆ ಚಿತ್ರ ಅಳಿಯದಿರಲಿ. ವಿಳಾಸದ ಕಾಲಂನಲ್ಲಿ ನೀನು 'ಅವಳಿಗೆ' ಎಂದು ಬರೆದಿಟ್ಟುಕೊಂಡಿರುವ ಪತ್ರಗಳು ಅವಳನ್ನೆಂದೂ ತಲುಪದಿರಲಿ. ಮುಂದೆಂದೋ ಹುಟ್ಟಲಿರುವ ನಿನ್ನ ಮಗಳಿಗೆ ಇಡಬೇಕಾದ ಅವಳ ಆ ಮುದ್ದು ಹೆಸರು ಅಲ್ಲಿ, ಇಲ್ಲಿ, ಎಲ್ಲೆಲ್ಲಿಂದಲೂ ಕೇಳಿಬಂದು ನಿನ್ನನ್ನು ಕಾಡುತ್ತಿರಲಿ..

ಪ್ರೀತಿಸಿದವಳು ಸಿಗದಿರಲಿ...

-ಅಚಿಸು, ತುಮಕೂರು
9972189131

ಕಥೆ: ನಿರ್ಮಲ ಪ್ರೀತಿ

 



ಯಾವುದೋ ಯೋಚನೆಯಲ್ಲಿ ಮನೆಯತ್ತ ಸಾಗುತ್ತಿದ್ದವಳು ಹತ್ತಿರದಲ್ಲೇ ಕೇಳಿ ಬಂದ ಬುಲೆಟ್ ಸದ್ದಿಗೆ ಅಲ್ಲೇ ನಿಂತಳು. ಆ ಸದ್ದು ಅವಳಿಗೆ ಐದು ವರ್ಷದ ಹಿಂದಿನ ಘಟನೆಯನ್ನು ನೆನಪಿಸಿತ್ತು. ಯಾಕೋ ಅಲ್ಲಿ ನಿಲ್ಲಬೇಕೆಂದು ಅನಿಸದೆ ಮುಂದೆ ಹೆಜ್ಜೆ ಹಾಕ ಹೋದವಳು ಯಾವುದೋ ಬೈಕಿಗೆ ತಾಗಿ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಲವಾದ ಕೈಯ್ಯೊಂದು ಅವಳನ್ನು ಬೀಳದಂತೆ ತಡೆದು ನಿಲ್ಲಿಸಿತ್ತು.

'ಹೇಗಿದ್ದೀಯಾ ದೃಷ್ಟಿ...?' ಮೃದು ದನಿ ಕೇಳಿ ಅಚ್ಚರಿಯಿಂದ ನಿಮಿರಿತು ಅವಳ ಕರ್ಣಗಳು.

'ನಿ.. ನಿ..ನಿರ್ಮಲ್?' ತಡೆ ತಡೆದು ಹೊರ ಬಂದಿತ್ತು ಮಾತು.

'ಹೌದು ನಾನೇ. ನಿನ್ನ ಜೊತೆ ಮಾತನಾಡೋಣ ಎಂದು ಬಂದರೆ, ನೀನು ನಿಲ್ಲದೆ ಓಡುತ್ತಿರುವೆ...' ಅವನು ಆಕ್ಷೇಪಿಸುವಂತೆ ನುಡಿದರೆ,

'ಐ ಯಾಮ್ ಸಾರಿ...' ಎಂದಳು ಅವಳು.

'ಪರ್ವಾಗಿಲ್ಲ ಬಾ...' ಕೈ ಹಿಡಿದು ಬೈಕೇರಲು ಸಹಾಯ ಮಾಡಿದವನು ಬುಲೆಟನ್ನು ಪಾರ್ಕ್ ಕಡೆಗೆ ಟರ್ನ್ ಮಾಡಿದ್ದ.

'ಎಲ್ಲಿಗೆ ಹೋಗುತ್ತಿದ್ದೇವೆ...?'

'ನಿನ್ನ ಜೊತೆ ಮಾತನಾಡಬೇಕು ತುಂಬಾ. ಅದಿಕ್ಕೆ ಪ್ರಶಾಂತವಾದ ಜಾಗ ಹುಡುಕುತ್ತಿದ್ದೇನೆ...' ಅವಳು ಮೌನಿಯಾದಳು. ಅವಳ ಮನಸ್ಸು ಐದು ವರ್ಷಗಳ ಹಿಂದಕ್ಕೋಡಿದ್ದವು.



ಪ್ರೀತಿಗೆ ಕಣ್ಣಿಲ್ಲ ನಿಜ ಆದರೆ ಪ್ರೀತಿಸುವವರಿಗೆ ಕಣ್ಣಿಲ್ವಾ..? ಎಂಬ ಮಾತೊಂದಿದೆ. ಆದರಿಲ್ಲಿ, ಪ್ರೀತಿಗೆ ಮಾತ್ರ ಅಲ್ಲ ತಾನು ಪ್ರೀತಿ ಮಾಡುತ್ತಿರೋ ಹುಡುಗಿಗೂ ಕಣ್ಣಿಲ್ಲ ಎಂಬ ಸತ್ಯ ತಿಳಿಯದ ನಿರ್ಮಲ್, ಪ್ರೀತಿಗೆ ಬಿದ್ದಿದ್ದ..!!

ದಿನವಿಡೀ ಗೆಳೆಯರು, ಮೋಜು-ಮಸ್ತಿಯೆಂದು ತಿರುಗಾಡುವ ಅವನಿಗೆ ಆಕಸ್ಮಿಕವಾಗಿ ಕಣ್ಣಿಗೆ ಕಂಡಿದ್ದಳು ದೃಷ್ಟಿ. ಹುಟ್ಟು ಅಂಧೆಯಲ್ಲದ ದೃಷ್ಟಿ, ಅವಳ ಜೀವನದಲ್ಲಿ ನಡೆದ ಘಟನೆಯ ಕಾರಣದಿಂದ ಅಂಧೆಯಾಗಿದ್ದಳು.

ಅವಳನ್ನು ಮನಸಾರೆ ಪ್ರೀತಿಸುತ್ತಿದ್ದವನು ನಿಜ ತಿಳಿದ ನಂತರವೂ ಅದನ್ನು ಮುಂದುವರಿಸಿದ್ದ.

ದಿನಗಳು ಉರುಳಿ ತಿಂಗಳು ಕಳೆದರೂ ಅವಳಲ್ಲಿ ತನ್ನ ಪ್ರೀತಿ ಹೇಳುವ ಧೈರ್ಯ ಬಂದಿರಲಿಲ್ಲ. ಕೊನೆಗೊಂದು ದಿನ ಧೈರ್ಯ ಮಾಡಿ ಅವಳ ಮುಂದೆ ನಿಂತೇ ಬಿಟ್ಟಿದ್ದ.

'ಹ್.. ಹಾಯ್, ಐ ಯಾಮ್ ನಿರ್ಮಲ್..' ತನ್ನ ಪರಿಚಯ ಹೇಳಿಕೊಂಡ.

'ಹೇಳಿ ಏನಾಗ್ಬೇಕು..?' ಬೇಬಿ ಸಿಟ್ಟಿಂಗಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಅಂದು ತಡವಾಗಿತ್ತು.

'ಐ... ಐ ಲವ್ ಯೂ' ತಡೆ ತಡೆದು ನೇರವಾಗಿ ಹೇಳಿದ್ದ. ಅವನ ಮಾತು ಕೇಳಿ ಒಂದು ಕ್ಷಣ ಗಾಬರಿಗೊಂಡವಳಂತೆ ನಿಂತ ದೃಷ್ಟಿ,

'ವ್ಹಾಟ್...?' ಎಂದಿದ್ದಳು.

'ನನಗೆ ನಿಮ್ಮ ಬಗ್ಗೆ ಎಲ್ಲಾ ಗೊತ್ತು. ಆದರೂ ನನಗೆ ನಿಮ್ಮನ್ನು ಪ್ರೀತಿಸದೆ ಇರಲು ಸಾಧ್ಯವಿಲ್ಲ. ನಾನು ನಿನಗೆ ಬಾಳು ಕೊಡುತ್ತೇನೆ, ದಿನ ನಿತ್ಯ ಈ ರೀತಿ ಕೆಲಸ ಮಾಡೋ ಯಾವುದೇ ಅಗತ್ಯ ಇಲ್ಲ. ಆ ರೀತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ...' ಪಟಪಟನೇ ಹೇಳಿದ ಮಾತು ಕೇಳಿ ಅವಳಿಗೆ ಕೋಪ ಬಂದಿದ್ದವು.

'ನೋಡಿ ಮಿಸ್ಟರ್, ನನಗೆ ಈ ಕೆಲಸ ಅಗತ್ಯ ಎಂದು ನಾನು ಮಾಡುತ್ತಿಲ್ಲ. ನನ್ನ ತಂದೆಗೆ ನನ್ನನ್ನು ನೋಡಿಕೊಳ್ಳೋ ತಾಕತ್ತಿದೆ, ಅದು ಬೇರೆ ವಿಷಯ. ನಾನು ಈ ಕೆಲಸ ನನ್ನ ಮನದ ತೃಪ್ತಿಗಾಗಿ ಮಾಡುತ್ತಿದ್ದೇನೆ, ಮಾತನಾಡುವಾಗ ಯೋಚಿಸಿ ಮಾತನಾಡಿ.

ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದು ಆ ನಂತರದ ಮಾತಲ್ವಾ..? ಮೊದಲು ನೀವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ಎಷ್ಟು ದಿನ ಎಂದು ಹೆತ್ತವರ ದುಡಿಮೆಯಲ್ಲಿ ಬದುಕ್ತೀರಿ..? ಮೊದಲು ನೀವು ನಿಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನಾದರೂ ಸಾಧಿಸಿ, ಆ ಮೇಲೆ ಬನ್ನಿ ನನ್ನ ಮುಂದೆ.

ಇರುವುದು ಒಂದು ಜೀವನ ಯಾಕೆ ಅದನ್ನು ಈ ರೀತಿ ವೇಸ್ಟ್ ಮಾಡ್ಕೋತಿದ್ದೀರಿ...??

