ಶುಕ್ರವಾರ, ಡಿಸೆಂಬರ್ 25, 2009



ಲಹರಿ 
ಬೆಚ್ಚಗಿನ  ನೆನಪೇ,
ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ  ಪ್ರೀತಿ!
ಹುಚ್ಚ ಅಂತಿಯಾ?
 ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
    ನೀನು ಬಂದ ಮೇಲೆ ತಾನೇ
    ಇಷ್ಟು ಚಂದ ಈ ಬಾಳು
    ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ...
ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ...
  ಏನೋ ಒಂಥರಾ...ಈ ಪ್ರೀತಿಯು...
   ಈ ರೀತಿಯು ಮನಸ್ಸೆಲ್ಲಾ.....
ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು .
ಪ್ರಾಚೀನ ಪುಣ್ಯ ಕ್ಷೇತ್ರ ಅರೆಯೂರು ವೈದ್ಯನಾಥೇಶ್ವರ ಸನ್ನಿದಿ 
ಜ್ಯೋತಿರ್ಲಿಂಗುವಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಬೀಡು ಅರೆಯೂರು.
ದೇವಸ್ಥಾನದ ಹೆಚ್ಚಿನ ಮಾಹಿತಿಗೆ 
http://www.areyurushreevaidyanatha.org/
http://www.areyurushreevaidyanatha.blogspot.com/
http://www.areyurushreevaidyanatheshwara.blogspot.com/
ಸಂಪರ್ಕಿಸಿ

ಭಾನುವಾರ, ಸೆಪ್ಟೆಂಬರ್ 13, 2009

ಕಾವ್ಯ ಕನ್ನಿಕೆ


ನಿವೇದನೆ

ಓ ನನ್ನ ಕಾವ್ಯಕನ್ನಿಕೆ

ನಿನ್ನ ಜಿಂಕೆ ಕಂಗಳ ಮಿಂಚು

ಸಾಟಿಯೇ ನೂರುದೀಪಗಳ ಬೆಳಕಿಗೆ ?

ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ

ನಿನಗಾಗಿ ಕಾದು

ನಿನಗಾಗಿ ಕಾತರಿಸಿ

ನೀ ಬರುವ ಹಾದಿಯಲಿ

ಕಾಯುತ್ತ ಕುಳಿತಿರುವ

ಈ ನಿನ್ನಾರಾದಕನ ಮೇಲೂ

ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ

ಶುಕ್ರವಾರ, ಏಪ್ರಿಲ್ 24, 2009

ವಿಪರ್ಯಾಸ

ನನ್ನ ಊರು ವೈದ್ಯನಾಥಪುರ
ನನ್ನಊರಿಗೂ ವೈದ್ಯರಿಗೂ 
ಎಂಟ್ಹತ್ತು ಮೈಲಿ ದೂರ

ಗುರುವಾರ, ಏಪ್ರಿಲ್ 9, 2009

ಕಥೆ
ಗೌರಿ

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ. 


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು. 

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು. 


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ


-ಅರೆಯೂರು ಚಿ.ಸುರೇಶ್
ತುಮಕೂರು
7090564603

ಭಾನುವಾರ, ಏಪ್ರಿಲ್ 5, 2009

ಮಂಡ್ಯ ತಾಲ್ಲೋಕು ಸಾಹಿತ್ಯ ಸಮ್ಮೇಳನ (೨೧ - ೩ -೨೦೦೯ )ಕವನ ವಾಚನ ಸಂದರ್ಭ

ಕಾವ್ಯಶ್ರೀ ಪ್ರಶಸ್ತಿಗೆ ಆಯ್ಕೆ ಆದ ಕವನ ವಾಚನ ಸಂಧರ್ಭ

ಅರೆಯೂರು ಚಿ.ಸುರೇಶ್ ಕುಟುಂಬ

ಅರೆಯೂರು ಚಿ.ಸುರೇಶ್ ಕುಟುಂಬ
ಎಡದಿಂದ ಬಲಕ್ಕೆ ಅರೆಯೂರು ಚಿ.ಸುರೇಶ್, ರುದ್ರೇಶ್ (ಭಾವ), ಚಿಕ್ಕಮಾದಯ್ಯ (ತಂದೆ), ಜಯಮ್ಮ (ತಾಯಿ), ಶಶಿಕಲಾ (ತಂಗಿ), ಕೃಷ್ಣಮೂರ್ತಿ (ಅಣ್ಣ)


