ಮಂಗಳವಾರ, ಮೇ 29, 2018

ನಾನಿಟ್ಟ ರಂಗೋಲಿ



ಮನೆಯಂಗಳದಲ್ಲಿ
ನಾನಿಟ್ಟ ಚುಕ್ಕಿ ಸಾಲು
ಒಂದಲ್ಲ ಎರಡಲ್ಲ
ಹತ್ತಾರು ಸಾಲು ಸಾಲು
ಚುಕ್ಕಿ ಚುಕ್ಕಿಗೂ
ಅದೇನೋ ನಂಟು
ಸಾಲು ಸಾಲು ಸೇರುತ
ಮೂಡಿತಲ್ಲಿ ಹೂದಂಟು
ಮತ್ತಹಲವು ರೇಖೆಗಳು
ನೃತ್ಯ ಮಾಡುತ ನಗಲು
ಅಲ್ಲಲ್ಲಿ ಖಾಲಿ ಚುಕ್ಕಿಗಳು
ಒಂಟಿತನದ ಚಿಂತೆ ಕಾಡಲು
ಅರಳಿತು ಹೂವೊಂದು
ಮುದ್ದಾದ ರೂಪದೊಳು
ಹೇಳಿತು ಕಥೆಯೊಂದ
ಚುಕ್ಕಿಯ ಸಾಲುಗಳು
ಭಾವನೆಗಳ ಬಿಂಬಿಸುವ
ಬಣ್ಣಗಳ ಶೃಂಗಾರವು
ರಂಗೋಲಿ ಚಿತ್ತಾರ ನೀಡುವ
ಮೆನೆಯಂಗಳದ ಚೆಲುವು
ನಾನಿಟ್ಟ  ರಂಗೋಲಿ...


-ಅರೆಯೂರು ಚಿ.ಸುರೇಶ್, ತುಮಕೂರು

ಎಲ್ಲಿರುವೆ ನೀ ಚಲುವೆ...?