ಬಿಡಿ ಜಾಗ, ನನಗೆ ತಡವಾಗಿದೆ. ನಿಮ್ಮ ಜೊತೆ ಹರಟೆ ಹೊಡೆಯಲು ಸಮಯವಿಲ್ಲ...' ಅವನ ಜೀವನದ ಬಗ್ಗೆ ಗೆಳತಿಯರಿಂದ ತಿಳಿದಿದ್ದ ದೃಷ್ಟಿ ಬೇಕೆಂದೇ ಆ ರೀತಿಯ ಮಾತುಗಳನ್ನಾಡಿದ್ದಳು. ಅವಳ ಮಾತುಗಳು ಚಾಟಿ ಏಟಿನಂತೆ ಅವನ ಮನದ ಮೇಲೆ ಬೀಸಿ ಹೋಗಿದ್ದವು.

ಬೇಸರವೂ ಅಲ್ಲ, ಕೋಪವೂ ಅಲ್ಲ ಎಂಬಂತಹ ಹತಾಶೆಯ ಮುಖ ಹೊತ್ತು ಅಲ್ಲಿಂದ ವಾಪಾಸ್ಸಾಗಿದ್ದ ನಿರ್ಮಲ್.



'ದೃಷ್ಟಿ... ದೃಷ್ಟಿ, ಏನು ಯೋಚಿಸ್ತಿದ್ದೀಯಾ?' ಬೈಕ್ ಪಾರ್ಕ್ ಮಾಡಿ ಅವಳನ್ನು ಕೂಗುತ್ತಿದ್ದ ನಿರ್ಮಲ್.

'ಅಹ್...' ಎಂದವಳು ವಾಸ್ತವಕ್ಕೆ ಬಂದಿದ್ದಳು.

'ಏನ್ ಯೋಚಿಸ್ತಿದ್ದೆ..? ಇಳಿ ಕೆಳಗೆ, ಪಾರ್ಕ್ ಬಂತು' ಕೈ ಹಿಡಿದು ಇಳಿಯಲು ಸಹಾಯ ಮಾಡಿದ ನಿರ್ಮಲ್ ತಾನೂ ಇಳಿದಿದ್ದ.

'ನಿರ್ಮಲ್, ಯಾವಾಗ ಬಂದೆ ನೀನು ದಿಲ್ಲಿಯಿಂದ?' ಮೆಲ್ಲಗೇ ಕೇಳಿದ್ದಳು.

'ನಿನ್ನೆಯಷ್ಟೇ ಬಂದೆ...' ಎಂದವನು,

'ಈ ಕಡೆ ಬಾ...' ಎನ್ನುತ್ತಾ ಅವಳ ಕೈ ಹಿಡಿದು ನಡೆಸಿದ್ದ. ಪಾರ್ಕ್ ಒಳಗೆ ಬಂದವನು ಯಾರಿಲ್ಲದ ಪ್ರಶಾಂತ ಜಾಗವೊಂದನ್ನು ನೋಡಿ ಅವಳನ್ನು ಅಲ್ಲಿಗೆ ಕರೆ ತಂದು ಬೆಂಚ್ ಮೇಲೆ ಕೂರಿಸಿದ್ದ.

'ಹೇಗಿದ್ದೀಯಾ ದೃಷ್ಟಿ..?' ಕೇಳಿದ.

'ಹೀಗಿದ್ದೀನಿ ನೋಡು...' ಎಂದಾಗ ನಗು ಬೀರಿದ ಅವನು.

'ಯಾಕೆ ಸಂಕೋಚ ಪಡ್ತಿದ್ದೀಯಾ..? ಅಂದು ಅಷ್ಟೆಲ್ಲಾ ಮಾತನಾಡಿದೆ. ಇಂದು ನೋಡಿದ್ರೆ...' ಅವಳು ಉತ್ತರಿಸಲಿಲ್ಲ. ಕಂಗಳಲ್ಲಿ ತೆಳುವಾಗಿ ನೀರಾಡಿತು.

'ಅರೇ, ಯಾಕೆ ಅಳ್ತಿದ್ದೀಯಾ..?' ಕಣ್ಣೊರೆಸುತ್ತ ಕೇಳಿದ.

'ನಾನಂದು ಹಾಗೇ ಮಾತನಾಡಬಾರದಿತ್ತು. ಐ ಯಾಮ್ ಸಾರಿ...' ಸಣ್ಣಗೆ ನುಡಿದಳು.

'ಇಲ್ಲ. ನಿಜ ಹೇಳಬೇಕು ಅಂದ್ರೆ ನೀನಂದು ಹಾಗೇ ಮಾತನಾಡಿದ್ದೇ ಸರಿ ಇತ್ತು. ಐ ಸ್ವೇರ್ ಕಣೋ, ನನಗೆ ನಿನ್ನ ಮೇಲೆ ಯಾವುದೇ ಕೋಪವಿಲ್ಲ. ಅಂದು ನಿನ್ನ ಮಾತು ಕೇಳಿ, ನೀನು ನನ್ನ ಹಂಗಿಸ್ತಿದ್ದೀಯಾ ಅಂತ ಒಂದು ಬಾರಿ ಕೋಪ ಬಂದಿದ್ದು ನಿಜ. ಆದರೆ ಕುಳಿತು ಯೋಚಿಸಿದಾಗ ನಿನ್ನ ಮಾತು ನಿಜವಾಗಿತ್ತು. ಅದೇ ಮಾತನ್ನು ನಮ್ಮ ಮನೆಯಲ್ಲಿ, ಫ್ಯಾಮಿಲಿ ಯಲ್ಲಿ ಸಾಕಷ್ಟು ಮಂದಿ ಹೇಳಿದ್ದಾರೆ ನನಗೆ. ಆದರೆ ಆಗ ಆ ಮಾತು ತಲೆಗೆ ಹೋಗಿರಲಿಲ್ಲ. ಎಲ್ಲದಕ್ಕೂ ಒಂದು ಸಮಯ ಅನ್ನುವುದು ಬರಬೇಕು ಅಂತಾರಲ್ಲ ಹಾಗೇ...!

ನಿನಗೊಂದು ಸತ್ಯ ಹೇಳ್ಲಾ..?' ಅವಳ ಗಲ್ಲವನ್ನೆತ್ತಿ ಕೇಳಿದ.

'ಏನು...?'

'ನಿಜ ಹೇಳಬೇಕು ಅಂದ್ರೆ ನನ್ನ ಮೇಲೆ ನಿನ್ನ ಮಾತುಗಳು ಅಷ್ಟೇನೂ ಪ್ರಭಾವ ಬೀರಲಿಲ್ಲ. ನಿನ್ನ ಜೀವನ ನನ್ನ ಮೇಲೆ ಪ್ರಭಾವ ಬೀರಿತು. ನನ್ನನ್ನು ನಿನಗೆ ಹೋಲಿಸಿದರೆ, ನನ್ನ ಎಲ್ಲಾ ಅಂಗಾಂಗಗಳು ನೆಟ್ಟಗಿದೆ. ಆದರೆ ಯೋಚನೆಯಲ್ಲಿ, ಜೀವನ ಶೈಲಿಯಲ್ಲಿ ನೀನು ನನಗಿಂತ ಉತ್ತಮ ಜೀವನ ನಡೆಸುತ್ತಿದ್ದೆ. ನಿನಗೆ ಕಣ್ಣು ಕಾಣಿಸೋದಿಲ್ಲ, ಅಂದ್ರೆ ಏನಾಯಿತು..? ನೀನು ಬೇರೆಯವರಿಗಿಂತ ಯಾವುದರಲ್ಲಿ ಕಡಿಮೆ ಇದ್ದೀಯಾ...? ಹೇಳು.

ಇದೇ ಜೀವನ ನನಗೆ ಸ್ಫೂರ್ತಿ ನೀಡಿತು. ನಾನೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹುಟ್ಟಿಸಿತು. ಇವತ್ತು ನಾನು ಏನೇ ಆಗಿದ್ದರೂ ನಿನ್ನ ಆ ಮಾತು ಮತ್ತು ನಿನ್ನ ಈ ಜೀವನವೇ ಸ್ಫೂರ್ತಿ ನನಗೆ. ನೀನಿಲ್ಲದಿದ್ದರೆ ಇವತ್ತೂ ನಾನು ಅದೇ ಹಳೆಯ ನಿರ್ಮಲ್ ಆಗಿರುತ್ತಿದ್ದೆನೇ ವಿನಃಹ, ಇಂದಿನ ಯೂತ್ ಐಕಾನ್ ನಿರ್ಮಲ್ ಆಗ್ತಿರಲಿಲ್ಲ...!' ಅವನ ಮಾತಿಗೆ ಕಿವಿಯಾಗಿದ್ದವಳು.

'ಇಲ್ಲ ನಿರ್ಮಲ್, ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ಇಲ್ಲಿ ನಾನು ಕೇವಲ ನಿಮಿತ್ತ ಮಾತ್ರ. ನಾನಲ್ಲದಿದ್ದರೆ ಇನ್ಯಾರೋ ಇರುತ್ತಿದ್ದರು. ಆದರೆ ಇವತ್ತು ನೀನು ಆ ಸ್ಥಾನದಲ್ಲಿ ಇದ್ದೀಯಾ ಅಂದ್ರೆ ಅದು ನಿನ್ನ ಶ್ರಮಕ್ಕೆ ದೊರೆತ ಫಲ. ನೀನು ಸುಮ್ಮನೇ ನನ್ನ ಹೊಗಳುತ್ತಿರುವೆ ಅಷ್ಟೇ...!' ಕ್ರೆಡಿಟ್ ಬೇಕಿರಲಿಲ್ಲ ಅವಳಿಗೆ.

'ಸರಿ, ನಿನಗೆ ಕ್ರೆಡಿಟ್ ಬೇಡದಿದ್ದರೆ ನಾನು ಹೊಗಳೋದಿಲ್ಲ. ಆದರೆ ಈ ಬಾರಿ ನಮ್ಮ ಮದುವೆಯ ದಿನಾಂಕ ನೀನು ಮುಂದೂಡುವಂತಿಲ್ಲ. ನಿನ್ನ ಆಸೆಯಂತೆ ಈಗ ನೀನೇ ಸ್ವಂತ ಬೇಬಿ ಸಿಟ್ಟಿಂಗ್ ಕೇರ್ ನಡೆಸ್ತಿದ್ದೀಯಾ. ಇದೇ ದಿನಕ್ಕಾಗಿ ತಾನೇ ಕಾದಿದ್ದು...?