ಅರೆಯೂರು ಚಿ.ಸುರೇಶ್ ಕುಟುಂಬ

ಅರೆಯೂರು ಚಿ.ಸುರೇಶ್, ರಂಜಿತ ವಕ್ಕೋಡಿ (ಮಗಳು), ಪುಟ್ಟಮ್ಮ (ಪತ್ನಿ)
ಅರೆಯೂರು ಚಿ.ಸುರೇಶ್ ಕುಟುಂಬ

ಅರೆಯೂರು ಚಿ.ಸುರೇಶ್, ರಂಜಿತ ವಕ್ಕೋಡಿ (ಮಗಳು), ಪುಟ್ಟಮ್ಮ (ಪತ್ನಿ)
ಅರೆಯೂರು ಚಿ.ಸುರೇಶ್ ಕುಟುಂಬ

ಅರೆಯೂರು ಚಿ.ಸುರೇಶ್, ರಂಜಿತ ವಕ್ಕೋಡಿ (ಮಗಳು)


ಶನಿವಾರ, ಏಪ್ರಿಲ್ 4, 2009

ನನ್ನವಳ ಹುಚ್ಚು ಕನಸುಗಳು



ನಿನ್ನ ಪ್ರೀತಿಯ ನೆನಪುಗಳು ಸಹ, ಥೇಟ್ ನಿನ್ನ ಥರಾನೆ.. ನನ್ನ ಜೊತೆ ತುಂಟಾಟ ಆಡುತ್ವೆ.. ನನ್ನ ಸತಾಯಿಸಿ, ನಗಿಸಿ, ಅಳಿಸಿ.. ಒಮ್ಮೆ ಕೆನ್ನೆ ಕೆಂಪಗಾಗಿಸುತ್ತೆ. ನೀನು ನನ್ನ ಹತ್ತಿರ ಮಾತಾಡ್ತಾ ಇದ್ರೂ.. ನಿನ್ನ ನೆನಪುಗಳು ನನಗೆ ಇನ್ನೂ ಹತ್ತಿರ.. ನೀನು ನನಗೆಷ್ಟು ಹತ್ತಿರಾನೋ ಅದಕ್ಕಿಂತ ಜಾಸ್ತಿ ಹತ್ತಿರ ನಿನ್ನ ನೆನಪುಗಳು.. ಯಾಕಂದ್ರೆ ನೆನಪುಗಳು ಬೇಕು ಅನಿಸಿದಾಗಲೆಲ್ಲ ನನ್ನ ಹತ್ರ ಓಡಿ ಬರುತ್ವೆ..ನೀನು ನನ್ನಿಂದ ಒಂದಿನ ಒಂದು ಕ್ಷಣ ಮಾತಾಡ್ದೇನೆ ದೂರ ಹೋಗಬಹುದು.. ಆದರೆ ನಿನ್ನ ನೆನಪುಗಳು ಹಾಗಲ್ಲ.. ಅವು ಎಂದೆಂದೂ ನನ್ನವು.. ಮತ್ತೆ ಎಂದೂ ನನ್ನಿಂದ ದೂರ ಆಗೋಲ್ಲ ಅವು..

ನಾನ್ ನಿನ್ ಬಗ್ಗೆ ಕಾಣೋ ಕನಸುಗಳಿಗೆ ಏಣೆಯೇ ಇಲ್ಲ.. ಒಂದೊಂದಾಗಿ ಹೇಳ್ತಾ ಹೋಗ್ತೀನಿ..ನೀನ್ ಹಾಗೆ ಕೇಳ್ತಾ ಹೋಗ್ತಿಯಾ?......

ನೀನ್ ಹಾಕೊಂಡಿರೋ ಶರ್ಟ್ ಮೇಲೇನೇ ನಾನು ಬಟನ್ ಪೋನಿಸ್ತಾ ಇದ್ರೆ ಎಷ್ಟು ಹಿತ ಅನ್ಸುತ್ತೆ ಗೊತ್ತಾ?

ನೀನೇ ಖುದ್ದಾಗಿ ನನ್ನ ಕೂದಲನ್ನ ಬಾಚಿ,ಬಾಚಣಿಗೆಯನ್ನ ನಿನ್ ಬಾಯಲ್ಲಿಟ್ಟುಕೊಂಡು,ನನಗೆ ಜಡೆ ಹಾಕ್ತಾ ಇದ್ರೆ ಏನ್ ಹಿತ ಅನ್ಸುತ್ತೆ ಗೊತ್ತಾ..?

