BREKING NEWS

ಶನಿವಾರ, ಡಿಸೆಂಬರ್ 22, 2018

23-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕಥೆ

ದಿಕ್ಕು ಬದಲಿಸಿದ ಕನಸು

ವಾಸು ರಾತ್ರಿ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಅತ್ತು ಹಾಗೆ ಮಲಗಿದ್ದ. ಅವನ ಕಣ್ಣೀರಿಗೆ ದಿಂಬು ತೋಯ್ದುಹೋಗಿದ್ದವು. ಕಣ್ಣೆಲ್ಲಾ ಕೆಂಪು. ಮುಂಜಾನೆ ಎದ್ದೊಡನೆಯೇ ಅಮ್ಮನಿಗೆ ಸ್ಪೆಶಲ್ ಕ್ಲಾಸ್ ಇದೆ ಎಂದು 8ಗಂಟೆ ಹೊತ್ತಿಗೆ ರೆಡಿ ಆಗಿ ಮನೆಯಿಂದ ಹೊರಬಂದ. ಅಪ್ಪನಿಗೆ ಹೇಳಬೇಕೂ ಅನಿಸಲಿಲ್ಲ. ನೆನ್ನೆ ರಾತ್ರಿ ಆದದ್ದಾದರೂ ಏನು ?

ಮುಂದಿನ ವಾರವೇ ಅವನ ಹುಟ್ಟುಹಬ್ಬವಿತ್ತು, ಅದಕ್ಕಾಗಿ ಬಟ್ಟೆ ಕೊಳ್ಳಲು ಅಕ್ಕನ ಜೊತೆಗೂಡಿದ್ದ, ಅಮ್ಮ ಅಕ್ಕನ ಕೈಗೆ ದುಡ್ಡು ಕೊಟ್ಟು ಸರಿಯಾಗಿ ಖರ್ಚು ಮಾಡಿ, ಒಂದು ಪ್ಯಾಂಟು, ಶರ್ಟು ಅಷ್ಟೇ ಎಂದು ಹೇಳಿ ಕಳುಹಿಸಿದ್ದರು. ಎಂ.ಜಿ.ರೋಡಿನ ಅಂಗಡಿಗಳಲ್ಲಿ ಸಾಕಷ್ಟು ಎಡತಾಕಿದರೂ ವಾಸುಗೆ ಒಪ್ಪಿಗೆಯಾಗುವಂತಹ ಬಟ್ಟೆಗಳು ಸಿಗಲೇ ಇಲ್ಲ, ನಡೆದು ನಡೆದು ಸುಸ್ತಾಗಿ ಗಾಯಿತ್ರಿ ಥಿಯೇಟರ್ ಹತ್ರ ಬಂದಾಗ, ಅದರ ಪಕ್ಕದಲ್ಲಿದ್ದ ಚಾಮುಂಡಿ ಟೆಕ್ಸ್ ಟೈಲ್ಸ್  ಮಳಿಗೆ ಮೇಲೆ ಕಣ್ಣು ಬಿತ್ತು. ಅಕ್ಕ ಎಷ್ಟೇ ಬೇಡವೆಂದರೂ ಅಕ್ಕನನ್ನೂ ಪೀಡಿಸಿ ಒಂಡು ಕಡು ನೀಲಿ ಬಣ್ಣದ ಜೀನ್ಸ್ ಒಂದನ್ನು ಕೊಂಡೇ ಬಿಟ್ಟ ವಾಸು ಸಾವಿರದೈನೂರು ತೆತ್ತು. ಕೊಂಡದ್ದೇನೋ ಕೊಂಡಾಯಿತು, ಮನೆಯಲ್ಲಿ ಏನೆನ್ನುವರೋ ಎನ್ನುವ ಭಯದಲ್ಲೇ ಮನೆಗೆ ಬಂದರು ಅಕ್ಕ ತಮ್ಮ. "ಅಮ್ಮ ಚಾಮುಂಡಿ ಟೆಕ್ಸ್ ಟೈಲ್ಸ್ ನಲ್ಲಿ ಒಳ್ಳೇ ಬ್ರಾಂಡ್ ಅಮ್ಮ, ಈ ಜೀನ್ಸ್ ಇದ್ಯಲ್ಲ, ಇನ್ನು ಮೂರು ವರ್ಷ ಬಾಳಿಕೆ ಬರುತ್ತೆ, ನೋಡು ನಂದು ಬೇರೆ ಪ್ಯಾಂಟ್ಸ್ ಎಲ್ಲಾ ಆಗ್ಲೆ ಹರ್ದೋಗ್ಬಿಟ್ಟಿದೆ" ಎಂದ. ಆದರೂ ಅಮ್ಮ "ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೋ, ಏನೋ ಕೊಂಡು ತಂದಿದೀಯ, ನಿಮ್ಮಪ್ಪ ಬೈದರೆ ನಂಗೊತ್ತಿಲ್ಲ, ಬರೀ ಪ್ಯಾಂಟ್ ಮಾತ್ರ ತಂದಿದೀಯ, ಶರ್ಟ್ ಕೂಡ ಇಲ್ಲ" ಎಂದು ಸುಮ್ಮನಾದರು. ಮಗಳನ್ನೂ ಸರಿಯಾಗಿ ಮಾತನಾಡಿಸಲಿಲ್ಲ. ಆಮೇಲೆ ಅಡಿಗೆ ಮನೆಗೆ ಬಂದಾಗ.."ನೀನಾದ್ರು ಹೇಳ್ಬಾರ್ದೇನೆ" ಎಂದರು.