<marquee> ಕವನ:ಎಲ್ಲಿರುವೆ ನೀ ಚಲುವೆ...? </marquee>



ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್, ತುಮಕೂರು

ಭಾನುವಾರ, ಫೆಬ್ರವರಿ 16, 2014

ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಶುಕ್ರವಾರ, ಜನವರಿ 24, 2014

ಕಥೆ:ಆತ್ಮದ ಸ್ವಗತ


ಕಥೆ
ಆತ್ಮದ ಸ್ವಗತ
          ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ ದಾಸನ ಕಟ್ಟೆಯೆತ್ತ ಹರಿಯುತ್ತಿತ್ತು.
          ಅವತ್ತಿನ ಮಧ್ಯಾಹ್ನ ಯಮಕರೆದ ಕೂಗಿನಂತಹ ಕೂಗೊಂದು ತಲೆಯೊಳಗೆ ಸಿಡಿದು ಈ ಲೋಕವೇ ಬೇಡವಾಗಿ ಮನೆಯಲ್ಲಿದ್ದ ದನದ ಹಗ್ಗವೊಂದನ್ನು ಹೆಗಲಿಗೆಸೆದುಕೊಂಡು ಮುದ್ರಾಮಕ್ಕರ ಮಾವಿನ ತೋಪಿನತ್ತ ಹೊರಟು ಬರೀ  ನೆಲದಲ್ಲೇ ಹರಡಿ ನಿಂತ ಮಾವಿನ ಮರಗಳಿರುವ ಆ ತೋಪಿನಲ್ಲಿ ನನ್ನ ಹೆಣದ ಭಾರ ಹೊರುವಂತಹ ಗಟ್ಟಿ ರೆಂಬೆಯ ಮರವನ್ನು ಹುಡುಕುತ್ತಾ ಅಲೆದು ಅಲೆದು ಕೊನೆಗೂ ಸಿಕ್ಕ ದಷ್ಟ ಪುಷ್ಟ ಮಾವಿನ ಮರದ ದಪ್ಪನೆ ಕೊಂಬೆಯೊಂದಕ್ಕೆ ನೇಣು ಹಾಕಿಕೊಂಡು ವಿಲವಿಲ ಒದ್ದಾಡಿ ಸತ್ತು ಹೋದೆ. ನಾನು ಸತ್ತಿದ್ದು ಸಹಿಸಲಾರದೇನೆ ಏನೋ ಎಂಬಂತೆ ಆಕಾಶ ಕಣ್ಣೀರಿನಂತೆ ಮಳೆ ಸುರಿಸಿದ್ದು.        ಮಳೆ ನಿಂತ ಮೇಲೆಯೂ ಕೂಡ ಮರ ನನ್ನ ಸಾವಿಗೆ ಕಣ್ಣೀರು ಸುರಿಸುತ್ತಲೇ ಇತ್ತು ಅದೆಲ್ಲಿಂದಲೋ ಹಾರಿಬಂದ ಕಾಗೆಯೊಂದು ಶವವಾಗಿ ನೇತಾಡುತ್ತಿದ್ದ ನನ್ನ ತಲೆಯ ಮೇಲೆ ಕುಳಿತು ಸ್ಪ್ರಿಂಗಿನಂತಹ ಅದರ ಕೊರಳನ್ನು ಅತ್ತಿತ್ತ ತಿರುಗಿಸಿ ತನ್ನ ಕಪ್ಪು ಕೊಕ್ಕನ್ನು ನನ್ನ ಹಣೆಯ ಮೇಲಿಟ್ಟು ಗಸಗಸನೆ ಕತ್ತಿ ಮನೆಯುವಂತೆ ಆಡಿಸಿತು. ಆಹಾ! ದುರ್ವಿಧಿಯೇ ಬದುಕಿದ್ದಾಗ ಕಾಗೆಯೆಂಬ ಕಾಗೆ ತಲೆಗೆ ಬಡಿದರೆ ಕಷ್ಟಗಳು ಬರುವವಂತೆ ಹಾಗಾದರೆ ಸತ್ತ ನನಗೆ ಇನ್ನೆಷ್ಟು ಕಾಟವೋ ಕಾಣೆನಲ್ಲ.
ಮಳೆ ಸುರಿದ ತಂಪಿಗೇನೋ ಎಂಬಂತೆ ಸಂಜೆ ಸೂರ್ಯ ನಿಂದ ಆಗಸವೆಲ್ಲ ಕೆಮ್ಮುಗಿಲಿನಿಂದ ಕಂಗೊಳಿಸುತ್ತಿತ್ತು ಅಂಥ ದೈವದತ್ತ ಪ್ರಕೃತಿ ಸಹಜ ಕತ್ತಲು ತನ್ನ ಸುತ್ತ ಆವರಿಸುತ್ತಿದ್ದರು ಯಾವ ಬಯವೂ ಇಲ್ಲದೆ ಹೀಗೆ ಜಂಟಿಯಾಗಿ ಮುದ್ರಾಮಕ್ಕನ ಮಾವಿನ ತೋಪಿನಲ್ಲಿ ರಾತ್ರಿಯೆಲ್ಲಾ ಒಬ್ಬನೇ ಕಳೆಯುವ ಅವಕಾಶ ನೆನೆದು ನನ್ನೀ ಸಾಹಸಕ್ಕೆ ನನಗೆ ಬೆರಗಾಯಿತು.
          ದನದ ಹಗ್ಗದಿಂದ ಈ ಮಾವಿನ ಮರದ ರೆಂಬೆಗೆ ಸುತ್ತಿ ಕುಣಿಕೆಯ ಕೊರಳಿಗೆ ಸುತ್ತಿಕೊಂಡು ಸುಮ್ಮನೆ ಕೆಳಗೆ ಜಿಗಿದು ಗಂಟಲ ನರಗಳು ಉಬ್ಬಿ ಬಿಗಿಯಾದ ಹಗ್ಗ ಹಿಡಿತದಿಂದ ವಿಲವಿಲ ಒದ್ದಾಡುತ್ತಾ ಪ್ರಾಣ ಬಿಡುವಾಗಲೂ ಕೂಡ ಈ ಭೂಮಿಯ ಯಾವೊಬ್ಬ ನರಪಿಳ್ಳೆಯೂ ನೆನಪಾಗಲಿಲ್ಲವಲ್ಲ ನನಗೆ ಆತ್ಮಹತ್ಯೆಗೆ ನಿರ್ಧರಿಸುವುದು ಒಂದು ಸಾಹಸ.
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನವಾದರೂ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡುವಷ್ಟು ದಿವ್ಯವಾಗಿ ನೆಮ್ಮದಿಯಿಂದ ಒದ್ದಾಡುತ್ತಾ ಇನ್ನೇನು ನಿಲ್ಲುವ ಉಸಿರಿಗಾಗಿ ಕಾಯುವುದು ಸಮಾಧಿಯ ಪರಮ ಸಾಹಸ. ಅಂತಹ ಸಮಾಧಿಯನ್ನು ಹೊಂದಿದ ನಾನು ಖಂಡಿತ ಯಾವೊಬ್ಬ ಋಷಿ ಮುನಿಗೂ ಕಮ್ಮಿಯಿಲ್ಲವೆಂಬುದು ಮನದಟ್ಟಾಗಿ ನನ್ನ ಬಗ್ಗೆಯೇ ನನಗೆ ಹೆಮ್ಮೆಯೆನಿಸುತ್ತಿತ್ತು.
ಕಗ್ಗತ್ತಲಿನಲ್ಲಿ ಹೀಗೆ ಅನಾಥ ಹೆಣವಾದುದ್ದಕ್ಕೆ ಯಾವ ದುಃಖವೂ ಇಲ್ಲದೆಯೇ ನಿರಾಳವಾಗಿ ಕಾಲ ಕಳೆಯುತ್ತಿದ್ದರೆ ಬೆಳಗಿನ ಜಾವ ಮೂಡಣದಿ ಮೂಡಿದ ಭಾಸ್ಕರ ಇಡೀ ಮಾವಿನ ತೋಪಿಗೆ ನನ್ನ ಹೆಣವನ್ನು ತೋರಿಸಿದ.
ಅಂದು ನಾನು ಸತ್ತ ದಿನದ ಮೊದಲ ಬೆಳಗು ಸತ್ತ ಹಬ್ಬ! ಬದುಕಿದ್ದಾಗ ಎಂದಿಗೂ ಜನರ  ಚರ್ಚೆಗೆ ಗ್ರಾಸವಾಗದ ನಾನು ಸತ್ತ ಮೇಲೆ ಈ ಬೆಳಗಿನಲ್ಲಿ ಖಂಡಿತವಾಗಿಯೂ ಊರಿನವರಿಗೆಲ್ಲಾ ಚರ್ಚಾಸ್ಪದ ವಿಷಯವಾಗಲಿದ್ದೇನೆಂಬ ಖುಷಿಯ ತಳಮಳದ ಜೊತೆಗೆ ಯಾರ್ಯಾರು ಏನೇನೆಲ್ಲಾ ಅಂದು ಕೊಳ್ಳ ಬಹುದೆಂದು ಯೋಚಿಸತೊಡಗಿದೆ.
ಬೆಳಗಿನ ಬಹಿರ್ದೆಸೆಗೆಂದು ಅತ್ತ ಬಂದಿದ್ದ ವಡ್ಡರ ಗ್ಯಾಸ್ ದೊಡ್ಡನ ಕಣ್ಣಿಗೆ ನನ್ನ ಶವ ಬಿತ್ತು ವಿಚಿತ್ರವಾಗಿ ಗಾಬರಿಗೊಂಡ ಗ್ಯಾಸ್ ದೊಡ್ಡ ಸ್ವಲ್ಪ ತುಸು ಮುಂದಕ್ಕೆ ಬಾಗಿ ಕ್ಷಣ ನಿಂತು ನನ್ನ ಶವದತ್ತಲೇ ದಿಟ್ಟಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆಗಳನ್ನಿಡುತ್ತಾ ಮೆಲ್ಲನೆ ಸುಮಾರು ಹತ್ತು ಮಾರುಗಳಷ್ಟು ನನ್ನ ಶವದ ಹತ್ತಿರ ಬಂದವನು ತನ್ನ ಮುಖವನ್ನು ಭೀಭತ್ಸ ಭಾವದಲ್ಲಿ ವಿಕೃತಗೊಳಿಸಿಕೊಂಡು ಎದುಸಿರು ಬಿಡುತ್ತಾ ವಾಪಾಸ್ಸು ತಿರುಗಿ ಎದ್ದು-ಬಿದ್ದು ಓಡತೊಡಗಿದ ಅವನ ಈ ದಯನೀಯ ಸ್ಥಿತಿ ನನಗೆ ನಗು ಬರಿಸುತ್ತಿತ್ತು.
ಅವನು ಓಡಿಹೋಗಿ ಊರವರಿಗೆ ನನ್ನ ಸಾವಿನ ಸುದ್ದಿ ಮುಟ್ಟಿಸುತ್ತಿದ್ದಂತೆ ನನ್ನ ಹುಡುಗಿ ಓಡಿ ಬರಬಹುದು ಬಂದು ಗೊಳೋ ಎಂದ ಅಳಬಹುದೇ? ಇಲ್ಲ ದೂರದಲ್ಲಿ ನಿಂತು ನೋಡಿ ಸುಮ್ಮನೆ ಹೊರಟು ಹೋಗಬಹುದಾ? ನಿಜಕ್ಕೂ ನನ್ನ ಸಾವು ಅವಳಿಗೆ ಕಣ್ಣೀರು ತರಿಸಬಹುದೇ? ಮನಸ್ಸು ಒಂದು ಕ್ಷಣ ವಿಚಲಿತಗೊಂಡಿತ್ತು. ಮರುಕ್ಷಣವೇ ಎಲ್ಲಾ ಮನವೆಂಬ ಮರ್ಕಟವೇ ಸತ್ತು ಹೆಣವಾದರೂ ನಿನ್ನೀ ಆಸೆ ಹೋಗಲಿಲ್ಲವಲ್ಲ ಎನಿಸಿತು.
ಅಷ್ಟರಲ್ಲಿ ಊರಿನ ಕಡೆಯಿಂದ ಗುಂಪೊಂದು ಮಾವಿನ ತೋಪಿನತ್ತ ಧಾವಿಸುತ್ತಿತ್ತು ಮೂಡಣದ ಭಾಸ್ಕರನ ಎಳೆಬಿಸಿಲ ಝಳ ನನ್ನ ಶವಕ್ಕೆ ರಾಚುತ್ತಿತ್ತು ಗುಂಪು ಹತ್ತಿರವಾಗುತ್ತಿದ್ದಂತೆಲ್ಲಾ ನನ್ನ ಕಣ್ಣುಗಳು ಮಂಜಾಗುತ್ತಿದ್ದವು. . .
                                                                                  -ಅರೆಯೂರು ಚಿ.ಸುರೇಶ್

 ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾದ ಕಥೆ

ಕವಿತೆ:ಸಂಕ್ರಾಂತಿ

ಹೊಸ ವರುಷ ಬಂತು
ಹೊಸ ಹುರುಪು ತಂತು
ಸಂಕ್ರಾಂತಿ ಬಂತು
ಸಂತೋಷ ತಂತು
ನೇಸರನು ಪಥವ ಬದಲಿಸುತ್ತಿರಲು
ಮಾವು ಹೂ ಬಿಟ್ಟು ಸ್ವಾಗತಿಸುತ್ತಿದೆ
ತನುಮನದಲ್ಲಿ ಹೊಸ ಚೈತನ್ಯ ಮೂಡುತ್ತಿದೆ
ಹೊಸ ಬೆಳೆ ಹೊಸ ಕಾಂತಿ
ಜಗದಲಿ ಹರಡುತಿದೆ
                                           -ಅರೆಯೂರು ಚಿ.ಸುರೇಶ್


 ದಿನಾಂಕ:15/01/2014ರಂದು ರೇಡಿಯೋ ಸಿದ್ದಾರ್ಥ (90.8 FM0 ದಲ್ಲಿ ಪ್ರಸಾರವಾದ ಕವಿತೆ.