ಮದುವೆಗೆ ಹೋಗಬೇಕಾದ್ರೆ "ಸೀರೆ ಉಟ್ಕೋ" ಅಂತ ನೀನು, "ಸೀರೆ ಉಟ್ಕೊಳ್ಳೋಕೆ ಬರಲ್ಲ ಚೂಡಿ ಹಾಕೊಳ್ತಿನಿ"ಅಂತ ನಾನು,  ಹಾಗಿದ್ರೆ "ನೀನ್ ಬರೋದ್ ಬೇಡ" ಅಂತ ನೀನು, "ಬರಲ್ಲ ಹೋಗೋ" ಅಂತ ನಾನು ಇಬ್ರು ಹೀಗೆ ಹಾವು ಮುಂಗುಸಿ ತರ ಕಚ್ಛಾಡ್ತಾ  ಎಷ್ಟು ತಮಾಷೆಯಾಗಿರತ್ತೆ ಗೊತ್ತಾ?

ನೀನೇ ನನ್ನ ಕಾಡಿಬೇಡಿ ಸೀರೆ ಉಟ್ಕೋಳ್ಳೊಕೆ ಒಪ್ಪಿಸಿ ನೀನೇ ನನ್ಗೆ ಸೀರೆ ಉಡಿಸ್ತಾ ಇರೋವಾಗ ನೀನ್ ಕಷ್ಟಪಟ್ಟು ಉಡೋಸೋದನ್ನ ನೋಡಿ ನಾನ್ ನೀನ್ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೊಡ್ತಾ ಇದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?ಕೊನೆಗೆ ನೀನೇ ಸೀರೆ ಉಡಿಸಿ "ನೋಡು ನಾನ್ ಎಷ್ಟು ಚೆನ್ನಾಗಿ ಸೀರೆ ಉಡಿಸ್ತೀನಿ" ಅಂತ ಹೇಳ್ತಿದ್ರೆ ಎಷ್ಟು ತಮಾಷೆಯಾಗಿರತ್ತೆ ಗೊತ್ತಾ?

ನೀನ್ ಮನೆಗೆ ಲೇಟಾಗಿ ಬಂದಾಗ, ನಾನು ನಿನ್ಮೇಲೆ ಕೋಪ ಮಾಡ್ಕೊಂಡು ಮಾತು ಆಡದೆ ಇದ್ರೆ ಎಷ್ಟು ಸುಖಾ ಅನ್ಸುತ್ತೆ ಗೊತ್ತಾ?

Sorry ಕಣೇ ಅಂತ ನೀನ್ ಹತ್ರ ಬಂದಾಗ ಕೊರಳ್ ಪಟ್ಟಿ ಹಿಡಿದು ನಿನ್ನ ಚೆನ್ನಾಗ್ ಹೊಡೆದು ಆಮೇಲೆ ನಿನ್ನೆದೆಮೇಲೆ ಒರಗಿ ನಿನ್ನ ಗಟ್ಟಿಯಾಗಿ ಅಪ್ಕೊಂಡು ಇನ್ಮೇಲೆ ಲೇಟಾಗಿ ಬರಬಾರ್ದು ಅಂತ ಅಳೋದ್ರಲ್ಲಿ ಏಷ್ಟು ಸಮಾಧಾನ ಇರತ್ತೆ ಗೊತ್ತಾ?

ಯು2 ನೋಡ್ತೀನಿ ಅಂತಾ ನಾನು.. ಕ್ರಿಕೆಟ್ ನೋಡ್ತೀನಿ ಅಂತಾ ನೀನು.. ಹೀಗೆ ಇಬ್ರು ಹಂದಿ-ನಾಯಿಗಳ ಥರ ಕಚ್ಚಾಡ್ತಾ ಇದ್ರೆ ಎಷ್ಟು ಮಜಾ ಇರುತ್ತೆ ಗೊತ್ತಾ?