ಅಪ್ಪ ಬಂದ ಕೂಡಲೇ ಟೀಪಾಯಿಯ ಮೇಲೆ ಇದ್ದ ಕವರ್ ಕಣ್ಣಿಗೆ ಬಿತ್ತು. ಏನಿದು ಎಂದು ನೋಡಿದಾಗ ಪ್ಯಾಂಟು. ಅಷ್ಟರಲ್ಲಾಗಲೇ ವಾಸುಗೆ ಎದೆ ಹೊಡೆದುಕೊಳ್ಳುತ್ತಿತ್ತು. ರೂಮಿನ ಬಾಗಿಲ ಬಳಿ ಬಂದು ನಿಂತ, ಎಷ್ಟು ಕೊಟ್ಟೆಯೋ ಎಂದರು, ಐನೂರಕ್ಕಿಂತ ಜಾಸ್ತಿ ಕೊಟ್ಟಿಲ್ಲ ತಾನೇ ಎಂದು ಮರುಪ್ರಶ್ನೆ ಎಸೆದರು. "ಇಲ್ಲಪ್ಪ ಇದು ಬ್ರಾಂಡೆಡ್ ಪ್ಯಾಂಟು, ಮೂರು ವರ್ಷ ಬಾಳಿಕೆ ಬರುತ್ತೆ, ಸಾವಿರ ಕೊಟ್ಟೆ" ಎಂದು ಉಗುಳು ನುಂಗುತ್ತಲೇ ಹೇಳಿದ. ಹೊರಗಿಂದ ಆಗ ತಾನೆ ದಣಿದು ಬಂದಿದ್ದ ಅವರಪ್ಪ ಯಾವ ಮುನ್ಸೂಚನೆಯೂ ಇಲ್ಲದೆಯೇ ಬಯ್ಯಲು ಶುರು ಮಾಡಿದರು. "ಜವಾಬ್ದಾರಿ ಅನ್ನೋದು ನಿಂಗೆ ಸ್ವಲ್ಪಾನಾದ್ರು ಇದ್ಯಾ?? ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಹೊರಗಡೆ ಹೋಗಿ ನಾಲ್ಕಾಣೆ ಸಂಪಾದಿಸ್ಕೊಂಡು ಬಾ ನೋಡೋಣ, ಆಗ ಗೊತ್ತಾಗುತ್ತೆ ನಿನ್ ಯೋಗ್ಯತೆ......................"
ಹಾಗೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚಿಗೆ ಸಾಗಿತು ಬಯ್ಗುಳ, ಅಕ್ಕನಿಗೂ, ಅಮ್ಮನಿಗೂ ಬಯ್ಗುಳದ ಪಾಲಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟ. ರಾತ್ರಿ ಊಟ ಕೂಡ ಮಾಡಲು ಬರಲಿಲ್ಲ ವಾಸು. ಹಸಿವಾಗಿರಲಿಲ್ಲವೆಂದಲ್ಲ, ಕರೆಯಲು, ಒಲೈಸಲು ಮನೆಯಲ್ಲಿ ಯಾರೊಬ್ಬರು ಬರದಿದ್ದು ಅವನಿಗೆ ಮತ್ತಷ್ಟು ನೋವುಂಟು ಮಾಡಿತ್ತು.