ಕಥೆ:ಸವಿಸವಿ ನೆನಪು



ಕಥೆ
ಸವಿಸವಿ ನೆನಪು
          ಆಫೀಸಿನಲ್ಲಿ ಕುಳಿತು ಸಚಿವ ಟಿ.ಬಿ. ಜಯಚಂದ್ರ ಬಗ್ಗೆ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ವರದಿ ಬರೆಯುತ್ತಿದ್ದೆ ಆಗ ರಿಸಪ್ಷನ್ ಹುಡುಗಿ ಶಾಲಿನಿ ಬಂದು ಸಾರ್ ನಿಮಗೊಂದು ಲೆಟರ್ ಇದೆ ಎಂದು ಹೇಳಿ ಪತ್ರವೊಂದನ್ನು ನನ್ನ ಕೈಗಿತ್ತು ಹೋದಳು. ನನ್ನ ಹೆಸರಿಗೆ ಕಛೇರಿ ವಿಳಾಸಕ್ಕೆ ಕಾಗದ ಬರೆದವರು ಯಾರೆಂದು ಗೊತ್ತಾಗದೆ ಯಾರು ಬರೆದಿರಬಹುದೆಂದು ಕಾಗದ ತಿರುಗಿಸಿ ಅಲ್ಲಿ ಕಂಡ ಹೆಸರು ಕಂಡು ಹಾಗೆ ನೆನಪಿನಾಳಕ್ಕೆ ಜಾರಿದೆ . . .
          ನನ್ನೆದೆಗೆ ಮೊದಲ ಮಳೆ ಬಿದ್ದ ಆದಿನ ನನಗಿನ್ನು ನೆನಪಿದೆ. ಅಂದು ಶನಿವಾರ  ಮಾರ್ನಿಂಗ್ ಕ್ಲಾಸ್ ! ಬೆಲ್ಲು ಹೊಡೆಯಲು ಹತ್ತು ನಿಮಿಷವಿರುವಾಗಲೆ ಜಡಿ ಮಳೆ ಪ್ರಾರಂಭವಾಗಿತ್ತು ಬೆಲ್ಲು ಹೊಡೆಯುತ್ತಿದ್ದಂತೆ ಎಲ್ಲರೂ ಕ್ಲಾಸ್ ರೂಮಿಂದ ಹೊರಗೆ ಬಂದು ವರಾಂಡದಲ್ಲಿ ಮಳೆ ಹನಿಯೊಂದಿಗೆ ಆಟವಾಡುತ್ತಾ ನಿಂತು ಬಿಟ್ಟೆವು. ನನ್ನ ಪಕ್ಕ ಬಂದು ನಿಂತವಳು ಮಳೆ ಹನಿಗೆ ಕೈಯೊಡ್ಡಿ ಕುಣಿಯುತ್ತಿದ್ದಳು. ಆಗ ನನಗೇಕೆ ಹಾಗೆನ್ನಿಸಿತೋ ಕಾಣೆ. ಸುರಿಯುತ್ತಿದ್ದ ಮಳೆಗೆ ಕೈಯೊಡ್ಡಿ ನೀರನ್ನು ಅವಳ ಮುಖಕ್ಕೆ ರಾಚಿಬಿಟ್ಟೆ. ಅವಳ ಮುಖ ನೀರಲ್ಲಿ ತೊಯ್ದು ಹೋಯ್ತು ನಿಂತಿದ್ದ ಹುಡುಗರೆಲ್ಲ ಗೊಳ್ಳೆಂದು ನಕ್ಕುಬಿಟ್ಟರು. ಅವಳು ಸಿಟ್ಟಿನಿಂದ ನನ್ನ ಬೆನ್ನತ್ತಿದಳು. ನಾನು ಆ ಮಳೆಯಲ್ಲೇ ಗೇಟಿನತ್ತ ಓಟಕಿತ್ತೆ. ಅವಳು ನನ್ನ ಹಿಂದೆಯೇ ಓಡಿದಳು. ಹೈಸ್ಕೂಲ್ ಗೇಟ್ ಸಮೀಪಿಸುವಷ್ಟರಲ್ಲಿ ಅವಳು ಹಿಂದಿನಿಂದ ನನ್ನ ಅಂಗಿ ಹಿಡಿದೆಳೆದಳು. ಅವಳು ಎಳೆದ ರಭಸಕ್ಕೆ ಜಾರಿದ ನಾನು ಹಾಗೆ ಅನಾಮತ್ತು ಅವಳ ಮೇಲೆ ಬಿದ್ದೆ ಅವಳ ಮುಖದಲ್ಲಿ ಆಗ ಸಿಟ್ಟಿನ ಬದಲಾಗಿ ನಸುನಾಚಿಕೆ ಲಾಸ್ಯವಾಡುತ್ತಿತ್ತು.
          ಕೆಸರಾಗಿದ್ದ ಒದ್ದೆ ಬಟ್ಟೆಯೊಂದಿಗೆ ಮನೆ ಸೇರಿಕೊಂಡೆವು. ಮತ್ತೆ ಸೋಮವಾರ ಸ್ಕೂಲಿಗೆ ಹೋದಾಗ ನನಗೆ ಭಯ ಎಲ್ಲಿ ಶನಿವಾರ ಅವಳ ಮೇಲೆ ಬಿದ್ದು ಬಟ್ಟೆ ರಾಡಿ ಮಾಡಿದ ವಿಷಯವನ್ನು ಎ.ಎಸ್. ಮೇಸ್ಟ್ರು ಕೈಲಿ ಹೇಳಿ ಹೊಡೆಸುತ್ತಾಳೋ ಎನ್ನುವ ಅಳುಕು ಎ.ಎಸ್. ಎಂದಿಗೂ ಹೆಣ್ಮಕ್ಕಳಿಗೆ ಹೊಡೆದ ಉದಾಹರಣೆ ಇರಲಿಲ್ಲ. ಗಂಡು ಮಕ್ಕಳಿಗೆ ಮತ್ತೊಂದು ಜನ್ಮ ನೆನಪಾಗುವಂತೆ ಹೊಡೆಯುತ್ತಿದ್ದ ರೀತಿ ನೆನಪಾಗಿ ನನಗೆ ಭಯವಾಗುತ್ತಿತ್ತು. ಬೆಲ್ಲಾಗುವ ವೇಳೆಗೆ ಬಂದವಳು ಪ್ರೈಯರ್ ಮುಗಿದೊಡನೆ ಸೀದಾ ಕ್ಲಾಸ್ ರೂಂಗೆ ಹೋದಳು. ಆಗ ನನಗೆ ಸ್ವಲ್ಪ ಧೈರ್ಯ ಬಂದು ಕೊನೆಯವನಾಗಿ ಒಳ ಹೋದೆ ಅವಳು ನನ್ನ ಮುಖ ನೋಡಿದೊಡನೆ ನಾಚಿಕೆಯಿಂದ ಮುದುಡಿ ಹೋದಳು. ಅವಳ ಮುಖದಲ್ಲಿ ಕೋಪದ ಗೆರೆಗಳಿರಲಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅವಳ ಹಿಂದೆಯೇ ಹೆಜ್ಜೆ ಹಾಕಿದ ನಾನು ಗ್ರಾಮದಮ್ಮನ ಗುಡಿಯ ಮುಂದೆ ಧೈರ್ಯ ಮಾಡಿ ಸಾರಿ ಕೇಳಿದೆ. ಆ ನಂತರದ ದಿನಗಳಲ್ಲಿ ನಾನು ಅವಳಿಗಾಗಿ ಕಾಯುವುದು ಅವಳ ಜೊತೆಯಲ್ಲೇ ಹೋಗುವುದು ಬರುವುದು ಹೆಚ್ಚಾಯ್ತು.