ಅಂದು ನೀನು ಹೇಳಿದಂತೆ ನಾನು ನನ್ನ ಜೀವನದಲ್ಲಿ ಒಂದು ಹಂತಕ್ಕೆ ಸಾಧಿಸಿ ನಿನ್ನ ಮುಂದೆ ನಿಂತಾಗ ನೀನು ನನ್ನಲ್ಲಿ ಕೇಳಿಕೊಂಡಿದ್ದೆ, ನಾನೂ ಸ್ವಂತದಾಗಿ ಒಂದು ಬೇಬಿ ಸಿಟ್ಟಿಂಗ್ ಕೇರ್ ಸಂಸ್ಥೆ ನಡೆಸಬೇಕು. ಅಲ್ಲಿಯವರೆಗೆ ನೀವು ಕಾಯುವಿರಿ ಎಂದಾದರೆ ನನಗೇನೂ ತೊಂದರೆ ಇಲ್ಲ ಎಂದು. ನಿನಗೆ ಕೊಟ್ಟ ಮಾತಿನಂತೆ ಅಂದು ಹೋದವನು ಇಂದು ಮರಳಿ ಬಂದಿದ್ದೇನೆ, ಈಗ ನಿನ್ನಾಸೆಯೂ ಈಡೇರಿದೆ. ಈಗಲಾದರೂ ಒಪ್ಪಿಗೆ ಕೊಡು...' ಪುಟ್ಟ ಮಗು ಚಾಕಲೇಟಿಗೆ ರಚ್ಚೆ ಹಿಡಿಯುವಂತೆ ಕೇಳಿದ ಅವನ ಮಾತಿಗೆ ನಗು ಬಂದಿತ್ತು ಅವಳಿಗೆ.

'ಸರಿ. ನಾಳೆ ಬಂದು ಮನೆಯಲ್ಲಿ ಮಾತನಾಡಿ... ' ಕೊನೆಗೂ ಒಪ್ಪಿಗೆ ನೀಡಿದ್ದಳು.

'ಯಾಹ್... ' ಸಂತಸದಿ ಕೇಕೆ ಹಾಕಿ ಮೇಲಕ್ಕೆ ಜಿಗಿದಿದ್ದ ನಿರ್ಮಲ್.

ಒಬ್ಬರಿಗೊಬ್ಬರು ಹೆಗಲಾಗಿ ನಡೆಯುವೆವು ಎಂಬ ನಿರ್ಧಾರಕ್ಕೆ ಇಬ್ಬರ ಒಪ್ಪಿಗೆಯ ಮುದ್ರೆಯೂ ಬಿದ್ದಿತ್ತು. ನಿರ್ಮಲ್- ಪ್ರೀತಿ ಮತ್ತು ಯೋಚನಾ ಶಕ್ತಿ ದೃಷ್ಟಿಯಾದರೆ, ಅವಳ ಕಣ್ಣ ದೃಷ್ಟಿ ಅವನಾಗಿದ್ದ.

ಜೀವನದುದ್ದಕ್ಕೂ ಕೈ ಹಿಡಿದು ನಡೆಸುತ್ತೇನೆ ಎಂದು ನುಡಿದ ಅವನ ಮಾತು ಇಂದು ನಿಜವಾಗುತ್ತಿದೆ ಎಂಬ ಹರ್ಷಕ್ಕೆ ಅವನ ಗಂಟಲಿನಿಂದ ಮಾತೇ ಹೊರಡುತ್ತಿಲ್ಲ.

'ನಿರ್ಮಲ್.. ಆಗಲೇ ತಡವಾಗಿದೆ. ಮನೆಗೆ ಹೋಗೋಣ್ವಾ..?' ಅವಳ ಪ್ರಶ್ನೆಗೆ ಸರಿಯೆಂದು ತಲೆದೂಗಿ ಅವಳನ್ನು ಕೈ ಹಿಡಿದೇ ನಡೆಸಿದ್ದ ಬುಲೆಟಿನೆಡೆಗೆ. ಜೊತೆಯಾಗಿ ಹೆಜ್ಜೆ ಹಾಕಿದ ಗುರುತಿಗೆಂಬಂತೆ ನಡೆದು ಬಂದ ದಾರಿಯಲ್ಲಿ ಮೂಡಿದ ಹೆಜ್ಜೆ ಗುರುತು ಅವರ ಪ್ರೀತಿಗೆ ಅಸ್ತು ಎಂದಿತ್ತು.

ಜೋಡಿಯನ್ನು ಹೊತ್ತ ಬುಲೆಟ್ ಮನೆಯೆಡೆಗೆ ಸಾಗಿತ್ತು

-ಅರೆಯೂರು ಚಿ.ಸುರೇಶ್
ತುಮಕೂರು

ಸಣ್ಣ ಕಥೆ: ಆತ್ಮದ ಸ್ವಗತ

 

 



ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ ದಾಸನ ಕಟ್ಟೆಯೆತ್ತ ಹರಿಯುತ್ತಿತ್ತು.

          ಅವತ್ತಿನ ಮಧ್ಯಾಹ್ನ ಯಮಕರೆದ ಕೂಗಿನಂತಹ ಕೂಗೊಂದು ತಲೆಯೊಳಗೆ ಸಿಡಿದು ಈ ಲೋಕವೇ ಬೇಡವಾಗಿ ಮನೆಯಲ್ಲಿದ್ದ ದನದ ಹಗ್ಗವೊಂದನ್ನು ಹೆಗಲಿಗೆಸೆದುಕೊಂಡು ಮುದ್ರಾಮಕ್ಕರ ಮಾವಿನ ತೋಪಿನತ್ತ ಹೊರಟು ಬರೀ  ನೆಲದಲ್ಲೇ ಹರಡಿ ನಿಂತ ಮಾವಿನ ಮರಗಳಿರುವ ಆ ತೋಪಿನಲ್ಲಿ ನನ್ನ ಹೆಣದ ಭಾರ ಹೊರುವಂತಹ ಗಟ್ಟಿ ರೆಂಬೆಯ ಮರವನ್ನು ಹುಡುಕುತ್ತಾ ಅಲೆದು ಅಲೆದು ಕೊನೆಗೂ ಸಿಕ್ಕ ದಷ್ಟ ಪುಷ್ಟ ಮಾವಿನ ಮರದ ದಪ್ಪನೆ ಕೊಂಬೆಯೊಂದಕ್ಕೆ ನೇಣು ಹಾಕಿಕೊಂಡು ವಿಲವಿಲ ಒದ್ದಾಡಿ ಸತ್ತು ಹೋದೆ. ನಾನು ಸತ್ತಿದ್ದು ಸಹಿಸಲಾರದೇನೆ ಏನೋ ಎಂಬಂತೆ ಆಕಾಶ ಕಣ್ಣೀರಿನಂತೆ ಮಳೆ ಸುರಿಸಿದ್ದು.        ಮಳೆ ನಿಂತ ಮೇಲೆಯೂ ಕೂಡ ಮರ ನನ್ನ ಸಾವಿಗೆ ಕಣ್ಣೀರು ಸುರಿಸುತ್ತಲೇ ಇತ್ತು ಅದೆಲ್ಲಿಂದಲೋ ಹಾರಿಬಂದ ಕಾಗೆಯೊಂದು ಶವವಾಗಿ ನೇತಾಡುತ್ತಿದ್ದ ನನ್ನ ತಲೆಯ ಮೇಲೆ ಕುಳಿತು ಸ್ಪ್ರಿಂಗಿನಂತಹ ಅದರ ಕೊರಳನ್ನು ಅತ್ತಿತ್ತ ತಿರುಗಿಸಿ ತನ್ನ ಕಪ್ಪು ಕೊಕ್ಕನ್ನು ನನ್ನ ಹಣೆಯ ಮೇಲಿಟ್ಟು ಗಸಗಸನೆ ಕತ್ತಿ ಮನೆಯುವಂತೆ ಆಡಿಸಿತು. ಆಹಾ! ದುರ್ವಿಧಿಯೇ ಬದುಕಿದ್ದಾಗ ಕಾಗೆಯೆಂಬ ಕಾಗೆ ತಲೆಗೆ ಬಡಿದರೆ ಕಷ್ಟಗಳು ಬರುವವಂತೆ ಹಾಗಾದರೆ ಸತ್ತ ನನಗೆ ಇನ್ನೆಷ್ಟು ಕಾಟವೋ ಕಾಣೆನಲ್ಲ.

ಮಳೆ ಸುರಿದ ತಂಪಿಗೇನೋ ಎಂಬಂತೆ ಸಂಜೆ ಸೂರ್ಯ ನಿಂದ ಆಗಸವೆಲ್ಲ ಕೆಮ್ಮುಗಿಲಿನಿಂದ ಕಂಗೊಳಿಸುತ್ತಿತ್ತು ಅಂಥ ದೈವದತ್ತ ಪ್ರಕೃತಿ ಸಹಜ ಕತ್ತಲು ತನ್ನ ಸುತ್ತ ಆವರಿಸುತ್ತಿದ್ದರು ಯಾವ ಬಯವೂ ಇಲ್ಲದೆ ಹೀಗೆ ಜಂಟಿಯಾಗಿ ಮುದ್ರಾಮಕ್ಕನ ಮಾವಿನ ತೋಪಿನಲ್ಲಿ ರಾತ್ರಿಯೆಲ್ಲಾ ಒಬ್ಬನೇ ಕಳೆಯುವ ಅವಕಾಶ ನೆನೆದು ನನ್ನೀ ಸಾಹಸಕ್ಕೆ ನನಗೆ ಬೆರಗಾಯಿತು.