ಜೇಬಿನಲ್ಲಿದ್ದು ಬರೀ ನೂರು ರುಪಾಯಿ. ಪಾಸ್ ಇದ್ದುದರಿಂದ  ಬಸ್ ಹತ್ತಿಬಿಟ್ಟ.  ಮನೆ ಬಿಟ್ಟು ಹೋಗಬೇಕೆಂದು ರಾತ್ರಿಯೇ ನಿರ್ಧರಿಸಿದ್ದ. ನಾನು ದುಡ್ಡು ದುಡಿದೇ ಮನೆಗೆ ಬರುವೆನೆಂದು ಹೊರಟಿದ್ದ. ಅಂತಹ ನೂರಾರು ಪ್ಯಾಂಟುಗಳು ಕೊಳ್ಳಬೇಕು ನಾನು. ಯಾವನೊಬ್ಬನ ಹಂಗು ನನಗೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ. ಟೌನ್ ಹಾಲ್ ಸರ್ಕಲಿನಲ್ಲಿ ಇಳಿದು ಅಲ್ಲೆ ಪುಟ್ ಪಾತಿನ ಟೀ ಅಂಗಡಿಯಲ್ಲಿ ಕಾಫಿ-ಬನ್ನು ತಿಂದ. ಮನಸಿಗೇನೋ ಉಲ್ಲಾಸ. ಕೈಕಾಲುಗಳಿಗೆಂತಹುದೋ ಉತ್ಸಾಹ. ನಾನಿನ್ನು ಸ್ವತಂತ್ರನಾಗಿಬಿಟ್ಟೆ ಎಂದು. ಎದೆಯುಬ್ಬಿಸಿ ನಡೆಡಾಡಿದ. ಹತ್ತಿರದಲ್ಲೆ ಇರುವ ರೈಲ್ವೆ ಸ್ಟೇಷನ್ ಎಡೆಗೆ ದಾಪುಗಾಲು ಹಾಕತೊಡಗಿದ. ಇನ್ನು ಮುಂದೆ ಕಾಲೇಜಿಲ್ಲ, ಮನೆಯಲ್ಲಿ ಓದು ಓದು ಎನ್ನುವ ಕಿರಿ ಇಲ್ಲ, ಅಪ್ಪನ ಗಲಾಟೆ ಇಲ್ಲ. ಸರಿ ಎಲ್ಲಿಗೆ ಹೋಗುವುದು, ಹೆಚ್ಚು ತಡ ಮಾಡದೆ, ಯೋಚಿಸದೆ ಒಂದೇ ಉತ್ತರ ಕೊಟ್ಟಿತು ಮನಸು "ಮುಂಬಯಿ" ಎಂದು. ಅಲ್ಲಿಗೆ ಹೋಗಿ ಎಂತೆಂತಹವರೋ ಏನೇನೇನೋ ಆಗೋಗಿದ್ದಾರೆ, ಶಾರುಕ್ ಖಾನ್ ದಿಲ್ಲಿಯಿಂದ ಬಂದವ, ಈಗ ಹೇಗಾಗಿದ್ದಾನೆ? ಸಮುದ್ರದ ಮುಂದೆ ನಿಂತು ಇಡೀ ಮುಂಬಯಿಯನ್ನು ಆಳುತ್ತೇನೆಂದು ಹೇಳಿದನಂತೆ, ನಾನು ಹಾಗೆಯೇ ಹೇಳಬೇಕು, ಆದಷ್ಟು ಬೇಗ ಮುಂಬಯಿ ಸೇರಬೇಕು. ಅವನಿಗಾಗಿ ಸಮುದ್ರ ಕಾದಿದೆಯೇನೊ ಎಂದು ಚಡಪಡಿಸತೊಡಗಿದ. ನಾನು ಅಲ್ಲಿಗೇ ಹೋಗುತ್ತೇನೆ, ದೊಡ್ಡ ವ್ಯಕ್ತಿಯಾಗಿ ಮತ್ತೆ ಈ ಊರಿಗೆ ಕಾಲಿಡುತ್ತೇನೆ ಎಂದು ಮತ್ತೊಮ್ಮೆ ಧೃಡವಾಗಿ ನಿರ್ಧರಿಸಿದ.