          ಎಂದೂ ಆಟೋಟಗಳಲ್ಲಿ ಭಾಗವಹಿಸದ ನಾನು ಅವಳು ಸೇರಿದ್ದನ್ನು ಕಂಡು ಖೋಖೋಗೆ ಸೇರಿದೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಸೇರಿ ಆಡುತ್ತಿದ್ದೆವು. ಹುಡುಗಿಯರು ಹುಡುಗರನ್ನು ಮುಟ್ಟಿಸುತ್ತಿದ್ದರು. ಒಬ್ಬ ಔಟಾದ ಮೇಲೆ ನಾನು ಚಂಗಿಸುತ್ತಿದೆ. ಕೀ ಪಡೆದ ಹುಡುಗಿ ನನ್ನ ಓಡಿಸಿಕೊಂಡು ಬಂದಳು. ನಾನು ಅವಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನನ್ನ  ಹುಡುಗಿಯ ಮೇಲೆ ಬಿದ್ದು ಬಿಟ್ಟೆ.  ಅವತ್ತು ಸಾಯಂಕಾಲ ಮನೆಗೆ ಹೋಗುವಾಗ ಅವಳು ನನ್ನ ಚೆನ್ನಾಗಿ ಬೈದಳು. ನೀನು ಬೇಕೆಂದೆ ನನ್ನಮೇಲೆ ಬಿದ್ದೆ ಎಂದಳು. ನಾನಷ್ಟೇ ಸಮಜಾಯಿಸಿಕೊಟ್ಟರು ಒಪ್ಪಲಿಲ್ಲ ನಾಳೆಯಿಂದ ನನ್ನ ಮಾತನಾಡಿಸಬೇಡವೆಂದು ಹೇಳಿ ಹೋದಳು.
          ಅದಾಗಿ ಮೂರ್ನಾಲ್ಕು ದಿನ ಅವಳು ನನ್ನ ಮಾತಾಡಿಸಲಿಲ್ಲ ಅವಳು ನನ್ನತ್ತ ತಿರುಗಿ ಕೂಡಾ ನೋಡುತ್ತಿರಲಿಲ್ಲ ನನಗದು ಸಹಿಸಲಸಾಧ್ಯವಾದ ನೋವಾಗುವಂತೆ ಮಾಡಿತ್ತು. ನಾನು ಎಷ್ಟೇ ಪ್ರಯತ್ನ ಪಟ್ಟರು. ಅವಳು ಮಾತಾಡಲೇ ಇಲ್ಲ ಅಂದು ರಾತ್ರಿ ಊಟ ರುಚಿಸಲಿಲ್ಲ. ನಿದ್ದೆ ಹತ್ತಲಿಲ್ಲ, ಬೆಳಗಿನ ಜಾವ ಎದ್ದವನೆ ಭಯಂಕರ ಚಳಿಯನ್ನು ಲೆಕ್ಕಿಸದೆ ಹೋಗಿ ಅವಳ ಮನೆಯ ಮುಂದಿನ ಲೈಟ್ ಕಂಬಕ್ಕೊರಗಿ ಅವಳ ಮನೆಯತ್ತ ದೃಷ್ಟಿ ನೆಟ್ಟು ನಿಂತು ಬಿಟ್ಟೆ.
          ನನ್ನ ಎಣಿಕೆ ಸುಳ್ಳಾಗಲಿಲ್ಲ ಆರು ಗಂಟೆಗೆ ಬಾಗಿಲು ತೆರೆದು ಹೊರಬಂದವಳ ದೃಷ್ಟಿಗೆ ನಾನು ಬಿದ್ದಿದ್ದೆ ನನ್ನ ನೋಡುತ್ತಿದ್ದಂತೆ ಆಶ್ಚರ್ಯಗೊಂಡ ಅವಳು ಬಾಗಿಲನ್ನು ಮುಂದಕ್ಕೆಳೆದುಕೊಂಡು ಸೀದಾ ನನ್ನ ಬಳಿ ಬಂದವಳು. ಯಾಕೋ ಇಷ್ಟೊತ್ತಿಗೆ ಈ ಚಳಿಯಲ್ಲಿ ಬಂದಿದ್ದೀ? ಎಂದಳು. ಆಗ ನಾನು ಬೇಕೆಂದು ನಿನ್ನ ಮೇಲೆ ಬೀಳಲಿಲ್ಲ. ಆಕಸ್ಮತ್ತಾಗಿ ಬಿದ್ದಿದು ಅದರಲ್ಲಿ ನನ್ನ ತಪ್ಪಿಲ್ಲ. ನೀನು ನನ್ನ ಮತನಾಡಿಸದೇ ಇದ್ದರೆ ನಾನು ಸತ್ತೇ ಹೋಗುತ್ತೇನೆ ಎಂದೆ ಅದಕ್ಕವಳು ಹುಚ್ಚುಚ್ಚಾಗಿ ಮಾತಾಡಬೇಡ ಯಾರಾದರೂ ಮಾತಾಡಿಸಲಿಲ್ಲ ಅಂತ ಸಾಯ್ತಾರೇನೋ ಹೋಗೋ ಯಾರಾದ್ರು ನೋಡಿದ್ರೆ ತಪ್ಪು ತಿಳ್ಕೋತಾರೆ ಸ್ಕೂಲತ್ರ ಸಿಗ್ತೀನಿ ಅಂತ ಹೇಳಿ ಓಡಿ ಹೋದಳು. ಆಗ ತುಸು ಜೋರಾಗಿ ಮಾತಾಡಿಸ್ತಿ ತಾನೇ ಎಂದೆ ಅವಳು ತಿರುಗಿ ಕಣ್ಣು ಮಿಟುಕಿಸಿ ಬಾಗಿಲು ದೂಡಿ ಒಳ ಹೋದಳು. ನನಗೆ ಆಕಾಶವೇ ಕೈಗೆ ಸಿಕ್ಕ ಸಂತೋಷದಿಂದ ಜಿಗುಯುತ್ತ ಮನೆ ಸೇರಿದೆ.
          ಅಂದು ನನ್ನ ಉತ್ಸಾಹಕ್ಕೆ ಕೊನೆಯಿರಲಿಲ್ಲ ಹರಿದ ಅಂಗಿಯನ್ನು ಹೊಲೆದುಕೊಂಡು ಅದಕ್ಕೆ ಇಸ್ತ್ರಿ ಮಾಡಿ ಹರಿದು ಮೂಲೆ ಸೇರಿದ್ದ ಹಳೆಯ ಹವಾಯಿ ಚಪ್ಪಲಿಗಳನ್ನು ರಿಪೇರಿ ಮಾಡಿ ತೊಳೆದು ನಾನೂ ತಣ್ಣೀರಿನಲ್ಲಿ ಸ್ನಾನ ಮಾಡಿ ಬೇಗನೆ ಸ್ಕೂಲಿಗೆ ಹೊರಟೆ.
          ನಾನು ಸ್ಕೂಲಿಗೆ ಹೋಗಿ ಎಷ್ಟೊತ್ತಾದರು ನುಣುಪು ಕೆನ್ನೆಗಳ ಹೊಳಪು ಸೂಸುವ ಕಣ್ಣಿನ ನನ್ನ ಹುಡುಕಿ ಬಂದಿರಲಿಲ್ಲ. ಅವಳಿಗಾಗಿ ಗೇಟಿನತ್ತ ನೋಡುತ್ತಲೇ ಚಡಪಡಿಸತೊಡಗಿದೆ.
          ಅವಳು ಬಂದೊಡನೆ ಇಷ್ಟೊಂದು ಲೇಟೇಕೆ ಎಂದು ಅವಳೊಡನೆ ಜಗಳಕ್ಕೆ ನಿಂತೆ, ಅವಳು ಈ ವಯಸ್ಸಿಗೆ ಇಷ್ಟೊಂದು ತಲೆ ಕೆಡೆಸಿಕೊಂಡರೆ ಹುಚ್ಚಾಸ್ಪತ್ರೆ ಸೇರ್ತೀಯ ಅಂತ ಹೇಳಿ ಗೆಳತಿಯರ ಗುಂಪಿನತ್ತ ಓಡಿ ಹೋದಳು.
          ಕೆರೆಯಂಗಳದಲ್ಲಿ ಬೆಳೆಯುತ್ತಿದ್ದ ಕಮಲದ ಹೂಗಳನ್ನು ಮಲ್ಲಪ್ಪನಹಳ್ಳಿ ಹುಡುಗನೊಬ್ಬ ಕಿತ್ತು ತಂದು ದೇವರ ಪೊಟೊಗೆ ಹಾಕುತಿದ್ದ ಇವಳು ಆಸೆ ಕಂಗಳಿಂದ ಆ ಹೂವನ್ನೆ ನೋಡುತ್ತಿದುದನ್ನು ಗಮನಿಸಿದ ನಾನು ಮಾರನೇ ದಿನ ಬೆಳಗ್ಗೇನೆ ಹೋಗಿ ನೀರಲ್ಲಿ ಮುಳುಗಿ ಐದಾರು ಕಮಲದ ಹೂಕಿತ್ತು ತಂದು ಅವಳ ಕೈಗಿಟ್ಟಿದ್ದೆ. ಅಂದು ಅವಳ ಸಂತೋಷಕ್ಕೆ ಪಾರೇ ಇರಲಿಲ್ಲ ಕುಣಿದು ಕುಪ್ಪಳಿಸಿ ಬಿಟ್ಟಿದ್ದಳು.