          ದನದ ಹಗ್ಗದಿಂದ ಈ ಮಾವಿನ ಮರದ ರೆಂಬೆಗೆ ಸುತ್ತಿ ಕುಣಿಕೆಯ ಕೊರಳಿಗೆ ಸುತ್ತಿಕೊಂಡು ಸುಮ್ಮನೆ ಕೆಳಗೆ ಜಿಗಿದು ಗಂಟಲ ನರಗಳು ಉಬ್ಬಿ ಬಿಗಿಯಾದ ಹಗ್ಗ ಹಿಡಿತದಿಂದ ವಿಲವಿಲ ಒದ್ದಾಡುತ್ತಾ ಪ್ರಾಣ ಬಿಡುವಾಗಲೂ ಕೂಡ ಈ ಭೂಮಿಯ ಯಾವೊಬ್ಬ ನರಪಿಳ್ಳೆಯೂ ನೆನಪಾಗಲಿಲ್ಲವಲ್ಲ ನನಗೆ ಆತ್ಮಹತ್ಯೆಗೆ ನಿರ್ಧರಿಸುವುದು ಒಂದು ಸಾಹಸ.

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನವಾದರೂ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡುವಷ್ಟು ದಿವ್ಯವಾಗಿ ನೆಮ್ಮದಿಯಿಂದ ಒದ್ದಾಡುತ್ತಾ ಇನ್ನೇನು ನಿಲ್ಲುವ ಉಸಿರಿಗಾಗಿ ಕಾಯುವುದು ಸಮಾಧಿಯ ಪರಮ ಸಾಹಸ. ಅಂತಹ ಸಮಾಧಿಯನ್ನು ಹೊಂದಿದ ನಾನು ಖಂಡಿತ ಯಾವೊಬ್ಬ ಋಷಿ ಮುನಿಗೂ ಕಮ್ಮಿಯಿಲ್ಲವೆಂಬುದು ಮನದಟ್ಟಾಗಿ ನನ್ನ ಬಗ್ಗೆಯೇ ನನಗೆ ಹೆಮ್ಮೆಯೆನಿಸುತ್ತಿತ್ತು.

ಕಗ್ಗತ್ತಲಿನಲ್ಲಿ ಹೀಗೆ ಅನಾಥ ಹೆಣವಾದುದ್ದಕ್ಕೆ ಯಾವ ದುಃಖವೂ ಇಲ್ಲದೆಯೇ ನಿರಾಳವಾಗಿ ಕಾಲ ಕಳೆಯುತ್ತಿದ್ದರೆ ಬೆಳಗಿನ ಜಾವ ಮೂಡಣದಿ ಮೂಡಿದ ಭಾಸ್ಕರ ಇಡೀ ಮಾವಿನ ತೋಪಿಗೆ ನನ್ನ ಹೆಣವನ್ನು ತೋರಿಸಿದ.

ಅಂದು ನಾನು ಸತ್ತ ದಿನದ ಮೊದಲ ಬೆಳಗು ಸತ್ತ ಹಬ್ಬ! ಬದುಕಿದ್ದಾಗ ಎಂದಿಗೂ ಜನರ  ಚರ್ಚೆಗೆ ಗ್ರಾಸವಾಗದ ನಾನು ಸತ್ತ ಮೇಲೆ ಈ ಬೆಳಗಿನಲ್ಲಿ ಖಂಡಿತವಾಗಿಯೂ ಊರಿನವರಿಗೆಲ್ಲಾ ಚರ್ಚಾಸ್ಪದ ವಿಷಯವಾಗಲಿದ್ದೇನೆಂಬ ಖುಷಿಯ ತಳಮಳದ ಜೊತೆಗೆ ಯಾರ್ಯಾರು ಏನೇನೆಲ್ಲಾ ಅಂದು ಕೊಳ್ಳ ಬಹುದೆಂದು ಯೋಚಿಸತೊಡಗಿದೆ.

ಬೆಳಗಿನ ಬಹಿರ್ದೆಸೆಗೆಂದು ಅತ್ತ ಬಂದಿದ್ದ ವಡ್ಡರ ಗ್ಯಾಸ್ ದೊಡ್ಡನ ಕಣ್ಣಿಗೆ ನನ್ನ ಶವ ಬಿತ್ತು ವಿಚಿತ್ರವಾಗಿ ಗಾಬರಿಗೊಂಡ ಗ್ಯಾಸ್ ದೊಡ್ಡ ಸ್ವಲ್ಪ ತುಸು ಮುಂದಕ್ಕೆ ಬಾಗಿ ಕ್ಷಣ ನಿಂತು ನನ್ನ ಶವದತ್ತಲೇ ದಿಟ್ಟಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆಗಳನ್ನಿಡುತ್ತಾ ಮೆಲ್ಲನೆ ಸುಮಾರು ಹತ್ತು ಮಾರುಗಳಷ್ಟು ನನ್ನ ಶವದ ಹತ್ತಿರ ಬಂದವನು ತನ್ನ ಮುಖವನ್ನು ಭೀಭತ್ಸ ಭಾವದಲ್ಲಿ ವಿಕೃತಗೊಳಿಸಿಕೊಂಡು ಎದುಸಿರು ಬಿಡುತ್ತಾ ವಾಪಾಸ್ಸು ತಿರುಗಿ ಎದ್ದು-ಬಿದ್ದು ಓಡತೊಡಗಿದ ಅವನ ಈ ದಯನೀಯ ಸ್ಥಿತಿ ನನಗೆ ನಗು ಬರಿಸುತ್ತಿತ್ತು.

ಅವನು ಓಡಿಹೋಗಿ ಊರವರಿಗೆ ನನ್ನ ಸಾವಿನ ಸುದ್ದಿ ಮುಟ್ಟಿಸುತ್ತಿದ್ದಂತೆ ನನ್ನ ಹುಡುಗಿ ಓಡಿ ಬರಬಹುದು ಬಂದು ಗೊಳೋ ಎಂದ ಅಳಬಹುದೇ? ಇಲ್ಲ ದೂರದಲ್ಲಿ ನಿಂತು ನೋಡಿ ಸುಮ್ಮನೆ ಹೊರಟು ಹೋಗಬಹುದಾ? ನಿಜಕ್ಕೂ ನನ್ನ ಸಾವು ಅವಳಿಗೆ ಕಣ್ಣೀರು ತರಿಸಬಹುದೇ? ಮನಸ್ಸು ಒಂದು ಕ್ಷಣ ವಿಚಲಿತಗೊಂಡಿತ್ತು. ಮರುಕ್ಷಣವೇ ಎಲ್ಲಾ ಮನವೆಂಬ ಮರ್ಕಟವೇ ಸತ್ತು ಹೆಣವಾದರೂ ನಿನ್ನೀ ಆಸೆ ಹೋಗಲಿಲ್ಲವಲ್ಲ ಎನಿಸಿತು.

ಅಷ್ಟರಲ್ಲಿ ಊರಿನ ಕಡೆಯಿಂದ ಗುಂಪೊಂದು ಮಾವಿನ ತೋಪಿನತ್ತ ಧಾವಿಸುತ್ತಿತ್ತು ಮೂಡಣದ ಭಾಸ್ಕರನ ಎಳೆಬಿಸಿಲ ಝಳ ನನ್ನ ಶವಕ್ಕೆ ರಾಚುತ್ತಿತ್ತು ಗುಂಪು ಹತ್ತಿರವಾಗುತ್ತಿದ್ದಂತೆಲ್ಲಾ ನನ್ನ ಕಣ್ಣುಗಳು ಮಂಜಾಗುತ್ತಿದ್ದವು. . .

                                          

 -ಅರೆಯೂರು ಚಿ.ಸುರೇಶ್ 

7090564603

ಶನಿವಾರ, ಡಿಸೆಂಬರ್ 22, 2018

23-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕಥೆ

ದಿಕ್ಕು ಬದಲಿಸಿದ ಕನಸು

ವಾಸು ರಾತ್ರಿ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಅತ್ತು ಹಾಗೆ ಮಲಗಿದ್ದ. ಅವನ ಕಣ್ಣೀರಿಗೆ ದಿಂಬು ತೋಯ್ದುಹೋಗಿದ್ದವು. ಕಣ್ಣೆಲ್ಲಾ ಕೆಂಪು. ಮುಂಜಾನೆ ಎದ್ದೊಡನೆಯೇ ಅಮ್ಮನಿಗೆ ಸ್ಪೆಶಲ್ ಕ್ಲಾಸ್ ಇದೆ ಎಂದು 8ಗಂಟೆ ಹೊತ್ತಿಗೆ ರೆಡಿ ಆಗಿ ಮನೆಯಿಂದ ಹೊರಬಂದ. ಅಪ್ಪನಿಗೆ ಹೇಳಬೇಕೂ ಅನಿಸಲಿಲ್ಲ. ನೆನ್ನೆ ರಾತ್ರಿ ಆದದ್ದಾದರೂ ಏನು ?