ಇಬ್ರು ಒಟ್ಟಿಗೆ ಬೈಕ್ನಲ್ಲಿ ಹೋಗ್ತಾ ಇರೋವಾಗ ನಾನ್ ನಿನ್ ಹಿಂದುಗಡೆ ಕುಳಿತುಕೊಂಡು ಬೇಕಂತ್ಲೆ ನಾನ್ ಹಾರಾಡೋ ಕೂದಲ್ನನ್ನ ನಿನ್ ಮುಖಕ್ಕೆ ರಂಗೋಲಿ ಬಿಡಿಸೊಹಾಗೆ
ತಾಕೋವಂತೆ ತಮಾಷೆ ಮಾಡ್ತಾ ಇದ್ರೆ ಏನ್ ಹಿತ ಅನ್ಸುತ್ತೆ ಗೊತ್ತಾ..?

ಇಬ್ರು ತಾಜಮಹಲ್  ಎದ್ರು ನಿಂತು ಕೈ ಕೈ ಹಿಡ್ಕೊಂಡು ನೀನು "ನೀ ಅಮೃತಧಾರೆ" ಅಂತ  ನಾನು " ಹೇ ಪ್ರೀತಿ ಹುಡುಗ" ಅಂತ ಡ್ಯೂಯೇಟ್ ಸಾಂಗ್ ಹಾಡ್ತಾ ಇದ್ರೆ ಎಷ್ಟು romantic ಆಗಿರುತ್ತೆ ಗೊತ್ತಾ?

ನಾನು ಅಡುಗೆ ಮನೇಲಿ ಒಬ್ಬಳೇ ಇರ್ಬೇಕಾದ್ರೆ ಹಿಂದಿನಿಂದ ನೀನ್ ಬಂದು ಹೆದರಸಿದ್ರೆ ಎಷ್ಟು thrill ಇರುತ್ತೆ ಗೊತ್ತಾ?

ನೀನ್ ಆಪೀಸ್ ನಲ್ಲಿ ಬ್ಯೂಸಿ ಇದ್ಡಾಗ ನಾನು ಮತ್ತೆ ಮತ್ತೆ ಕಾಲ್ ಮಾಡಿ ನಿನ್ಗೆ ಸಿಟ್ಟು ಬರೋ ಹಾಗೆ ಮಾಡೋದ್ರಲ್ಲಿ ಏನ್ ಖುಷಿ ಇರತ್ತೆ ಗೊತ್ತಾ?

ನೀನೆ ಪ್ರೀತಿಯಿಂದ ಗೆಜ್ಜೆ ತಂದು ತೋಡಿಸ್ತಾ ಇದ್ರೆ ಎಷ್ಟು ಖುಷಿಯಾಗಿರತ್ತೆ ಗೊತ್ತಾ?

ನನ್ಗೆ ಹುಷಾರಿಲ್ಲ ಅಂತ ನನ್ನೆಲ್ಲಾ ಕೆಲ್ಸನೂ ನೀನೇ ಮಾಡ್ತಾ ಪ್ರೀತಿಯಿಂದ ನನ್ನ ಬಗ್ಗೆ ಕೇರ್ ತಗೋಳ್ತಿದ್ರೆ ಎಷ್ಟು ಸಂತೋಷ ಆಗತ್ತೆ ಗೊತ್ತಾ?

t.v. ನಲ್ಲಿ ಬರೋ ಸೆಕ್ಸಿ ಹಿಯೋಯಿನನ ಬಾಯ್  ಬಿಟ್ಕೊಂಡು ನೀನ್ ನೋಡ್ತಿರಬೇಕಾದ್ರೆ ಸೌಟ್ ನಿಂದಾ ನಾನ್ ನಿನ್ನ ಹೋಡಿತಾ ಇದ್ರೆ ಎಷ್ಟು ಮಜಾ ಇರತ್ತೆ ಗೊತ್ತಾ?

ಯಾವುದೋ ಕಾರಣಕ್ಕೆ 2 ದಿನ ಇಬ್ರು ಮಾತು ಬಿಟ್ಟು ಆಮೇಲೆ ಒಬ್ಬರ್ನೋಬ್ರು ತಬ್ಬಿಕೊಂಡು ಗೊಳೋ ಅಂತಾ ಅಳೋದ್ರಲ್ಲಿ ಎಷ್ಟು ಹಿತ ಇರತ್ತೆ ಗೊತ್ತಾ?