          ಆದರೂ.... ನನ್ನನ್ನು ಒಬ್ಬನೇ ಕೆರೆಗೋಗಿ ನೀರಿಗಿಳಿದಿದ್ದಕ್ಕಾಗಿ ಬೈದಿದ್ದಳು. ಮತ್ತೆಂದೂ ಇಂತಹ ಸಾಹಸಕ್ಕೆ ಕೈ ಹಾಕಬೇಡವೆಂದು ಆಣೆ ಇಟ್ಟಳು.
          ಆಗ ತಿಂಗಳಿಗೊಮ್ಮೆ ಟೆಸ್ಟ್ ಮಾಡುತ್ತಿದ್ದರು ನಾವು ಬರೆದ ಉತ್ತರ ಪತ್ರಿಕೆಗಳನ್ನು ಹುಡುಗ ಹುಡುಗಿಯರಿಗೆ ಅದಲು ಬದಲಾಗಿಸಿ ನಮ್ಮಿಂದಲೇ ಮೌಲ್ಯ ಮಾಪನ ಮಾಡಿಸುತ್ತಿದ್ದರು. ಆಗೊಮ್ಮೆ ನನ್ನ ಉತ್ತರ ಪತ್ರಿಕೆ ಅವಳ ಕೈಗೆ ಸಿಕ್ಕಿ ನನ್ನ ವಿದ್ಯಾಪಾಂಡಿತ್ಯವನ್ನು ಗಮನಿಸಿ ಅಂದು ಮಧ್ಯಾಹ್ನ ನನ್ನಿಂದೆ ತಿರುಗೋದು ಬಿಟ್ಟು ಸರಿಯಾಗಿ ಓದೋಕಾಗಲ್ವ ಅಂತ ಬೈದು. ಸರಿಯಾಗಿ ಓದ್ಕೋ ಅಂತ ಅವಳ ನೋಟ್ಸ್ ನನ್ನ ಕೈಗಿಟ್ಟಿದ್ದಳು. ಮೊದಲೇ ಓದಿಗೂ ನನಗೂ ದೂರ ದೂರ ನಾನು ಶಾಲೆಗೆ ಹೋಗುತ್ತಿದ್ದುದೇ ಇವಳಿಗೋಸ್ಕರ ಇನ್ನು ಓದುವುದೆಲ್ಲಿಂದ? ಅಂದು ರಾತ್ರಿ ಕುಳಿತು ನೀನು ಮರ ನಾನು ಬಳ್ಳಿ ನೀನು ಕಡಲು, ನಾನು ತೀರ ಎಂದೆಲ್ಲ ಬರೆದು ಪುಟತುಂಬಿಸಿ ಒಂದು ಹೃದಯ ಬರೆದು ಅದರೊಳಗೆ ಅವಳೆಸರ ಪಕ್ಕ ನನ್ನೆಸರ ಬರೆದು ಎಸ್ ಲವ್ಸ್ ಎಸ್ ಎಂದು ಬರೆದು ಅವಳ ನೋಟ್ಸ್ಗಿಟ್ಟು ಅವಳ ಕೈಗೆ ಕೊಟ್ಟು ಬಿಟ್ಟೆ. ಅದರೊಳಗೆ ಚೀಟಿ ಇಟ್ಟಿದೇನೆನ್ನುವುದನ್ನು ಹೇಳಲು ಧೈರ್ಯ ಸಾಲದೆ ಸುಮ್ಮನಾಗಿಬಿಟ್ಟೆ. ಮಾರನೇ ದಿನ ಅವಳು ಶಾಲೆಗೆ ಬರಲಿಲ್ಲ, ಬೆಲ್ಲಾಗುವ ಸಮಯಕ್ಕಿಂತ ಸ್ವಲ್ಪ ಮುಂಚೆ ಅವರಪ್ಪ ಬಂದವನೇ ಸೈಕಲ್ ನಿಲ್ಲಿನಿ ಸೀದಾ ಎ.ಎಸ್. ಮೇಸ್ಟ್ರು ಹತ್ತಿರ ಹೋಗಿ ಏನೇನೋ ಹೇಳುತ್ತ ನನ್ನನ್ನ ಬೊಟ್ಟು ಮಾಡಿ ತೋರಿಸುತ್ತಿದ್ದ. ಅಂದು ಎರಡನೇ ಪಿರಿಯಡ್ನಲ್ಲಿ ಬಂದ ಎ.ಎಸ್. ಸುಖಾ ಸುಮ್ಮನೆ ನನ್ನನ್ನು ಎಬ್ಬಿಸಿ ನಿಲ್ಲಿಸಿ ಚೆನ್ನಾಗಿ ಹೊಡೆದಿದ್ದರು. ಯಾರೊಬ್ಬರಿಗೂ ಎ.ಎಸ್. ನನಗೆ ಯಾಕೆ ಹೊಡೆಯುತ್ತಿದ್ದಾರೆಂದು ಅರ್ಥವಾಗಿರಲಿಲ್ಲ. ಎ.ಎಸ್. ಹೊಡೆದ ಏಟಿಗೆ ನನಗೆ ಜ್ವರ ಬಂದು ಮೂರ್ನಾಲ್ಕು ದಿನ ಏಳಲಾಗಲಿಲ್ಲ ವಾರದ ನಂತರ ಶಾಲೆಗೆ ಹೋದವನಿಗೆ...... ಆಘಾತ ಕಾದಿತ್ತು ಅವಳು ನಮ್ಮ ಶಾಲೆಯಿಂದ ಟಿ.ಸಿ. ತೆಗೆದುಕೊಂಡು ಅವಳ ಅಜ್ಜಿತಾತನ ಊರಿಗೆ ಹೋಗಿ ಬಿಟ್ಟಿದ್ದಳು.
          ಅವಳು ಹಾಗೆ ಏಕಾ ಏಕೀ ಒಂದು ಮಾತು ಹೇಳದೆ ಹೋದದ್ದಾದರೂ ಏಕೆಂದು ನನಗೆ ಗೊತ್ತಾಗಲೇ ಇಲ್ಲ. ಅವಳ ಮುಖ ನೋಡದೆ ಅವಳ ಧ್ವನಿ ಕೇಳದೆ ನಾನು ಹುಚ್ಚನಾಗಿ ಬಿಟ್ಟೆ. ಅದೇ ಕೊರಗಿನಲ್ಲಿ ಸ್ಕೂಲ್ ಬಿಟ್ಟೆ. ಕೊನೆಗೆ ಜಿ.ಎಲ್. ಮೇಸ್ಟ್ರು ಬಲವಂತದಿಂದ ಎಸ್.ಎಸ್.ಎಲ್.ಸಿ. ಎಕ್ಸಾಮ್ ಬರೆದು ಬಂದೆ.
          ಅದೇನು ಪವಾಡವೊ . . ನಾನು ಎಸ್.ಎಸ್.ಎಲ್.ಸಿ. ಪಾಸಾಗಿ ಬಿಟ್ಟಿದ್ದೆ. ಅದಾಗಿ ಹತ್ತು ವರ್ಷಗಳ ನಂತರ . . . .
          ನಮ್ಮೂರಿನ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಅವಳು ನನ್ನ ಕಣ್ಣಿಗೆ ಬಿದ್ದಳು. ನನ್ನ ಕಣ್ಣ ನಾನೇ ನಂಬದಾದೆ ಹತ್ತಿರ ಹೋಗಿ ನಾನೇ ಮಾತನಾಡಿಸಿದೆ ನನ್ನ ನೋಡಿ ಅವಳು ಸ್ವಲ್ಪ ಗಲಿಬಿಲಿ ಗೊಂಡಳು. ತಕ್ಷಣ ಚೇತರಿಸಿಕೊಂಡು ತನ್ನಿಬ್ಬರು ಪುಟಾಣಿಗಳನ್ನು ಮತ್ತು ಗಂಡನನ್ನು ಪರಿಚಯಿಸಿದಳು ಮದುವೆಗೆ ಕರೆಯಲಾಗಲಿಲ್ಲ ಕಣೋ . . ಎಂದಳು ಈಗೇನು ಮಾಡುತ್ತಿದ್ದಿ ಎಂದಳು ನಾನು ನನ್ನೆದೆಯ ನೋವನ್ನೆಲ್ಲ ನುಂಗಿಕೊಂಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ನನ್ನ ಪತ್ರಿಕೆಯ ಆಫೀಸಿನ ವಿಳಾಸವಿರುವ ವಿಸಿಟಿಂಗ್ ಕಾಡರ್್ ಅವಳ ಕೈಗಿಟ್ಟು ಬಂದಿದ್ದೆ.