ಮುಂದಿನ ವಾರವೇ ಅವನ ಹುಟ್ಟುಹಬ್ಬವಿತ್ತು, ಅದಕ್ಕಾಗಿ ಬಟ್ಟೆ ಕೊಳ್ಳಲು ಅಕ್ಕನ ಜೊತೆಗೂಡಿದ್ದ, ಅಮ್ಮ ಅಕ್ಕನ ಕೈಗೆ ದುಡ್ಡು ಕೊಟ್ಟು ಸರಿಯಾಗಿ ಖರ್ಚು ಮಾಡಿ, ಒಂದು ಪ್ಯಾಂಟು, ಶರ್ಟು ಅಷ್ಟೇ ಎಂದು ಹೇಳಿ ಕಳುಹಿಸಿದ್ದರು. ಎಂ.ಜಿ.ರೋಡಿನ ಅಂಗಡಿಗಳಲ್ಲಿ ಸಾಕಷ್ಟು ಎಡತಾಕಿದರೂ ವಾಸುಗೆ ಒಪ್ಪಿಗೆಯಾಗುವಂತಹ ಬಟ್ಟೆಗಳು ಸಿಗಲೇ ಇಲ್ಲ, ನಡೆದು ನಡೆದು ಸುಸ್ತಾಗಿ ಗಾಯಿತ್ರಿ ಥಿಯೇಟರ್ ಹತ್ರ ಬಂದಾಗ, ಅದರ ಪಕ್ಕದಲ್ಲಿದ್ದ ಚಾಮುಂಡಿ ಟೆಕ್ಸ್ ಟೈಲ್ಸ್  ಮಳಿಗೆ ಮೇಲೆ ಕಣ್ಣು ಬಿತ್ತು. ಅಕ್ಕ ಎಷ್ಟೇ ಬೇಡವೆಂದರೂ ಅಕ್ಕನನ್ನೂ ಪೀಡಿಸಿ ಒಂಡು ಕಡು ನೀಲಿ ಬಣ್ಣದ ಜೀನ್ಸ್ ಒಂದನ್ನು ಕೊಂಡೇ ಬಿಟ್ಟ ವಾಸು ಸಾವಿರದೈನೂರು ತೆತ್ತು. ಕೊಂಡದ್ದೇನೋ ಕೊಂಡಾಯಿತು, ಮನೆಯಲ್ಲಿ ಏನೆನ್ನುವರೋ ಎನ್ನುವ ಭಯದಲ್ಲೇ ಮನೆಗೆ ಬಂದರು ಅಕ್ಕ ತಮ್ಮ. "ಅಮ್ಮ ಚಾಮುಂಡಿ ಟೆಕ್ಸ್ ಟೈಲ್ಸ್ ನಲ್ಲಿ ಒಳ್ಳೇ ಬ್ರಾಂಡ್ ಅಮ್ಮ, ಈ ಜೀನ್ಸ್ ಇದ್ಯಲ್ಲ, ಇನ್ನು ಮೂರು ವರ್ಷ ಬಾಳಿಕೆ ಬರುತ್ತೆ, ನೋಡು ನಂದು ಬೇರೆ ಪ್ಯಾಂಟ್ಸ್ ಎಲ್ಲಾ ಆಗ್ಲೆ ಹರ್ದೋಗ್ಬಿಟ್ಟಿದೆ" ಎಂದ. ಆದರೂ ಅಮ್ಮ "ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೋ, ಏನೋ ಕೊಂಡು ತಂದಿದೀಯ, ನಿಮ್ಮಪ್ಪ ಬೈದರೆ ನಂಗೊತ್ತಿಲ್ಲ, ಬರೀ ಪ್ಯಾಂಟ್ ಮಾತ್ರ ತಂದಿದೀಯ, ಶರ್ಟ್ ಕೂಡ ಇಲ್ಲ" ಎಂದು ಸುಮ್ಮನಾದರು. ಮಗಳನ್ನೂ ಸರಿಯಾಗಿ ಮಾತನಾಡಿಸಲಿಲ್ಲ. ಆಮೇಲೆ ಅಡಿಗೆ ಮನೆಗೆ ಬಂದಾಗ.."ನೀನಾದ್ರು ಹೇಳ್ಬಾರ್ದೇನೆ" ಎಂದರು.

ಅಪ್ಪ ಬಂದ ಕೂಡಲೇ ಟೀಪಾಯಿಯ ಮೇಲೆ ಇದ್ದ ಕವರ್ ಕಣ್ಣಿಗೆ ಬಿತ್ತು. ಏನಿದು ಎಂದು ನೋಡಿದಾಗ ಪ್ಯಾಂಟು. ಅಷ್ಟರಲ್ಲಾಗಲೇ ವಾಸುಗೆ ಎದೆ ಹೊಡೆದುಕೊಳ್ಳುತ್ತಿತ್ತು. ರೂಮಿನ ಬಾಗಿಲ ಬಳಿ ಬಂದು ನಿಂತ, ಎಷ್ಟು ಕೊಟ್ಟೆಯೋ ಎಂದರು, ಐನೂರಕ್ಕಿಂತ ಜಾಸ್ತಿ ಕೊಟ್ಟಿಲ್ಲ ತಾನೇ ಎಂದು ಮರುಪ್ರಶ್ನೆ ಎಸೆದರು. "ಇಲ್ಲಪ್ಪ ಇದು ಬ್ರಾಂಡೆಡ್ ಪ್ಯಾಂಟು, ಮೂರು ವರ್ಷ ಬಾಳಿಕೆ ಬರುತ್ತೆ, ಸಾವಿರ ಕೊಟ್ಟೆ" ಎಂದು ಉಗುಳು ನುಂಗುತ್ತಲೇ ಹೇಳಿದ. ಹೊರಗಿಂದ ಆಗ ತಾನೆ ದಣಿದು ಬಂದಿದ್ದ ಅವರಪ್ಪ ಯಾವ ಮುನ್ಸೂಚನೆಯೂ ಇಲ್ಲದೆಯೇ ಬಯ್ಯಲು ಶುರು ಮಾಡಿದರು. "ಜವಾಬ್ದಾರಿ ಅನ್ನೋದು ನಿಂಗೆ ಸ್ವಲ್ಪಾನಾದ್ರು ಇದ್ಯಾ?? ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಹೊರಗಡೆ ಹೋಗಿ ನಾಲ್ಕಾಣೆ ಸಂಪಾದಿಸ್ಕೊಂಡು ಬಾ ನೋಡೋಣ, ಆಗ ಗೊತ್ತಾಗುತ್ತೆ ನಿನ್ ಯೋಗ್ಯತೆ......................"
ಹಾಗೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚಿಗೆ ಸಾಗಿತು ಬಯ್ಗುಳ, ಅಕ್ಕನಿಗೂ, ಅಮ್ಮನಿಗೂ ಬಯ್ಗುಳದ ಪಾಲಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟ. ರಾತ್ರಿ ಊಟ ಕೂಡ ಮಾಡಲು ಬರಲಿಲ್ಲ ವಾಸು. ಹಸಿವಾಗಿರಲಿಲ್ಲವೆಂದಲ್ಲ, ಕರೆಯಲು, ಒಲೈಸಲು ಮನೆಯಲ್ಲಿ ಯಾರೊಬ್ಬರು ಬರದಿದ್ದು ಅವನಿಗೆ ಮತ್ತಷ್ಟು ನೋವುಂಟು ಮಾಡಿತ್ತು.

ಜೇಬಿನಲ್ಲಿದ್ದು ಬರೀ ನೂರು ರುಪಾಯಿ. ಪಾಸ್ ಇದ್ದುದರಿಂದ  ಬಸ್ ಹತ್ತಿಬಿಟ್ಟ.  ಮನೆ ಬಿಟ್ಟು ಹೋಗಬೇಕೆಂದು ರಾತ್ರಿಯೇ ನಿರ್ಧರಿಸಿದ್ದ. ನಾನು ದುಡ್ಡು ದುಡಿದೇ ಮನೆಗೆ ಬರುವೆನೆಂದು ಹೊರಟಿದ್ದ. ಅಂತಹ ನೂರಾರು ಪ್ಯಾಂಟುಗಳು ಕೊಳ್ಳಬೇಕು ನಾನು. ಯಾವನೊಬ್ಬನ ಹಂಗು ನನಗೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ. ಟೌನ್ ಹಾಲ್ ಸರ್ಕಲಿನಲ್ಲಿ ಇಳಿದು ಅಲ್ಲೆ ಪುಟ್ ಪಾತಿನ ಟೀ ಅಂಗಡಿಯಲ್ಲಿ ಕಾಫಿ-ಬನ್ನು ತಿಂದ. ಮನಸಿಗೇನೋ ಉಲ್ಲಾಸ. ಕೈಕಾಲುಗಳಿಗೆಂತಹುದೋ ಉತ್ಸಾಹ. ನಾನಿನ್ನು ಸ್ವತಂತ್ರನಾಗಿಬಿಟ್ಟೆ ಎಂದು. ಎದೆಯುಬ್ಬಿಸಿ ನಡೆಡಾಡಿದ. ಹತ್ತಿರದಲ್ಲೆ ಇರುವ ರೈಲ್ವೆ ಸ್ಟೇಷನ್ ಎಡೆಗೆ ದಾಪುಗಾಲು ಹಾಕತೊಡಗಿದ. ಇನ್ನು ಮುಂದೆ ಕಾಲೇಜಿಲ್ಲ, ಮನೆಯಲ್ಲಿ ಓದು ಓದು ಎನ್ನುವ ಕಿರಿ ಇಲ್ಲ, ಅಪ್ಪನ ಗಲಾಟೆ ಇಲ್ಲ. ಸರಿ ಎಲ್ಲಿಗೆ ಹೋಗುವುದು, ಹೆಚ್ಚು ತಡ ಮಾಡದೆ, ಯೋಚಿಸದೆ ಒಂದೇ ಉತ್ತರ ಕೊಟ್ಟಿತು ಮನಸು "ಮುಂಬಯಿ" ಎಂದು. ಅಲ್ಲಿಗೆ ಹೋಗಿ ಎಂತೆಂತಹವರೋ ಏನೇನೇನೋ ಆಗೋಗಿದ್ದಾರೆ, ಶಾರುಕ್ ಖಾನ್ ದಿಲ್ಲಿಯಿಂದ ಬಂದವ, ಈಗ ಹೇಗಾಗಿದ್ದಾನೆ? ಸಮುದ್ರದ ಮುಂದೆ ನಿಂತು ಇಡೀ ಮುಂಬಯಿಯನ್ನು ಆಳುತ್ತೇನೆಂದು ಹೇಳಿದನಂತೆ, ನಾನು ಹಾಗೆಯೇ ಹೇಳಬೇಕು, ಆದಷ್ಟು ಬೇಗ ಮುಂಬಯಿ ಸೇರಬೇಕು. ಅವನಿಗಾಗಿ ಸಮುದ್ರ ಕಾದಿದೆಯೇನೊ ಎಂದು ಚಡಪಡಿಸತೊಡಗಿದ. ನಾನು ಅಲ್ಲಿಗೇ ಹೋಗುತ್ತೇನೆ, ದೊಡ್ಡ ವ್ಯಕ್ತಿಯಾಗಿ ಮತ್ತೆ ಈ ಊರಿಗೆ ಕಾಲಿಡುತ್ತೇನೆ ಎಂದು ಮತ್ತೊಮ್ಮೆ ಧೃಡವಾಗಿ ನಿರ್ಧರಿಸಿದ.