ಯಾವಾಗ್ಲೂ ನಾವಿಬ್ಬರೂ I Love You.... I Love You  ಅಂತ ಬಬ್ರಿಗೊಬ್ಬರು ಹೇಳ್ಕೊಳ್ತಾ ಇದ್ರೆ ಎಷ್ಟು ಖುಷಿ ಅನ್ಸುತ್ತೆ ಗೊತ್ತಾ?

ಕಥೆ: ದುರ್ಯೋಧನನ ಸ್ವಗತ

ಕಥೆ

 ದುರ್ಯೋಧನನ ಸ್ವಗತ

ಸಮಂತಪಂಚಕ ನದೀ ತೀರದಲ್ಲಿ ನಿರ್ಜೀವವಾಗಿ ಬಿದ್ದಿದ್ದಾನೆ ದುರ್ಯೋಧನ. ಹುಟ್ಟಿನಿಂದ ಸಾವಿನವರೆಗೂ ನೆಡೆದಿದ್ದ ದಾಯಾದಿ ಹಗೆತನಕ್ಕೆ ತೆರೆಬಿದ್ದಿದೆ. ತನ್ನ ಗುರುಹಿರಿಯರು, ಬಂಧುಗಳು, ಸಕಲ ಸಹೋದರರೂ, ಪ್ರಿಯಮಿತ್ರ ಹೀಗೆ ಎಲ್ಲರನ್ನೂ ಕಳೆದುಕೊಂಡು ಯುದ್ದದಲ್ಲಿ ಪರಾಜಿತನಾಗಿ, ಸತ್ತು ಬಿದ್ದಿದ್ದಾನೆ. ಆದರೆ ಅವನ ಆತ್ಮ ಮಾತ್ರ ಯಾಕೋ ಏನೋ, ಇನ್ನೂ ಅವನ ಮುಂದೆಯೇ ಕುಳಿತಿಹುದೇ ಹೊರತು ಹೊರಡಲು ಸಿದ್ದವಿಲ್ಲ. ಕುರುಕುಲಕ್ಕೆ ಶಾಪವೆಂಬಂತಾಗಿ, ಕೆಟ್ಟತನಕ್ಕೆ ಉದಾಹರಣೆಯಾಗಿ ಲೋಕತ್ಯಜಿಸಿದವನ ಜೀವನ ವಿಶ್ಲೇಷಣೆ ಮಾಡುವುದಕ್ಕಾಗಿ ಸ್ವಲ್ಪ ಕಾಲ ನಿಂತು ಮುಂದೆ ಹೋಗುವುದಾಗಿ ನಿಶ್ಚಯಿಸಿದೆ. ದೇಹದೊಂದಿಗೆ ಕಲಿತನವೂ ಹೋಗಿದ್ದುದರಿಂದಲೇ ಈ ಅವಲೋಕನ ಮಾಡಿಕೊಳ್ಳುವ ಅವಕಾಶ ದೊರೆತಂತಿದೆ.

***

ಇತಿಹಾಸದ ಪುಟಗಳಲ್ಲಿ, ನನ್ನ ಹೆಸರು ದುಷ್ಟರ ಸಾಲಿನಲ್ಲಿ ಸೇರಿಹೋಗಿದೆ. ಕೆಡುಕಿಗೆ ಉದಾಹರಣೆ ಕೊಡುವ ಸಂದರ್ಭದಲ್ಲಿ ನನ್ನ ಹೆಸರೂ ಬರುವುದರಲ್ಲಿ ಸಂಶಯವಿಲ್ಲ. ನಾನು ತಪ್ಪು ಮಾಡಿದ್ದೇನೆ ನಿಜ ಆದರೆ ಮಾಡಿದ್ದೆಲ್ಲಾ ತಪ್ಪಲ್ಲ. ಇಷ್ಟಕ್ಕೂ ನಾನು ಮಾಡಿದ ತಪ್ಪೇನು? ಮೊದಲೇ ಕಲಿಪುರುಷನನ್ನು ಹೊತ್ತಿದ್ದೆ ನಾನು. ಕಲಿಯ ಅವತಾರಿಯೇ ಆದ ಮೇಲೆ ಕೆಟ್ಟತನವಲ್ಲದೆ ಒಳ್ಳೆಯತನ ಬರಲು ಹೇಗೆ ಸಾಧ್ಯ. ಅದೂ ಅಲ್ಲದೇ, ನಾನು ಕೆಟ್ಟವನಾದ್ದರಿಂದ ತಾನೇ ಆ ಪಾಂಡವರು ಜನರ ಕಣ್ಣಿಗೆ ಒಳ್ಳೆಯವರಾಗಿ ಕಂಡಿದ್ದು?