ಮನೆ ಬಿಟ್ಟವರೆಲ್ಲರ ಇತಿಹಾಸ ಜೀಕುತ್ತಾ ನಡೆಯುತ್ತಿದ್ದ. ನಮ್ಮ ಕನ್ನಡದ ಖ್ಯಾತ  ನಿರ್ದೇಶಕ ಎಸ್.ನಾರಾಯಣ್ ಕೂಡ ಮನೆ ಬಿಟ್ಟವರೆ. ಭಾರತ ರತ್ನ ಭೀಮ್ ಸೇನ್ ಜೋಶಿಯವರೂ ಕೂಡ ಸಂಗೀತ ಕಲಿಯಲೆಂದು ಹದಿನಾಲ್ಕನೆಯ ವಯಸ್ಸಿನಲ್ಲಿ ಮನೆ ಬಿಟ್ಟರಂತೆ, ಹಾಗೆ ನೋಡಿದರೆ ನನಗೆ ಆಗಲೇ ಇಪ್ಪತ್ತು ವರ್ಷವಾಗಿದೆ, ಬಹಳ ಲೇಟ್ ಮಾಡಿದೆ ಎಂದು ಅನಿಸಿತು ವಾಸುಗೆ. ಅವರೆಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂದು ದಾರಿಯುದ್ದಕ್ಕೊ ಹಗಲುಗನಸು ಕಾಣುತ್ತ ಬಂದ. ಇರುವುದು ನೂರೇ ರುಪಾಯಿ ಹೇಗೆ ತಲುಪುವುದು ಮುಂಬಯಿಯನ್ನು. ರೈಲು ಹತ್ತಿ ಟಿ.ಟಿ. ಬರುವ ವೇಳೆಗೆ ಟಾಯ್ಲೆಟ್ಟಿನಲ್ಲಿ ಕೂತು ಬಿಡುವ ತಂತ್ರ ಹೂಡಿದ. ರಾತ್ರಿ ಸರಿಯಾಗಿ ನಿದ್ದೆ ಇಲ್ಲದುದರ ಕಾರಣ ನಡೆದು  ಸುಸ್ತಾದ. ಅಷ್ಟರಲ್ಲಿ ಕಾರ್ಪೊರೇಶನ್ ಬಳಿ ಒಂದು ಪಾರ್ಕು ಕಂಡ. ಒಳಗೆ ಹೋಗಿ ಒಂದು ಮರದ ನೆರಳಿನಲ್ಲಿ ಹಾಗೆ ನೆಲಕ್ಕೆ ಒರಗಿಕೊಂಡ. ಸೊಂಪಾದ ನಿದ್ರೆಗೆ ಜಾರಿದ. ಬಿ.ಹೆಚ್ ರಸ್ತೆಯಲ್ಲಿ ಕೆಟ್ಟದಾಗಿ ಹಾರ್ನ್ ಮಾಡುತ್ತ ಮೆಲ್ಲಗೆ ತೆವಳುತ್ತಿದ್ದ ವಾಹನಗಳು ವಾಸುವಿನ ನಿದ್ರೆಗೆ ಭಂಗ ತರಲಿಲ್ಲ.