ಮನೆ ಬಿಟ್ಟವರೆಲ್ಲರ ಇತಿಹಾಸ ಜೀಕುತ್ತಾ ನಡೆಯುತ್ತಿದ್ದ. ನಮ್ಮ ಕನ್ನಡದ ಖ್ಯಾತ  ನಿರ್ದೇಶಕ ಎಸ್.ನಾರಾಯಣ್ ಕೂಡ ಮನೆ ಬಿಟ್ಟವರೆ. ಭಾರತ ರತ್ನ ಭೀಮ್ ಸೇನ್ ಜೋಶಿಯವರೂ ಕೂಡ ಸಂಗೀತ ಕಲಿಯಲೆಂದು ಹದಿನಾಲ್ಕನೆಯ ವಯಸ್ಸಿನಲ್ಲಿ ಮನೆ ಬಿಟ್ಟರಂತೆ, ಹಾಗೆ ನೋಡಿದರೆ ನನಗೆ ಆಗಲೇ ಇಪ್ಪತ್ತು ವರ್ಷವಾಗಿದೆ, ಬಹಳ ಲೇಟ್ ಮಾಡಿದೆ ಎಂದು ಅನಿಸಿತು ವಾಸುಗೆ. ಅವರೆಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂದು ದಾರಿಯುದ್ದಕ್ಕೊ ಹಗಲುಗನಸು ಕಾಣುತ್ತ ಬಂದ. ಇರುವುದು ನೂರೇ ರುಪಾಯಿ ಹೇಗೆ ತಲುಪುವುದು ಮುಂಬಯಿಯನ್ನು. ರೈಲು ಹತ್ತಿ ಟಿ.ಟಿ. ಬರುವ ವೇಳೆಗೆ ಟಾಯ್ಲೆಟ್ಟಿನಲ್ಲಿ ಕೂತು ಬಿಡುವ ತಂತ್ರ ಹೂಡಿದ. ರಾತ್ರಿ ಸರಿಯಾಗಿ ನಿದ್ದೆ ಇಲ್ಲದುದರ ಕಾರಣ ನಡೆದು  ಸುಸ್ತಾದ. ಅಷ್ಟರಲ್ಲಿ ಕಾರ್ಪೊರೇಶನ್ ಬಳಿ ಒಂದು ಪಾರ್ಕು ಕಂಡ. ಒಳಗೆ ಹೋಗಿ ಒಂದು ಮರದ ನೆರಳಿನಲ್ಲಿ ಹಾಗೆ ನೆಲಕ್ಕೆ ಒರಗಿಕೊಂಡ. ಸೊಂಪಾದ ನಿದ್ರೆಗೆ ಜಾರಿದ. ಬಿ.ಹೆಚ್ ರಸ್ತೆಯಲ್ಲಿ ಕೆಟ್ಟದಾಗಿ ಹಾರ್ನ್ ಮಾಡುತ್ತ ಮೆಲ್ಲಗೆ ತೆವಳುತ್ತಿದ್ದ ವಾಹನಗಳು ವಾಸುವಿನ ನಿದ್ರೆಗೆ ಭಂಗ ತರಲಿಲ್ಲ.

ಅಮ್ಮ ಭೋರಿಟ್ಟು ಅಳುತ್ತಿದ್ದಳು ,ಮಾತು ಮಾತಿಗೂ ಎದೆಯೊಡೆದುಕೊಳ್ಳುತ್ತಿದ್ದಳು. ಸರಿಯಾಗಿ ಮನೆಯವರೆಲ್ಲ ಊಟ, ನಿದ್ರೆ ಮಾಡಿ ಒಂದು ವಾರದ ಮೇಲಾಗಿತ್ತು. ವಾಸುನ ಪತ್ತೆಯೇ ಆಗಿರಲಿಲ್ಲ. ಎಲ್ಲಿ ಹೋದ ?, ಏನಾದ ? ಯಾರೊಬ್ಬರಿಗೂ ಸುಳಿವಿರಲಿಲ್ಲ. ಅವರ ಸ್ನೇಹಿತರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದಾಗಲೇ ದಿನಪತ್ರಿಕೆಗಳಲ್ಲಿ , ನ್ಯೂಸ್ ನಲ್ಲಿ ಕಾಣೆಯಾಗಿದ್ದನೆಂದು ಪ್ರಕಟಣೆ ಕೊಟ್ಟಿದ್ದರೂ ಸಹ..ಉಹೂಂ ಏನೂ ಪ್ರಯೋಜನವಾಗಿರಲಿಲ್ಲ. ಅವರಪ್ಪನಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಕಟಣೆ ಹೊರಡಿಸಿದ್ದರು, ಅದೂ ದಿನಪತ್ರಿಕೆಯ ಫ್ರಂಟ್ ಪೇಜಿನಲ್ಲಿ. ಮುಂಬೈ ಪೋಲಿಸರು ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ ವಾಸುವನ್ನು ಹಿಡಿದು ತುಮಕೂರಿಗೆ ಕರೆತಂದರು. ಮನೆಗೆ ಕಾಲಿರಿಸಿದ ಕೂಡಲೆ ಅಮ್ಮ ಓಡಿಬಂದು ಅವನನ್ನು ತಬ್ಬಿಕೊಂಡು "ಎಲ್ಲಿ ಹೋಗ್ಬಿಟ್ಟಿದ್ದೆ ಕಂದಾ, ಯಾಕ್ ಹಿಂಗ್ ಮಾಡ್ದೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಒಂದಾದ ಮೇಲೊಂದು ಪ್ರಶ್ನೆ ಕೇಳುತ್ತಲೇ ಅವನನ್ನು ಜಗ್ಗಾಡುತ್ತಿದ್ದರು.

ಧಿಗ್ಗನೆ ಎದ್ದು ಕುಳಿತ ವಾಸು. ಕಣ್ಣೆಲ್ಲಾ ಮಂಜು ಮಂಜು. ಸೂರ್ಯ ಅದಾಗಲೇ ತನ್ನ ದಿನಗೆಲಸವನ್ನು ಮುಗಿಸಿ ಮನೆ ಸೇರಿದ್ದ. ಬಿ.ಹೆಚ್ ರಸ್ತೆಯಲ್ಲಿ ವಾಹನಗಳು ಗಿಜುಗುಡುತ್ತಲೇ ಇದ್ದವು. ಅಲ್ಲೇ ಎದುರಿಗೆ ಇದ್ದ ಹೋಟೆಲಿನಲ್ಲಿ ಇಡ್ಲಿ, ವಡೆ ತಿಂದು ಕಾಫಿ ಕುಡಿಯಲು ಶುರು ಮಾಡಿದ. ಬಿದ್ದ ಕನಸಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಸಮಯ ನೋಡಿಕೊಂಡ, ಆಗಲೇ ರಾತ್ರಿ ಎಂಟು ಗಂಟೆಯಾಗಿದೆ. ಅಮ್ಮ ಗಾಭರಿ ಆಗಿರುತ್ತಾಳೆ, ಇಷ್ಟೊತ್ತಿಗೆ ಎಷ್ಟು ಬಾರಿ ಅತ್ತಳೊ? ಅಕ್ಕ ಪಾಪ ಅವಳು ತಾನೆ ಏನು ಮಾಡಿಯಾಳು, ಅಮ್ಮನನ್ನು ಸಂತೈಸುತ್ತಿರಬಹುದು 
ಅಲ್ಲಿಂದ ನೇರವಾಗಿ ಹಳೆ ಬಸ್ ಸ್ಟಾಂಡಿಗೆ ನಡೆದು ಸಂಪಂಗಿ ಬಸ್ಸನ್ನೇರಿದ. ದಾರಿಯುದ್ದಕ್ಕೊ ತಾನು ಕೆಟ್ಟ ನಿರ್ಧಾರ ಮಾಡಿದೆ. ಇಲ್ಲೇ ಈಸಬೇಕು, ಇಲ್ಲೇ ಜಯಿಸಬೇಕು ಎಂದು ದಾಸರನ್ನು ನೆನೆದ. ಮನೆಗೆ ತಾನೊಬ್ಬನೇ ಗಂಡು ಹುಡುಗ, ನಾನು ಈಗ ಬೇಜವಾಬ್ದಾರಿಯಿಂದ ಹೊರಟು ಬಿಟ್ಟರೆ ನಾಳೆ ಅಕ್ಕನಿಗೆ ಮದುವೆ ಮಾಡಿಸುವವರು ಯಾರು? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? ಅವನ ಮನಸಿಗೆ ಬಂದ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳಲು ವಿಫಲನಾದ.

ಬಸ್ ಇಳಿದು ಊರು ಮುಟ್ಟುತ್ತಲೇ ಬೆವರಲಾರಂಭಿಸಿದ, ಎಲ್ಲರೂ ಇವನನ್ನೇ ನೋಡುತ್ತಿದ್ದಾರೆನಿಸಿತು. ಯಾರೋ ಇವನೆಡೆಗೆ ಕೈತೋರಿಸಿದ ಹಾಗಾಯಿತು, ತಿರುಗಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಮೆಟ್ಟಿಲೇರತೊಡಗಿದ, ಅಮ್ಮ ನನ್ನನ್ನು ನೋಡಿದ ಕೂಡಲೇ ಅಪ್ಪಿಕೊಂಡು ಅಳುತ್ತಾಳೆ, ಅವಳನ್ನು ಸಮಾಧಾನ ಪಡಿಸುವುದು ಹೇಗೆ ?, ಅಪ್ಪ ಇನ್ನು ಮೇಲೆ ನಿನಗೆ ಬಯ್ಯುವುದಿಲ್ಲವೋ ಎಂದು ಹೇಳುತ್ತಾರೆ ಎನ್ನುವ ಹೊತ್ತಿಗೆ ಮನೆ ಬಾಗಿಲ ಬಳಿ ಬಂದ. ಬಾಗಿಲು ತಟ್ಟುವ  ಮುಂಚೆಯೇ ಬಾಗಿಲು ತೆರೆದುಕೊಂಡಿತು, ಅಪ್ಪ ಎದುರಿಗೆ ಬಂದು "ಲಫಂಗ, ಮನೆಗೆ ಎಷ್ಟೊತ್ತಿಗೆ ಬರೋದು, ಎಲ್ಲಿ ತಿರುಗಾಡೋಕೆ ಹೋಗಿದ್ದೆ ?, ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ನಿಂಗೆ, ನಿಂಗ್ಯಾವತ್ತಿಗೆ ಬುದ್ದಿ ಬರತ್ತೋ ನಾ ಬೇರೆ ಕಾಣೆ..." ಎನ್ನುತ್ತಲೇ ಅವರು ಎಂದಿನ ಪ್ರವರ ಮುಂದುವರೆಸಿದರು. ನಡು ಮನೆವರೆಗೂ ಬಂದು ಅಮ್ಮನಿಗಾಗಿ ಅಡುಗೆ ಮನೆಯೆಡೆಗೆ ಬಗ್ಗಿ ನೋಡಿದ, ಅಮ್ಮ, ಅಕ್ಕ ಇಬ್ಬರೂ ಚಪಾತಿ ಸುಡುತಿದ್ದರು
ದಿಂಬು ತನಗಾಗಿ ಕಾದಿದೆ ಎಂದು ರೂಮಿನೆಡೆಗೆ ನಡೆದ.