ಇರಲಿ, ಇಷ್ಟಕ್ಕೂ ನೆಡೆದದ್ದಾದರೂ ಏನು?

ನಾ ಹುಟ್ಟಿದಾಗ ಅಪಶಕುನಗಳು ಕಾಣಿಸಿಕೊಂಡಿತಂತೆ. ಅಂದೇ ಜಗತ್ತಿಗೆ, ದುಷ್ಟನೊಬ್ಬನ ಜನ್ಮವಾಗುತ್ತಿದೆ ಅಂತ ಅರಿವಾಯಿತಂತೆ. ನಾ ಹೇಳುವುದು ಏನೆಂದರೆ, ಕಲಿಯ ಅವತಾರವಾಗುತ್ತಿದೆ ಎಂಬುದಕ್ಕೆ ಹಾಗೆ ನೆಡೆದಿರಬಹುದೋ ಏನೋ ಆದರೆ ದುರ್ಯೋಧನನ ಹುಟ್ಟಿಗಾಗಿ ಖಂಡಿತ ಅಲ್ಲ. ಹುಟ್ಟುತ್ತಲೇ ಯಾರಾದರೂ ದುಷ್ಟರಾಗಿ ಹುಟ್ಟುವರೇ? ಇಷ್ಟಕ್ಕೂ, ಹುಟ್ಟಿದ ಕೂಸಿನ ಮೇಲೆ ಈ ರೀತಿ ಅಪವಾದ ಹೊರಿಸುವುದು ಸರಿಯೇ? ನನಗರಿಯದೇ ನೆಡೆದ ಈ ವೈಚಿತ್ರ್ಯಕ್ಕೆ ನಾನು ಹೊಣೆಯೇ? ಈ ರೀತಿ ಅಪಪ್ರಚಾರ ನೆಡೆದುದ್ದರಿಂದಲೇ, ಇಡೀ ಜೀವನ, ನಾನು ಮಾಡಿದ ಪ್ರತಿ ಕಾರ್ಯವೂ ಎಲ್ಲರಿಗೂ ತಪ್ಪಾಗಿಯೇ ಕಂಡದ್ದು. ಇದೊಂದು ದುರಂತವಲ್ಲದೇ ಮತ್ತೇನು?

ಮತ್ತೊಂದು ವಿಷಯ. ನನ್ನ ಹೆಸರಿನ ಆರಂಭದಲ್ಲೇ ’ದು’ ಕಾರವಿದೆ ಹಾಗಾಗಿ ದುಷ್ಕ್ರುತ್ಯಗಳು ನೆಡೆದವು ಎನ್ನುವ ಜನರಿಗೆ ನಾನು ಕೇಳುವುದು ಏನೆಂದರೆ, ಪಂಡಿತ ಪಾಮರರು ಎನಿಸಿಕೊಂಡವರು ಅಂದು ನನಗೆ ಹೆಸರಿಡುವಾಗ ಈ ಸಣ್ಣ ವಿಷಯ ಯೋಚಿಸಲಿಲ್ಲವೇ? ಅದಲ್ಲದೇ ನನಗೆ ಸುಯೋಧನ ಎಂಬ ಹೆಸರೂ ಇತ್ತಲ್ಲಾ? ಕೇವಲ ಹೆಸರಿನಿಂದ ನಾನು ಕೆಟ್ಟವನಾದೆನೆಂದರೆ ಅದು ನಂಬತಕ್ಕ ಮಾತೇ? ಈ ಆರೋಪಕ್ಕೆ ನಗಲೇ ? ಅಳಲೇ?

