ಅಗ್ನಿಯ ಮುನಿಸಿಗೆ ಬಲಿಯಾಗಿ
ಬದುಕಾಯಿತು ಮೂರಾಬಟ್ಟೆ
ಬದುಕಿನುದ್ದಕ್ಕೂ ಶ್ರಮ ಪಟ್ಟು ಗಳಿಸಿದ
ಆಸ್ತಿ ಪಾಸ್ತಿ ಅಂತಸ್ತು ಸುಟ್ಟು ಕರಕಲಾಗಿದೆ
ನಾನೂ ಕೂಡಾ ಒಬ್ಬ ನಿರ್ಗತಿಕಳಾದೆ
ತುಳಿದ ಹಾದಿ ಸುಗಮವೆಂದು ಎಣಿಸಿತಲ್ಲಿ ಜೀವ
ನೊಗವೇರಿದ ಕುದುರೆಯಂತೆ ಕತ೯ವ್ಯದ ಬೆನ್ನು ಹತ್ತಿ
ಆಸೆ ಹೊತ್ತು ಉರಿಯಿತಲ್ಲಿ ಕಣ್ಣು ಕುರುಡಾಗಿ
ಸಂಪ್ರದಾಯದ ಕುತ್ತಿಗೆಗೆ ನೇತು ಬಿದ್ದು.
ಗಟ್ಟಿಯಾಗಿ ಚೀರಿದೆ ಮನ ಬಹು ದಿನಗಳ ಕನಸಿಗೆ
ಇಷ್ಟವಾದಂತಿಲ್ಲವಲ್ಲ ಹೊಸತು ಬೆಂಡೋಲೆ
ಗರಿ ಬಿಚ್ಚಿ ತಾ ಹಾರಲಿಲ್ಲ ಅಷ್ಟ ದಿಕ್ಕಿನೆಡೆಗೆ
ಕರುಳು ಮಮ್ಮಲ ಮರುಗಿ ಜೀವ ಕುಗ್ಗಿತಲ್ಲಿ.
ಹಾಹಾಕಾರದ ಪ್ರತಿಧ್ವನಿ
ಜನರ ಬಾಯಿ ಬಾಯಿಗಳಲ್ಲಿ ಹರಿದಾಡುವ
ಅವರೆಲ್ಲ ಪರಿತಪಿಸಿ ಕಣ್ಣೀರಿಡುವ
ಕೆಲಸ ಕಾರ್ಯ ಬಿಟ್ಟು
ನನ್ನ ರಕ್ತದೋಕುಳಿಯಲ್ಲಿ ತಮ್ಮ ಚಿತ್ರ ಬರೆವ
ಸಿಕ್ಕಿದ್ದೇ ಅವಕಾಶವೆಂದು ಜೈ ಜೈಕಾರ ಹಾಕುವ
ಮುಖವಾಡ ಧರಿಸಿ ಅಟ್ಟಹಾಸದಿ ಮೆರೆವ
ಸನ್ನಿವೇಶ ನನ್ನ ಕಾಲಡಿಯಲ್ಲಿ ತಂದಿಡಬೇಡ
-ಅರೆಯೂರು ಚಿ.ಸುರೇಶ್ ತುಮಕೂರು