          ಅದಾಗಿ ಹದಿನೈದು ದಿನಗಳು ಕಳೆದ ಮೇಲೆ ಇಂದು ಕಾಗದ ಬರೆದಿದ್ದಾಳೆ ಏನು ಬರೆದರಬಹುದೆಂದು ಲಕೋಟೆ ಒಡೆದು ಪತ್ರ ತೆರೆದೆ.
          ಬಾಲ್ಯದ ಗೆಳೆಯ,
        ನಾನು ಮತ್ತೆ ಈ ಜನ್ಮದಲ್ಲಿ ನಿನ್ನ ನೋಡುತ್ತೇನೆ ಅಂದುಕೊಂಡಿರಲಿಲ್ಲ. ಯಾಕ್ಹೀಗೆ ಸೊರ ಗಿದ್ದೀಯ? ಮೂವತ್ತಾದರೂ ಮದುವೆಯಾಗದೆ ಒಂಟಿಯಾಗಿದ್ದೀಯಲ್ಲೋ? ನಿನ್ನ ಚಂದ್ರಮುಖಿ ಬರುವಳೆಂದು ಕಾಯುತ್ತಿರುವೆಯಾ? ನೋಡಿದೆಯಲ್ಲಾ ನಿನ್ನ ಚಂದ್ರಮುಖಿಯನ್ನ ಮದುವೆಯಾಗಿ ಎರಡು ಮಕ್ಕಳ ತಾಯಿ ನೊಂದು ಕೊಳ್ಳಬೇಡ ಕಣೋ ನಾನು ನಿನಗೆ ಮೋಸ ಮಾಡಬೇಕೆಂದಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮೋಸ ಮಾಡಿದ್ದು ನೀನು. . . ಆಶ್ಚರ್ಯವಾಗುತ್ತಿದೆಯಾ? ಅವತ್ತು ಲೆಟರ್ ಬರೆದು ಸೀದಾ ನನ್ನ ಕೈಗೆ ಕೊಟ್ಟಿದ್ದರೆ ಈಗಾಗುತ್ತಿಲಿಲ್ಲ. ನೀನು ಅದನ್ನು ನನ್ನ ನೋಟ್ಸ್ಗಿಟ್ಟು ಕೊಟ್ಟಿದ್ದೆ ಅದು ನಮ್ಮ ಅಪ್ಪನ ಕೈಗೆ ಸಿಕ್ಕಿ ನಮ್ಮ ಮನೆಯಲ್ಲಿ ದೊಡ್ಡ ಅವಾಂತರವೇ ಆಗಿ ಹೋಗಿತ್ತು ಅಪ್ಪ ಅಮ್ಮ ಇಬ್ಬರು ನನ್ನನ್ನು ಚೆನ್ನಾಗಿ ಹೊಡೆದಿದ್ದರು. ಅತ್ತ ಮಾರನೇ ದಿನ ನನ್ನ ಸ್ಕೂಲಿಗೆ ಕಳಿಸಲಿಲ್ಲ. ಆದರೆ . . . ನನ್ನಪ್ಪ ಸ್ಕೂಲ್ ಹತ್ರ ಹೋಗಿ ಎ.ಎಸ್. ಗೆ ನಿನ್ನ ಮೇಲೆ ಚಾಡಿ ಹೇಳಿ ಬಂದಿದ್ದು ಗೊತ್ತಾಯ್ತು.
          ಅವತ್ತು ಎ.ಎಸ್. ನಿನಗೆ ಜಾಸ್ತಿ ಹೊಡೆದಿದ್ದರಾ? ನಾನು ನಿನ್ನ ಪರಿಸ್ಥಿತಿ ನೆನಪಿಸಿಕೊಂಡು ಅತ್ತು ಬಿಟ್ಟಿದ್ದೆ ಕಣೋ ... ನಾನು ನಿನ್ನ ಯಾವಾಗ ನೋಡುತ್ತೇನೋ ಎಂದು ಹಂಬಲಿಸುತ್ತಿದ್ದೆ. ಆದರೆ ನಮ್ಮನೆಯವರಿಗೆ ನನ್ನನ್ನು ಮತ್ತೆ ಅಲ್ಲೇ ಸ್ಕೂಲಿಗೆ ಕಳಿಸಲು ಇಷ್ಟವಿರಲಿಲ್ಲ. ಅದರಿಂದ ನನ್ನ ಅಜ್ಜಿ ತಾತನ ಮನೆಗೆ ಕರೆದುಕೊಂಡು ಬಂದು ಇಲ್ಲೇ ಸ್ಕೂಲಿಗೆ ಸೇರಿಸಿಬಿಟ್ಟರು. ನನಗೆ ಆನಂತರ ನಿನ್ನ ನೆನಪು ಬಿಟ್ಟು ಬಿಡದಂತೆ ಕಾಡಲಾರಂಭಿಸಿತು. ಆದರೆ ನಾನೇನು ಮಾಡುವಂತಿರಲಿಲ್ಲ. ನಾನು ನಿದ್ದೆಯಲ್ಲು ಕೂಡ ನಿನ್ನೆಸರ ಕನವರಿಸಿದ್ದ ಕಂಡ ನನ್ನ ಅಜ್ಜಿ ಮತ್ತೆಂದು ನನ್ನ ಅರೆಯೂರಿನತ್ತ ಮುಖ ಮಾಡದಂತೆ ಮಾಡಿಬಿಟ್ಟಳು. ನಂತರ ನನ್ನನ್ನು ಸೋದರ ಮಾವನಿಗೆ ಮದುವೆ ಮಾಡಿಕೊಟ್ಟರು. ನನು ಮದುವೆಯಾದ ಮೇಲೆ ಎರಡೂರು ಸಾರಿ ಅರೆಯೂರಿಗೆ ಬಂದಿದ್ದೆ ಆದರೆ ನೀನು ಅಷ್ಟೊತ್ತಿಗೆ ಅರೆಯೂರು ಬಿಟ್ಟು ಗೋಮಾಳದಲ್ಲಿ ಇರೋದು ಗೊತ್ತಾಯ್ತು ನಾನು ಗೋಮಾಳಕ್ಕೆ ನಿನ್ನನ್ನು ಹುಡುಕಿ ಬರುವಂತ ಪರಿಸ್ಥಿತಿಯಲ್ಲಿರಲಿಲ್ಲ.
          ನೀನು ಮೊನ್ನೆ ದೇವಸ್ಥಾನದಲ್ಲಿ ಸಿಕ್ಕಾಗ ನನಗೆ ಏನು ಮಾತಾಡಬೇಕೆಂದೆ ಗೊತ್ತಾಗಲಿಲ್ಲ ಕಣೋ ಸಾರಿ ಆದಷ್ಟು ಬೇಗ ನನಗಿಂತ ಸುಂದರವಾಗಿರುವ ಚೆಲುವೆಯನ್ನ ಹುಡುಕಿ ತಪ್ಪದೆ ನನ್ನನ್ನು ಮದುವೆಗೆ ಕರೆ ನಿನ್ನ ಮದುವೆಗೆ ಬರುತ್ತೇನೆ ನಿನ್ನ ಲಗ್ನಪತ್ರಿಕೆಯ ನಿರೀಕ್ಷೆಯಲ್ಲಿ... 
                                                                                   ನಿನ್ನ ಬಾಲ್ಯದ ಗೆಳತಿ.