-ಅರೆಯೂರು ಚಿ.ಸುರೇಶ್
ಪತ್ರಕರ್ತರು
ಪ್ರಜಾಮನ ದಿನಪತ್ರಿಕೆ
ತುಮಕೂರು
7090564603

23-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಮಂಗಳವಾರ, ಡಿಸೆಂಬರ್ 18, 2018

16-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಎಲ್ಲಿರುವೆ ನೀ ಚಲುವೆ...?


ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್
ತುಮಕೂರು



ವಿಪರ್ಯಾಸ
ನನ್ನ ಕಾವ್ಯಕ್ಕೆ ಸ್ಫೂರ್ತಿಯಾದ ಹುಡುಗಿ
ನನ್ನ ಬಾಳಿಗೆ ವರವಾಗಲಿಲ್ಲ,
ನನ್ನ ಹಾಡಿಗೆ ದನಿಗೂಡಿಸಿದ ಬೆಡಗಿ
ಕೈಗೆ ಸಿಗುವ ನಕ್ಷತ್ರವಾಗಲಿಲ್ಲ...
ಅವಳ ನಗುವಿನಲ್ಲೇ ಬರೆಸಿದಳು ನೂರಾರು ಕವಿತೆ
ಅವಳ ಪ್ರೀತಿಯ ನೋಟಕ್ಕೆ ಇದೆಯೇ ಸರಿಯಾದ ಅಳತೆ,
ಅವಳ ಮಾತಿನಲ್ಲಿದೆ ನೂರಾರು ಕವಿತೆ ಕವನಗಳ ಸಿಂಚನ
ಅರ್ಧ ಪಡೆಯಿತು ಇನ್ನರ್ಧ ಪಡೆಯಲು ಸೋತಿತು ಈ ಮನ...
ಜೀವನದಲ್ಲಿ ಏನೂ ಮಾಡಲಾಗದು ಎಂದು ಕುಳಿತವನಿಗೆ
ಕವಿ ಹೃದಯ ತುಂಬಿದಳು ಆದರೆ ಹೃದಯ ತುಂಬಲಿಲ್ಲ,
ಅವಳಾಗಿದ್ದಳು ಮೈಸೂರಿನ ಬಿಳಿಯ ಮಲ್ಲಿಗೆ
ಆದರೆ ಆ ಮಲ್ಲಿಗೆ ಒಲಿಯಲಿಲ್ಲ ಅರೆಯೂರಿನ ಈ ಕವಿಗೆ...


-ಅರೆಯೂರು ಶ್ರೀವೈದ್ಯಸುತ
ಅರೆಯೂರು ವೈದ್ಯನಾಥಪುರ






ಭಾನುವಾರ, ಡಿಸೆಂಬರ್ 9, 2018

9-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು





ಸಂಜೆಯ ಸೂರ್ಯ


ಮುಳುಗುತಿರುವ ಸೂರ್ಯ, ಮತ್ತೆ ಎದ್ದು ಬರುವ,
ಇಂದು ಸಂಜೆ ಕತ್ತಲಾದರು, ನಾಳೆ ಹೊಂಗಿರಣ ತರುವ…
ನಡೆಯುವ ಪಯಣದಲಿ, ಎಲ್ಲೆಲ್ಲಿಯೂ ಜೊತೆಯಲಿರುವ,
ಸುಖ, ದುಃಖ ಎಲ್ಲವನು ಒಂದೆ ಪ್ರಕಾಶದಿ ಸಮನಾಗಿ ತೋರುವ…
ದೂರಾತಿ ದೂರದಲಿ 
ಅಂಬರ ದಿಗಂತಗಳು 
ಕೂಡುವೆಡೆಯಲ್ಲಿ ಸಾಗರ 
ಭುವಿಯ ಸಂಗಮದಲ್ಲಿ 
ಮೂಡಿರುವ 
ಬೆಳ್ಳಿ ಕಡಲಂಚು 
ನೀಲಿ ಬಟ್ಟಲನು 
ಬೋರಲಿಟ್ಟಂತೆ
ಅವ್ಯಕ್ತ ಅನಂತ ದಿಗಂತ
ಪಡುವಣದ ದಿಶೆಗೆ 
ಸರಿದ ನೇಸರ
ಕೆಂಪಾದ ರಂಗಾದ 
ಸುವರ್ಣ ವರ್ಣದಳೆದ 
ದಿನಕರನ ವಿಧ ವಿಧದ 
ರೂಪಗಳ ಅನಾವರಣ 
ಸಂಜೆಯ ಸೂರ್ಯ 
ಬೋರಲಾಗಿಟ್ಟ ಕುಂಭ
ಗಗನದಂಗಣದಲ್ಲಿ 
ತಿರುಗುವ ಬುಗುರಿ 
ಅಂಡಾಕಾರ
ಸಣ್ಣಾತಿ ಸಣ್ಣ ಗೆರೆಯಾಗಿ 
ಕಡಲಲ್ಲಿ ಲೀನ
ಗಗನದ ತುಂಬೆಲ್ಲ 
ಆವರಿಸಿದೆ  
ಬಂಗಾರ ಬಣ್ಣದ ಛಾಯೆ
ಮೋಡಗಳ ಅಂಚಿಗೆ 
ಸುವರ್ಣ ರೇಖೆ
ಸೂರ್ಯಬಿಂಬ ಕಣ್ಮರೆಯಾಗಿ 
ಊದು ಬಣ್ಣದ ಛಾಯೆ 
ನೀಲ ವರ್ಣದ ಮಬ್ಬು 
ಮಬ್ಬಾದ ಅವಕುಂಠನ 
ದೂರದ ಬಾನಿನಲಿ 
ಚುಕ್ಕಿಗಳು ಅರಳಿ 
ನಿಶೆಯು ಆವರಿಸಿದಳು 
ಜಗದ ತುಂಬ
ಮೂಕ ವಿಸ್ಮಿತನಿಲ್ಲಿ 
ಭಾವುಕ ನೋಡುಗ 
ದೇವನ ವಿಸ್ಮಯ ಸೃಷ್ಟಿಗೆ

-ಅರೆಯೂರು ಚಿ.ಸುರೇಶ್
ತುಮಕೂರು



ಸೂರ್ಯಾಸ್ತ
Imageಪಡುವಣ  ಬಾನಲಿ  ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ
ಕಾದೊಡಲಿನ ಕಾತುರಕೆ  ಉಣಿಸಿರೆ, ಎಲೆ ಮೇಘ
ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ
ಬರಡು ರೆಂಬೆ  ಕೊಂಬೆಯಲಿ ಹರಡಲಿ  ಕೊರಳ ರವ

ಕಪ್ಪಿನಲ್ಲಿ  ಅಚ್ಚಾಗಿಹ  ಹಚ್ಚ ಹಸಿರು
ಒಣಮೈಯ  ಕಾಷ್ಟದಲು ಬಸಿರಾಗಲು ಬಿಸಿಯುಸಿರು
ಅಸ್ತಮದ ಕಣ್ಣಂಚಿನಲಿ ಒಪ್ಪಿಗೆಯ  ಶುಭ
ಬೆಳಗಾಗುವ ಮುನ್ನ, ಹೊಸತಾಗಲು ಭವ!

ಕರೆಯುಲಿಯ ಬಟ್ಟಲ ಮೇಲ್ಚಾಚಿ ನೀಡಿ
ಮುಳುಗುತಿಹ ಸೂರ್ಯನಿಗೆ ವಿದಾಯ ಹಾಡಿ
ಧರೆಯಾಗಿ ತಟಸ್ಥ ಚಿತ್ರ, ಕೋಡಿ
ಹರಿಸಿದೆ ನಸುಗೆಂಪು, ಬಾನ ವೈಚಿತ್ರ್ಯ !

ಸಂಜೆಗೆಂಪು  ತುಂಬಲು ಬಾನೊಡಲು
ಅಸ್ತಮಿಪ ರವಿಗೆ ಕಾಡು, ನಾಡಾದರೇನು
ಮೂಡಿದರು ಇರುಳು, ರವಿ  ಕಾಣದ್ದೇನು?
ಕಣ್ತೆರೆದಿದ್ದರು, ದಿಗಂತದಲಿ  ಮರೆಯಾಗುವನವನು!

-ಅರೆಯೂರು ಶ್ರೀವೈದ್ಯಸುತ 
ಅರೆಯೂರು ವೈದ್ಯನಾಥಪುರ




ಭಾನುವಾರ, ಡಿಸೆಂಬರ್ 2, 2018

2-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ




ಆಕ್ರಂದನ

ಅಗ್ನಿಯ ಮುನಿಸಿಗೆ ಬಲಿಯಾಗಿ
ಬದುಕಾಯಿತು ಮೂರಾಬಟ್ಟೆ
ಬದುಕಿನುದ್ದಕ್ಕೂ ಶ್ರಮ ಪಟ್ಟು ಗಳಿಸಿದ
ಆಸ್ತಿ ಪಾಸ್ತಿ ಅಂತಸ್ತು  ಸುಟ್ಟು ಕರಕಲಾಗಿದೆ 
ನಾನೂ ಕೂಡಾ ಒಬ್ಬ ನಿರ್ಗತಿಕಳಾದೆ

ತುಳಿದ ಹಾದಿ ಸುಗಮವೆಂದು ಎಣಿಸಿತಲ್ಲಿ ಜೀವ
ನೊಗವೇರಿದ ಕುದುರೆಯಂತೆ ಕತ೯ವ್ಯದ ಬೆನ್ನು ಹತ್ತಿ
ಆಸೆ ಹೊತ್ತು ಉರಿಯಿತಲ್ಲಿ ಕಣ್ಣು ಕುರುಡಾಗಿ
ಸಂಪ್ರದಾಯದ ಕುತ್ತಿಗೆಗೆ ನೇತು ಬಿದ್ದು.