ಅಮ್ಮ ಭೋರಿಟ್ಟು ಅಳುತ್ತಿದ್ದಳು ,ಮಾತು ಮಾತಿಗೂ ಎದೆಯೊಡೆದುಕೊಳ್ಳುತ್ತಿದ್ದಳು. ಸರಿಯಾಗಿ ಮನೆಯವರೆಲ್ಲ ಊಟ, ನಿದ್ರೆ ಮಾಡಿ ಒಂದು ವಾರದ ಮೇಲಾಗಿತ್ತು. ವಾಸುನ ಪತ್ತೆಯೇ ಆಗಿರಲಿಲ್ಲ. ಎಲ್ಲಿ ಹೋದ ?, ಏನಾದ ? ಯಾರೊಬ್ಬರಿಗೂ ಸುಳಿವಿರಲಿಲ್ಲ. ಅವರ ಸ್ನೇಹಿತರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದಾಗಲೇ ದಿನಪತ್ರಿಕೆಗಳಲ್ಲಿ , ನ್ಯೂಸ್ ನಲ್ಲಿ ಕಾಣೆಯಾಗಿದ್ದನೆಂದು ಪ್ರಕಟಣೆ ಕೊಟ್ಟಿದ್ದರೂ ಸಹ..ಉಹೂಂ ಏನೂ ಪ್ರಯೋಜನವಾಗಿರಲಿಲ್ಲ. ಅವರಪ್ಪನಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಕಟಣೆ ಹೊರಡಿಸಿದ್ದರು, ಅದೂ ದಿನಪತ್ರಿಕೆಯ ಫ್ರಂಟ್ ಪೇಜಿನಲ್ಲಿ. ಮುಂಬೈ ಪೋಲಿಸರು ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ ವಾಸುವನ್ನು ಹಿಡಿದು ತುಮಕೂರಿಗೆ ಕರೆತಂದರು. ಮನೆಗೆ ಕಾಲಿರಿಸಿದ ಕೂಡಲೆ ಅಮ್ಮ ಓಡಿಬಂದು ಅವನನ್ನು ತಬ್ಬಿಕೊಂಡು "ಎಲ್ಲಿ ಹೋಗ್ಬಿಟ್ಟಿದ್ದೆ ಕಂದಾ, ಯಾಕ್ ಹಿಂಗ್ ಮಾಡ್ದೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಒಂದಾದ ಮೇಲೊಂದು ಪ್ರಶ್ನೆ ಕೇಳುತ್ತಲೇ ಅವನನ್ನು ಜಗ್ಗಾಡುತ್ತಿದ್ದರು.