                              ಪತ್ರ ಓದಿ ಮುಗಿಸಿದ ನನ್ನ ಕಣ್ಣಂಚಲ್ಲಿ ನೀರಿತ್ತು...

                                                                                         -ಅರೆಯೂರು ಚಿ.ಸುರೇಶ್

 "ಪಂಜು" ವೆಬ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆ 
ವಿ ಕೆ ನ್ಯೂಸ್ ನಲ್ಲಿ ಪ್ರಕಟವಾದ ಕಥೆ

ಭಾನುವಾರ, ಡಿಸೆಂಬರ್ 1, 2013

ಪ್ರಾಚೀನ ಪುಣ್ಯ ಕ್ಷೇತ್ರ ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ

ಜ್ಯೋತಿರ್ಲಿಂಗುವಿರುವ ವೈದ್ಯನಾಥೇಶ್ವರ ಸ್ವಾಮಿಯ ಬೀಡು ಅರೆಯೂರು. ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ ಆಗುವುದೆಂದು ವೇದಗಳಲ್ಲೆ ಇದೆ.

ಬುಧವಾರ, ಅಕ್ಟೋಬರ್ 16, 2013

ಶನಿವಾರ, ಆಗಸ್ಟ್ 24, 2013


ಅರೆಯೂರು ಚಿ.ಸುರೇಶ್ ರವರ ಪರಿಚಯ

 


ಸಂಪಾದಕರು: ಅರೆಯೂರು ಚಿ.ಸುರೇಶ್

ಸಂಪಾದಕರಾದ ಅರೆಯೂರು ಚಿ.ಸುರೇಶ್ ರವರು ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಅರೆಯೂರು ಗ್ರಾಮದ ಶ್ರೀಮತಿ ಜಯಮ್ಮ, ಶ್ರೀ. ಚಿಕ್ಕಮಾದಯ್ಯನವರ ದ್ವಿತೀಯ ಪುತ್ರನಾಗಿ 1983 ರ ಆಗಸ್ಟ್ 30 ನೇ ತಾರೀಖು ಜನಿಸಿದರು ಇವರ ಮೊದಲ ಹೆಸರು ಲೋಕೇಶ್ ನಂತರ ಮನೆಯವರು ಪ್ರೀತಿಯಿಂದ ಸೂರಿ ಎಂದು ಕರೆದು, ಶಾಲೆಯಲ್ಲಿ ಎ.ಸಿ ಸುರೇಶ್ ಎಂದು ಹೇಳಿದರು, ಅರೆಯೂರು ಚಿಕ್ಕಮಾದಯ್ಯ ಸುರೇಶ್ ಅಲಿಯಾಸ್ರೆಯೂರು ಚಿ.ಸುರೇಶ್ ರವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅರೆಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರೆಯೂರು ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರಶಾಲೆಯಲ್ಲಿ ಪರೀಕ್ಷೆಶಿಕ್ಷಣವನ್ನು ಮುಗಿಸಿ ಹಾಲನೂರು ಗ್ರಾಮದ ಶ್ರೀ ಸಿದ್ಧಗಂಗಾ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಶಾಲೆಯಲ್ಲಿ ಬಿ.ಎ. ಪದವಿ ಮುಗಿಸಿ, ವಿದ್ಯೋದಯ ಕಾನೂನು ಕಾಲೇಜಿಗೆ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿ, ತಮ್ಮ ಓದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ತುಮಕೂರಿನ ಅಮರ ಸಂದೇಶ ಸಂಜೆ ಪತ್ರಿಕೆ, ತುಮಕೂರು ವಾರ್ತೆ, ನಗೆಮುಗುಳು, ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ, ಕಥೆ, ಕವಿತೆ, ಹಾಸ್ಯ ಲೇಖನ, ವ್ಯಂಗ್ಯಚಿತ್ರ, ಚುಟುಕು ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡಿರುವ ಅರೆಯೂರು ಚಿ.ಸುರೇಶ್ ರವರು, ಅರೆಯೂರು ಚಿ.ಸುರೇಶ್, ಅರೆಯೂರು ಸುರೇಶ್, ಕಾವ್ಯ ಮಧುಗಿರಿ, ಮಾಣಿಕ್ಯ ಮಡಿಕೇರಿ, ಅರೆಯೂರು ಶ್ರೀ ವೈದ್ಯಸುತ, ಅಚಿಸು, ನಾದಪ್ರಿಯ, ಭಾರತಿಪ್ರಿಯ, ಅರೆಯೂರು ಕಾವ್ಯಸುತ, ಎಂಬ ಹಲವಾರು ಕಾವ್ಯನಾಮದಿಂದ ಹಲವಾರು ಲೇಖನಗಳನ್ನು, ಕಥೆ ಕವನಗಳನ್ನು ರಚಿಸಿದ್ದಾರೆ

ಅರೆಯೂರು ಚಿ.ಸುರೇಶ್ ರವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಪ್ರಮುಖವಾದವುಗಳೆಂದರೆ ಪ್ರಜಾವಾಣಿ, ಸುಧಾ ಮಯೂರ, ತುಷಾರ, ಉದಯವಾಣಿ, ಉದಯಕಾಲ,,ಮಲ್ಲಿಗೆ ಮಾಸಪತ್ರಿಕೆ, ನವರಾಗಸಂಗಮ, ಸಖಿ, ನಿಮ್ಮೆಲ್ಲರ ಮಾನಸ, ಮಾಣಿಕ್ಯ, ಓ ಮನಸೇ, ಹಾಯ್ ಬೆಂಗಳೂರು, ಸಂಜೆವಾಣಿ, ಗೃಹಶೋಭ, ಯುಗಪುರುಷ, ನಗೆಮುಗುಳು, ಪ್ರಜಾಪ್ರಗತಿ, ಪ್ರಜಾಮನ, ತುಮಕೂರು ಮಿತ್ರ, ಗೋವ ರಾಜ್ಯದಿಂದ ಪ್ರಕಟವಾಗುತಿದ್ದ ಗೋವ ದರ್ಪಣ, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

ಅಂತರ್ಜಾಲ ಪತ್ರಿಕೆಗಳಾದ ಪಂಜು, ಅವಧಿ, ಸಂಪದ, ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಆನ್ ಲೈನ್ ನ್ಯೂಸ್, ಕನ್ನಡ ನ್ಯೂಸ್ ನೌ ಸೇರಿದಂತೆ ಹಲವು ತಾಣಗಳಲ್ಲಿ ಲೇಖನ, ಕಥೆ ಕವಿತೆ ಪ್ರಕಟಗೊಂಡಿವೆ

ಅರೆಯೂರು ಚಿ.ಸುರೇಶ್ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆಗಳು ಅರೆಯೂರು ಪತ್ರಿಕೆ, ಅರೆಯೂರು ನ್ಯೂಸ್, ಬಡವರ ಕೂಗು, ಸುದ್ದಿ ಸಮಾಚಾರ, ಕನ್ನಡ ಇ ನ್ಯೂಸ್, ತುಳು ನ್ಯೂಸ್ ಪ್ರಮುಖವಾದವುಗಳು

ವಾಲ್ಮೀಕಿ ಮಿತ್ರ ಪತ್ರಿಕೆಯಲ್ಲಿ ಕಾರ್ಯಕಾರಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಗುಬ್ಬಿ ತಾಲ್ಲೂಕು ವರದಿಗಾರರಾಗಿ, ಪ್ರಜಾಮನ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ತುಮಕೂರು ವಾರ್ತೆ, ಅಮರ ಸಂದೇಶ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ

ಅರೆಯೂರು ಚಿ.ಸುರೇಶ್ ರವರಿಗೆ ಕಾವ್ಯಶ್ರೀ, ಹೆಮ್ಮೆಯ ಕನ್ನಡಿಗ, ಕನ್ನಡ ಮಾಣಿಕ್ಯ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ

ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದ ಅರೆಯೂರು ಚಿ.ಸುರೇಶ್ ರವರು ದೂರದ ಕರಾವಳಿ ಭಾಗದ ತುಳು ಭಾಷೆಯ ತುಳು ನ್ಯೂಸ್ ಆನ್‌ಲೈನ್ ಪತ್ರಿಕೆ ಮಾಡಿ ತುಳು ನಾಡಿನ ತುಳು ಭಾಷಿಕರಿಗೆ ತುಳು ಭಾಷೆಯಲ್ಲಿ ಸುದ್ದಿ ನೀಡುತ್ತಿರುವ ಕಾರ್ಯ ಶ್ಲಾಘನೀಯ

ಅರೆಯೂರು ಚಿ.ಸುರೇಶ್ ರವರ ಪ್ರಕಟಿತ ಕೃತಿಗಳು 

ಶಿರ್ಷಿಕೆ | ಪ್ರಕಾರ | ಪ್ರಕಟಿತ ವರ್ಷ

ಕಾವ್ಯಮಂಜರಿ (ಕವನ ಸಂಕಲನ) 2012
ಮಾಣಿಕ್ಯ (ಕಥಾಸಂಕಲನ) 2014
ಅನಾಮಿಕ (ಕಾದಂಬರಿ) 2016
ಕನಸು (ಕವನ ಸಂಕಲನ) 2014
ಪ್ರೇಮಾಯಣ (ಕಥಾಸಂಕಲನ) 2017
ಮಂಥನ (ಲೇಖನ ಸಂಗ್ರಹ) 2017
ಆರೋಗ್ಯವಾಗಿರೋಣ... (ಲೇಖನ ಸಂಗ್ರಹ) 2019
ಶ್ರೀ ವೈದ್ಯನಾಥೇಶ್ವರ ಸ್ವಾಮಿ ಚರಿತ್ರೆ (ಲೇಖನ ಸಂಗ್ರಹ) 2013
ನಮ್ಮೂರ ಇತಿಹಾಸ (ಲೇಖನ ಸಂಗ್ರಹ) 2013
(ಎಲ್ಲಾ ಕೃತಿಗಳ ಪ್ರಕಾಶಕರು: ಶಮಿತಾ ಪಬ್ಲಿಕೇಶನ್, ಪಡುಬಿದ್ರಿ, ಉಡುಪಿ)



ಭಾನುವಾರ, ಜೂನ್ 30, 2013

  • ಹಿಟ್ಲರ್‌ಗಾಗಿ ಸತ್ತು ಬದುಕಿದ್ದ ಮಾರ್ಗೋಟ್‌!