ಗಟ್ಟಿಯಾಗಿ ಚೀರಿದೆ ಮನ ಬಹು ದಿನಗಳ ಕನಸಿಗೆ
ಇಷ್ಟವಾದಂತಿಲ್ಲವಲ್ಲ ಹೊಸತು ಬೆಂಡೋಲೆ
ಗರಿ ಬಿಚ್ಚಿ ತಾ ಹಾರಲಿಲ್ಲ ಅಷ್ಟ ದಿಕ್ಕಿನೆಡೆಗೆ
ಕರುಳು ಮಮ್ಮಲ ಮರುಗಿ ಜೀವ ಕುಗ್ಗಿತಲ್ಲಿ.
ಹಾಹಾಕಾರದ ಪ್ರತಿಧ್ವನಿ
ಜನರ ಬಾಯಿ ಬಾಯಿಗಳಲ್ಲಿ ಹರಿದಾಡುವ
ಅವರೆಲ್ಲ ಪರಿತಪಿಸಿ ಕಣ್ಣೀರಿಡುವ
ಕೆಲಸ ಕಾರ್ಯ ಬಿಟ್ಟು
ನನ್ನ ರಕ್ತದೋಕುಳಿಯಲ್ಲಿ ತಮ್ಮ ಚಿತ್ರ ಬರೆವ
ಸಿಕ್ಕಿದ್ದೇ ಅವಕಾಶವೆಂದು ಜೈ ಜೈಕಾರ ಹಾಕುವ
ಮುಖವಾಡ ಧರಿಸಿ ಅಟ್ಟಹಾಸದಿ ಮೆರೆವ
ಸನ್ನಿವೇಶ ನನ್ನ ಕಾಲಡಿಯಲ್ಲಿ ತಂದಿಡಬೇಡ


-ಅರೆಯೂರು ಚಿ.ಸುರೇಶ್ ತುಮಕೂರು


"ತುಷಾರ" ಮಾಸ ಪತ್ರಿಕೆಯಲ್ಲಿ ನನ್ನ ಕತೆ (ಡಿಸೆಂಬರ್-2018)




25-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ


ಸ್ವತಂತ್ರ ನಾರಿ

ಭವ್ಯ ಭಾರತದ ನಾರಿ
ಕಿತ್ತೆಸೆ ನಿನ್ನ ಬಂಧನದ ಸ್ಯಾರಿ
ಮಾನ ಮರ್ಯಾದೆಯನ್ನು ಫ್ಯಾಷನಿಗೆ ಮಾರಿ
ಹೇಳು ನೀ ಎಲ್ಲರಿಗೂ ಸಾರಿ ಸಾರಿ
ನಾನು ಸ್ವತಂತ್ರ ನಾರಿ

ಅಪ್ಪನ ಮಮತೆ, ಅಣ್ಣನ ಅಕ್ಕರೆ
ನಿನಗನ್ನಿಸುತ್ತೆ ಬಂಗಾರದ ಪಂಜರವೆಂದು
ಹಾತೋರೆಯುತ್ತೆ ಮನಸ್ಸು
ಸ್ವತಂತ್ರ ಹಕ್ಕಿಯಾಗಿ ಹಾರಾಡಲು

ಬೇಡ ನಿನಗೆ ಗಂಡಸಿನ 
ಆಶ್ರಯದ ಬಂಧನ
ಬಿಡುಗಡೆ ಪಡೆದು
ನೀ ಹೋಗುವುದಾದರೂ ಎಲ್ಲಿ?

ನೆನಪಿರಲಿ ಹೆಣ್ಣೇ
ನೀ ಎಷ್ಟೇ ಸ್ವತಂತ್ರಳಾದರೂ
ಅಪ್ಪನ ಅಕ್ಕರೆಗೆ
ಪ್ರಿಯತಮನ ಅಪ್ಪುಗೆಗೆ
ಮಗನ ಅಮ್ಮಾ ಎಂಬ 
ಕೂಗಿಗೆ ನೀ ಬಂಧಿಯೇ...




-ಅರೆಯೂರು ಚಿ.ಸುರೇಶ್
ಗೂಳೂರು


18-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ

ಮನಸ್ಸು


ಮನಸ್ಸಿನ ಗೂಡೊಳು
ಅವಿತ ಪಂಚರಂಗಿ ಬಣ್ಣ
ಬೇಡ ಬೇಡಾ ಅಂದರೂ
ತನ್ನಿಶ್ಚೆಯಂತೆ ಜಾಲಾಡಿ
ನಡೆಯಲು ಹಾತೊರೆಯುತ್ತಿರುವಾಗ
ಬಯಕೆಗಳ ಮೂಟೆ ಹೊತ್ತ ಮನುಷ್ಯ
ಕಡ್ಡಿ ತುಂಡು ಮಾಡಿದಂತೆ
ಆಗಾಗ ಮೊಟಕ್ತಾ ಇದ್ರೂ
ತನ್ನ ಬಾಲ ಬಿಚ್ಚೋದು ಬಿಡಲ್ಲ
ಹಾವೂ ಸಾಯೋಲ್ಲ
ಕೋಲೂ ಮುರಿಯೋಲ್ಲ
ಬರೀ ಧ್ಯೇಯಗಳದ್ದೆ ಕಾರುಭಾರು
ಐನಾತಿ ಮನಸಿಗೆ
ಸ್ವಾರ್ಥದೊಳಗೊಂದು ಸ್ವಾರ್ಥ
ತಾನು ತನ್ನದೆಂಬ ಪ್ರತೀ ಮನುಷ್ಯನ
ಬೆಂಬಿಡದ ಭೂತ.
ಆಂತರ್ಯದಲಿ ಅವಿತಿರುವ
ನಿಶ್ಕಲ್ಮಷ ಸತ್ಯವೊಂದಿದೆ
ನಿನಗಾದರೂ ಅರಿವಾಗುವುದೆಂಬ ಗಾಢವಾದ ನಂಬಿಕೆ ನನಗಿದೆ
ಗುಟುಕುಧಾರಿಯ ನಟ್ಟಿರುಳು
ಗಾಂಧಾರಿಗೆ ಹಗಲೆಲ್ಲ ರಾತ್ರಿ
ಅದಾಗಿ ಬಂದೊದಗಿದ ಸಿರಿ
ಅದುಮಿ ಹಿಡಿದಿದೆ ಜೀವ
ಒಳಗೊಳಗೆ ಮಮ್ಮಲ ಮರುಗಿ.
ಕಟೆದ ದೇಹಕೆ ಬೇಕೇಕೆ
ಅಪರಿಮಿತ ಅನುದಿನದ ವಾತ್ಸಲ್ಯ
ದಿಕ್ಕೆಟ್ಟ ಭೂದಿಯಲಿ ಹೊರಳಾಡಲಿ...


-ಅರೆಯೂರು ಚಿ.ಸುರೇಶ್

 ತುಮಕೂರು


11-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ














ದೀಪವ ಹಚ್ಚಿರಿ...



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ...

ಹೃದಯಾಕಾಶ ಬುಟ್ಟಿ ರಂಗಿನ ಲೋಕ 
ಧರೆಗಿಳಿದು ಬಂದಿದೆ ನಕ್ಷತ್ರ ಲೋಕ 
ಎಲ್ಲೆಡೆಗೆ ಹೊಮ್ಮಿದೆ ಬೆಳಕಿನ ಸೆಳಕು 
ಜಗದಲಿ ತುಂಬಿದೆ ಸಂತಸದ ಹೊನಲು 
ಮನೆ ಮನೆ ಊರು ಕೇರಿಗಳಲ್ಲಿ 
ಎಲ್ಲರ ಕಂಗಳಲಿ ಹೊಳೆಯಲಿ ಹಣತೆಯ ಕಾಂತಿ

ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.

ಸತ್ಯವನು ಬೆಳಗುವ ದೀಪವನು ಹಚ್ಚುವ 
ಸುಳ್ಳು ಎನ್ನುವ ಅಂದಕಾರವ ಬಾಳಿಂದ ಓಡಿಸುವ 
ಹಚ್ಚುವ  ಪ್ರೀತಿಯ ದೀಪವ 

-ಅರೆಯೂರು ಚಿ.ಸುರೇಶ್ ತುಮಕೂರು


4-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕಥೆ


ಮಂಗಳವಾರ, ಮೇ 29, 2018

ನಾನಿಟ್ಟ ರಂಗೋಲಿ



ಮನೆಯಂಗಳದಲ್ಲಿ
ನಾನಿಟ್ಟ ಚುಕ್ಕಿ ಸಾಲು
ಒಂದಲ್ಲ ಎರಡಲ್ಲ
ಹತ್ತಾರು ಸಾಲು ಸಾಲು
ಚುಕ್ಕಿ ಚುಕ್ಕಿಗೂ
ಅದೇನೋ ನಂಟು
ಸಾಲು ಸಾಲು ಸೇರುತ
ಮೂಡಿತಲ್ಲಿ ಹೂದಂಟು
ಮತ್ತಹಲವು ರೇಖೆಗಳು
ನೃತ್ಯ ಮಾಡುತ ನಗಲು
ಅಲ್ಲಲ್ಲಿ ಖಾಲಿ ಚುಕ್ಕಿಗಳು
ಒಂಟಿತನದ ಚಿಂತೆ ಕಾಡಲು
ಅರಳಿತು ಹೂವೊಂದು
ಮುದ್ದಾದ ರೂಪದೊಳು
ಹೇಳಿತು ಕಥೆಯೊಂದ
ಚುಕ್ಕಿಯ ಸಾಲುಗಳು
ಭಾವನೆಗಳ ಬಿಂಬಿಸುವ
ಬಣ್ಣಗಳ ಶೃಂಗಾರವು
ರಂಗೋಲಿ ಚಿತ್ತಾರ ನೀಡುವ
ಮೆನೆಯಂಗಳದ ಚೆಲುವು
ನಾನಿಟ್ಟ  ರಂಗೋಲಿ...


-ಅರೆಯೂರು ಚಿ.ಸುರೇಶ್, ತುಮಕೂರು