ಧಿಗ್ಗನೆ ಎದ್ದು ಕುಳಿತ ವಾಸು. ಕಣ್ಣೆಲ್ಲಾ ಮಂಜು ಮಂಜು. ಸೂರ್ಯ ಅದಾಗಲೇ ತನ್ನ ದಿನಗೆಲಸವನ್ನು ಮುಗಿಸಿ ಮನೆ ಸೇರಿದ್ದ. ಬಿ.ಹೆಚ್ ರಸ್ತೆಯಲ್ಲಿ ವಾಹನಗಳು ಗಿಜುಗುಡುತ್ತಲೇ ಇದ್ದವು. ಅಲ್ಲೇ ಎದುರಿಗೆ ಇದ್ದ ಹೋಟೆಲಿನಲ್ಲಿ ಇಡ್ಲಿ, ವಡೆ ತಿಂದು ಕಾಫಿ ಕುಡಿಯಲು ಶುರು ಮಾಡಿದ. ಬಿದ್ದ ಕನಸಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಸಮಯ ನೋಡಿಕೊಂಡ, ಆಗಲೇ ರಾತ್ರಿ ಎಂಟು ಗಂಟೆಯಾಗಿದೆ. ಅಮ್ಮ ಗಾಭರಿ ಆಗಿರುತ್ತಾಳೆ, ಇಷ್ಟೊತ್ತಿಗೆ ಎಷ್ಟು ಬಾರಿ ಅತ್ತಳೊ? ಅಕ್ಕ ಪಾಪ ಅವಳು ತಾನೆ ಏನು ಮಾಡಿಯಾಳು, ಅಮ್ಮನನ್ನು ಸಂತೈಸುತ್ತಿರಬಹುದು 
ಅಲ್ಲಿಂದ ನೇರವಾಗಿ ಹಳೆ ಬಸ್ ಸ್ಟಾಂಡಿಗೆ ನಡೆದು ಸಂಪಂಗಿ ಬಸ್ಸನ್ನೇರಿದ. ದಾರಿಯುದ್ದಕ್ಕೊ ತಾನು ಕೆಟ್ಟ ನಿರ್ಧಾರ ಮಾಡಿದೆ. ಇಲ್ಲೇ ಈಸಬೇಕು, ಇಲ್ಲೇ ಜಯಿಸಬೇಕು ಎಂದು ದಾಸರನ್ನು ನೆನೆದ. ಮನೆಗೆ ತಾನೊಬ್ಬನೇ ಗಂಡು ಹುಡುಗ, ನಾನು ಈಗ ಬೇಜವಾಬ್ದಾರಿಯಿಂದ ಹೊರಟು ಬಿಟ್ಟರೆ ನಾಳೆ ಅಕ್ಕನಿಗೆ ಮದುವೆ ಮಾಡಿಸುವವರು ಯಾರು? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? ಅವನ ಮನಸಿಗೆ ಬಂದ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳಲು ವಿಫಲನಾದ.

ಬಸ್ ಇಳಿದು ಊರು ಮುಟ್ಟುತ್ತಲೇ ಬೆವರಲಾರಂಭಿಸಿದ, ಎಲ್ಲರೂ ಇವನನ್ನೇ ನೋಡುತ್ತಿದ್ದಾರೆನಿಸಿತು. ಯಾರೋ ಇವನೆಡೆಗೆ ಕೈತೋರಿಸಿದ ಹಾಗಾಯಿತು, ತಿರುಗಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಮೆಟ್ಟಿಲೇರತೊಡಗಿದ, ಅಮ್ಮ ನನ್ನನ್ನು ನೋಡಿದ ಕೂಡಲೇ ಅಪ್ಪಿಕೊಂಡು ಅಳುತ್ತಾಳೆ, ಅವಳನ್ನು ಸಮಾಧಾನ ಪಡಿಸುವುದು ಹೇಗೆ ?, ಅಪ್ಪ ಇನ್ನು ಮೇಲೆ ನಿನಗೆ ಬಯ್ಯುವುದಿಲ್ಲವೋ ಎಂದು ಹೇಳುತ್ತಾರೆ ಎನ್ನುವ ಹೊತ್ತಿಗೆ ಮನೆ ಬಾಗಿಲ ಬಳಿ ಬಂದ. ಬಾಗಿಲು ತಟ್ಟುವ  ಮುಂಚೆಯೇ ಬಾಗಿಲು ತೆರೆದುಕೊಂಡಿತು, ಅಪ್ಪ ಎದುರಿಗೆ ಬಂದು "ಲಫಂಗ, ಮನೆಗೆ ಎಷ್ಟೊತ್ತಿಗೆ ಬರೋದು, ಎಲ್ಲಿ ತಿರುಗಾಡೋಕೆ ಹೋಗಿದ್ದೆ ?, ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ನಿಂಗೆ, ನಿಂಗ್ಯಾವತ್ತಿಗೆ ಬುದ್ದಿ ಬರತ್ತೋ ನಾ ಬೇರೆ ಕಾಣೆ..." ಎನ್ನುತ್ತಲೇ ಅವರು ಎಂದಿನ ಪ್ರವರ ಮುಂದುವರೆಸಿದರು. ನಡು ಮನೆವರೆಗೂ ಬಂದು ಅಮ್ಮನಿಗಾಗಿ ಅಡುಗೆ ಮನೆಯೆಡೆಗೆ ಬಗ್ಗಿ ನೋಡಿದ, ಅಮ್ಮ, ಅಕ್ಕ ಇಬ್ಬರೂ ಚಪಾತಿ ಸುಡುತಿದ್ದರು
ದಿಂಬು ತನಗಾಗಿ ಕಾದಿದೆ ಎಂದು ರೂಮಿನೆಡೆಗೆ ನಡೆದ.