  • ಹಿಟ್ಲರ್‌ಗಾಗಿ ಪ್ರತಿದಿನವೂ ಸತ್ತು ಬದುಕಿದ್ದ ಮಾರ್ಗೋಟ್‌..!


    • ಜರ್ಮನಿಯನ್ನು ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಭಾರೀ ಪುಕ್ಕಲ. ಯಾರಾದರೂ ತನಗೆ ಆಹಾರದಲ್ಲಿ ವಿಷ ಸೇರಿಸಿ ಸಾಯಿಸಬಹುದೆಂಬುದು ಭೀತಿ ಆತನನ್ನು ಸದಾ ಕಾಡುತ್ತಿತ್ತು. ಹೀಗಾಗಿ ತನಗೆ ಸಿದ್ಧಪಡಿಸಿದ್ದ ಆಹಾರ ಪರೀಕ್ಷಿಸಲೆಂದೇ 15 ಮಹಿಳೆಯರ ನೇಮಿಸಿಕೊಂಡಿದ್ದ. ಅವರೆಲ್ಲಾ ಆಹಾರ ತಿಂದ ಮೇಲೂ ಬದುಕಿದ್ದಾರೆ ಎಂಬುದನ್ನು ಖಚಿತಡಿಸಿಕೊಂಡ ಬಳಿಕವಷ್ಟೇ ಆತ ತಾನು ಆಹಾರ ತಿನ್ನುತ್ತಿದ್ದ. ಹೀಗೆ ಆಕಸ್ಮಿಕವಾಗಿ ಆತನ ಕೈಗೆ ಸಿಕ್ಕು, ಆಹಾರ ಪರೀಕ್ಷೆಯ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದು ಮಾರ್ಗೋಟ್‌ ವೋಕ್‌ ಎಂಬ ಮಹಿಳೆ. 

      ಹಿಟ್ಲರ್‌ ಸಸ್ಯಾಹಾರಿ..!
      ಎರಡನೇ ಮಹಾಯುದ್ಧದ ವೇಳೆ ಪತಿ ಜರ್ಮನ್‌ ಸೇನೆಯಲ್ಲಿ ಸೇವೆಗೆ ತೆರಳಿದ ವೇಳೆ, ಈಕೆ ಬಾಂಬ್‌ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಿಟ್ಲರ್‌ನ ಕೈಗೆ ಸಿಕ್ಕಿಬಿದ್ದಿದ್ದಳು. ಆತ ಮಾರ್ಗೋಟ್‌ಳನ್ನು ಆಹಾರ ಪರೀಕ್ಷೆ ಕೆಲಸಕ್ಕೆ ಸೇರಿಸಿಕೊಂಡಿದ್ದ. ಶುದ್ಧ ಸಸ್ಯಾಹಾರಿಯಾಗಿದ್ದ ಹಿಟ್ಲರ್‌ನ ಆಹಾರವನ್ನು ತಿನ್ನುವುದೇ ಮಾಗೋìಟ್‌ ಸೇರಿದಂತೆ 15 ಮಹಿಳೆಯರ ಏಕೈಕ ಕೆಲಸವಾಗಿತ್ತು. ಪ್ರತಿ ಬಾರಿ ಆಹಾರ ಬಾಯಿಗಿಟ್ಟಾಗಲೂ ಎಲ್ಲರೂ ಜೀವಭಯಕ್ಕೆ ಒಳಗಾಗಿರುತ್ತಿದ್ದರು. ರುಚಿಯಾದ ಆಹಾರ ಬಾಯಲ್ಲಿದ್ದರೂ, ಅದರಲ್ಲಿ ವಿಷ ಇರಬಹುದೇನೂ ಎಂಬ ಆತಂಕ ಅವರನ್ನೆಲ್ಲಾ ಕಾಡುತ್ತಿತ್ತು.

      ಇಷ್ಟೆಲ್ಲಾ ಭದ್ರತೆ ಇದ್ದರೂ, 1944ರಲ್ಲಿ ಹಿಟ್ಲರ್‌ನ ಆಪ್ತ ಬಳಗದಲ್ಲಿದ್ದ ವ್ಯಕ್ತಿಯೋರ್ವನೇ ಬಾಂಬ್‌ ದಾಳಿ ನಡೆಸಿ ಹಿಟ್ಲರ್‌ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಹಿಟ್ಲರ್‌ ಬದುಕುಳಿದ. ಈ ಸ್ಫೋಟದ ಘಟನೆಯ ಸಮಯದಲ್ಲೇ ಆಪ್ತರ ಸಲಹೆ ಮೇರೆಗೆ ಮಾರ್ಗೋಟ್‌ ಹಿಟ್ಲರ್‌ನ ಆವಾಸಸ್ಥಾನದಿಂದ ಪರಾರಿಯಾಗಿ ಬರ್ಲಿನ್‌ ಸೇರಿಕೊಂಡಿದ್ದಳು. ಆದರೆ ಉಳಿದ 14 ಜನ ಸೇವಕಿಯರು ಹಿಟ್ಲರ್‌ ಬಳಿಯೇ ಉಳಿದುಕೊಂಡಿದ್ದರು.
      ಮುಂದೆ ಕೆಲವೇ ದಿನಗಳಲ್ಲಿ ಸೋವಿಯತ್‌ ಒಕ್ಕೂಟದ ಪಡೆಗಳು ಜರ್ಮನ್‌ ಮೇಲೆ ದಾಳಿ ನಡೆಸಿ ದೇಶವನ್ನು ಕೈವಶ ಮಾಡಿಕೊಂಡವು. ಸೋವಿಯತ್‌ ಪಡೆಗಳು ಹಿಟ್ಲರ್‌ನ ಎಲ್ಲಾ 14 ಆಹಾರ ಪರೀಕ್ಷಕಿಯರನ್ನು ಗುಂಡಿಟ್ಟು ಹತ್ಯೆ ಮಾಡಿದವು. ಇತ್ತ ಹಿಟ್ಲರ್‌ನಿಂದ ಪಾರಾಗಿದ್ದ ಮಾರ್ಗೋಟ್‌ ರಷ್ಯಾ ಸೈನಿಕರ ಕೈಯಲ್ಲಿ ಸತತ 14 ದಿನ ಅತ್ಯಾಚಾರಕ್ಕೆ ತುತ್ತಾದಳು. 

      ಮುಂದೆ ಯುದ್ಧ ಮುಗಿದ ಮೇಲೆ ಆಕೆ ಹೊಸ ಜೀವನ ಕಂಡುಕೊಂಡಿದ್ದಳು. ಆದರೆ ತಾನು ಹಿಟ್ಲರ್‌ನ ಆಹಾರ ಪರೀಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ವಿಷಯವನ್ನೂ ಮಾರ್ಗೋಟ್‌ ಯಾರಿಗೂ ತಿಳಿಸಿರಲಿಲ್ಲ. ತಿಳಿಸಿದರೆ ಯಾರಾದರೂ ಹತ್ಯೆ ಮಾಡುವ ಭಯ ಆಕೆಯನ್ನು ಕಾಡುತ್ತಿತ್ತು. ಇದೀಗ ಜೀವನದ ಕಡೆಯ ಕ್ಷಣಗಳನ್ನು ಎಣಿಸುತ್ತಿರುವ ಮಾರ್ಗೋಟ್‌, ತನ್ನ ಅನುಭವಗಳನ್ನೆಲ್ಲಾ ಬಯಲು ಮಾಡಿದ್ದಾಳೆ. ಅದರಲ್ಲಿ ಆಕೆ ತನ್ನ ಈ ಕಥೆ ಹೇಳಿಕೊಂಡಿದ್ದಾಳೆ.