BREKING NEWS

ಭಾನುವಾರ, ಫೆಬ್ರವರಿ 16, 2014

ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು ಗೋಲ್ ಅಲ್ಲ, ಹತ್ತಿನಿಂದ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತಾ ಹೋಗುವಂತಹದು. ಅದಕ್ಕೆ ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತಾ ಕೊತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಯೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ., ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.
ನೀವು ಇತಿಹಾಸವನ್ನೇ ನೋಡಿ, ಅಲ್ಲೆಲ್ಲೋ ಅಲೆ ಕ್ಝಾಂಡರ್‍ ಇದ್ದಾನೆ. ತಾಮರ್‍ಲೆನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೆ. ಇವರೆಲ್ಲರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡಿದಾಗ, ಎಲ್ಲರಲ್ಲೂ ಕೆಲವು ಕಾಮನ್ ಕ್ವಾಲಿಟಿಗಳಿದ್ದವು. ಅನಿಸುತ್ತದೆ. ಅವರು ಬದುಕಿದ್ದ ಕಾಲ ಯವುದೇ ಇರಲಿ. ಆಗುಣಗಳು ಮಾತ್ರ ಕಾಮನ್ನಾಗಿ ಇಲ್ಲರಲ್ಲೂ ಇರುತ್ತವೆ. ಆಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ ನನ್ನು ನೋಡುತ್ತೇವೆ. ಹುಮಾಯೂನನ ಬಲಹೀನತೆಗಳು ಏನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು ಅವೈಡ್ ಮಾಡಿ. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.
ಇಷ್ಟಕ್ಕೂ ಗೆಲುವೆಂಬುದು ಬಹಳ ನಿಘೂಡತೆಯೇ ಅಲ್ಲ. ಅದರಲ್ಲಿ ರಹಸ್ಯವೆಂಬ ಮಣ್ಣಂಗಟ್ಟಿಯೂಇಲ್ಲ. ಕೆಲುವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದ್ರುಷ್ಟವಂತನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲುವರಿಗೆ ’ಗೆಲುವು’ ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವಿ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣ್ಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವಿ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಮಾಧಾನ, ಸಂತೋಷ. ಮನಸ್ಸಿನ ನೆಮ್ಮದಿ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ.  ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೆನ್ನೋ ಆಗಿರಲೂ ಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿ ಬಿಡಲೂಬಹುದು ಆದರೆ ಕರಾರುವಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ ಚೇಸ್ ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.
ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೇ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ ಫೀಲ್ ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೇ ನಿಲ್ಧಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? ಪಾಸಿಟೀವ್ ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದುವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.
ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟ್‌ಗಳನ್ನು ’ಆಹಾ’ ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ದಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ: ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಷವಲ್ಲ. ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ.ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.
ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್‌ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ.
- ಅರೆಯೂರು ಚಿ.ಸುರೇಶ್, ತುಮಕೂರು.
 http://www.vknews.in/2014/02/10/geluvu-lekhana/