-ಅರೆಯೂರು ಚಿ.ಸುರೇಶ್
ಪತ್ರಕರ್ತರು
ಪ್ರಜಾಮನ ದಿನಪತ್ರಿಕೆ
ತುಮಕೂರು
7090564603

23-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಮಂಗಳವಾರ, ಡಿಸೆಂಬರ್ 18, 2018

16-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಎಲ್ಲಿರುವೆ ನೀ ಚಲುವೆ...?


ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್
ತುಮಕೂರು



ವಿಪರ್ಯಾಸ
ನನ್ನ ಕಾವ್ಯಕ್ಕೆ ಸ್ಫೂರ್ತಿಯಾದ ಹುಡುಗಿ
ನನ್ನ ಬಾಳಿಗೆ ವರವಾಗಲಿಲ್ಲ,
ನನ್ನ ಹಾಡಿಗೆ ದನಿಗೂಡಿಸಿದ ಬೆಡಗಿ
ಕೈಗೆ ಸಿಗುವ ನಕ್ಷತ್ರವಾಗಲಿಲ್ಲ...
ಅವಳ ನಗುವಿನಲ್ಲೇ ಬರೆಸಿದಳು ನೂರಾರು ಕವಿತೆ
ಅವಳ ಪ್ರೀತಿಯ ನೋಟಕ್ಕೆ ಇದೆಯೇ ಸರಿಯಾದ ಅಳತೆ,
ಅವಳ ಮಾತಿನಲ್ಲಿದೆ ನೂರಾರು ಕವಿತೆ ಕವನಗಳ ಸಿಂಚನ
ಅರ್ಧ ಪಡೆಯಿತು ಇನ್ನರ್ಧ ಪಡೆಯಲು ಸೋತಿತು ಈ ಮನ...
ಜೀವನದಲ್ಲಿ ಏನೂ ಮಾಡಲಾಗದು ಎಂದು ಕುಳಿತವನಿಗೆ
ಕವಿ ಹೃದಯ ತುಂಬಿದಳು ಆದರೆ ಹೃದಯ ತುಂಬಲಿಲ್ಲ,
ಅವಳಾಗಿದ್ದಳು ಮೈಸೂರಿನ ಬಿಳಿಯ ಮಲ್ಲಿಗೆ
ಆದರೆ ಆ ಮಲ್ಲಿಗೆ ಒಲಿಯಲಿಲ್ಲ ಅರೆಯೂರಿನ ಈ ಕವಿಗೆ...


-ಅರೆಯೂರು ಶ್ರೀವೈದ್ಯಸುತ
ಅರೆಯೂರು ವೈದ್ಯನಾಥಪುರ