ಹುಟ್ಟಿದ ದಿನದಿಂದಲೂ ಇವರು ಪಾಂಡವರು, ಇವರು ಕೌರವರು ಎಂದು ಭೇದ ತೋರಿಸುವ ಬದಲು, ಇವರೆಲ್ಲ ಕುರು ವಂಶದವರು ಎಂದೇ ಬೆಳಸಿದ್ದರೆ, ಇಷ್ಟೆಲ್ಲ ಅನಾಹುತವಾಗುತ್ತಿತ್ತೆ ? ಪಾಂಡವರು ಮಾಡಿದ್ದೆಲ್ಲ ಸರಿ, ಕೌರವರು ಮಾಡಿದ್ದೆಲ್ಲ ತಪ್ಪು ಎಂದು ಪದೇ ಪದೇ ಒಂದಲ್ಲ ಒಂದು ಕಾರಣಕ್ಕೆ ದೂರುತ್ತಿದ್ದರೆ, ಎಷ್ಟು ದಿನ ಸುಮ್ಮನಿರಲು ಸಾಧ್ಯ. ಈ ತಾರತಮ್ಯವೇ, ಮುಂದೆ, ಪಾಂಡವರ ಮೇಲೆ ದ್ವೇಷವಾಗಿ ತಿರುಗಲು ಕಾರಣವಾಯಿತು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ? ಇದಕ್ಕೆ ಕಾರಣರಾರು? ಎಲ್ಲಕ್ಕೂ ಧರ್ಮ ಹೆಸರನ್ನು ಹೇಳಿ ನಮ್ಮದು ತಪ್ಪು ಎಂದೇ ಸಾಧಿಸುವಾಗ, ದಿನ ನಿತ್ಯದ ಅವಮಾನ ಹೊರಗೆ ಬರುವುದಾದರೂ ಹೇಗೆ ?

ಚಿಕ್ಕಂದಿನಲ್ಲಿ, ತಾತ ಭೀಷ್ಮರು ತಮ್ಮ ತೊಡೆಯ ಮೇಲೆ ಅರ್ಜುನನನ್ನು ಕುಳ್ಳರಿಸಿಕೊಂಡು ಕಥೆ ಹೇಳುತ್ತ ಊಟ ಮಾಡಿಸುವುದನ್ನು ಕಂಡು ನನಗೂ ಹಾಗೇ ಕುಳಿತುಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಆದರೆ ಹುಟ್ಟಿನಿಂದಲೇ ಬಂದಿದ್ದ ಅಹಂ ನನ್ನನ್ನು ತಡೆದಿತ್ತು. ತಾತನಾದರೂ ನನ್ನನ್ನು ತಾವೇ ಕರೆಯಬಹುದಿತ್ತಲ್ಲವೇ? ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ಈ ತಾರತಮ್ಯವೇಕೆ?

ಪಾಂಡವರು ತಂದೆ ಇಲ್ಲದ ಮಕ್ಕಳಾದರೂ, ಆಟ-ಪಾಟ ನೋಡಿ ನಲಿವ ತಾಯಿ ಇದ್ದಳು. ಆದರೆ ನಮಗೆ ? ತಂದೆಯು ಹುಟ್ಟು ಕುರುಡರಾದರೆ, ತಾಯಿಯು ಸ್ವಯಂಕೃತ ಕುರುಡು. ಲೋಕವು ಗಾಂಧಾರಿ ಮಾಡಿದ ತ್ಯಾಗವನ್ನು ಹೊಗಳುತ್ತಿದ್ದರೇ ವಿನಹ, ಇನ್ನೊಬ್ಬರ ಅಡಿಯಲ್ಲೇ ಬೆಳೆದ ನಮ್ಮ ಅಳಲು ಯಾರಿಗೂ ಕಾಣಲೇ ಇಲ್ಲವೇ? ತಂದೆ-ತಾಯಿ ಇದ್ದೂ ಅನಾಥರಾಗಿದ್ದೆವು ಎಂದರೆ ಅದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನು?

ಉರಿಯುತ್ತಿದ್ದ ಬೆಂಕಿಯನ್ನು ಶಮನಗೊಳಿಸಲು ಭಗವಂತನು ಪಾಂಡವರಿಗೆ ಒಲಿದರೆ, ಬೆಂಕಿಗೆ ತುಪ್ಪವಾಗಿ ನಮಗೆ ದೊರಕಿದ್ದು ಸೋದರಮಾವ ಶಕುನಿ. ಕರ್ಣಗಳಿಗೆ ದಿವ್ಯಾಮೃತವನ್ನೇ ತುಂಬುತ್ತ ಸರಿ ದಾರಿಗೆ ನೆಡೆಸುವ ನಾವಿಕನು, ಪಾಂಡವರ ಪಾಲಿಗೆ. ಸೂರ್ಯನ ಹುಟ್ಟಿನಿಂದ ಆರಂಭವಾಗಿ ದಿನಪೂರ್ತಿ ಹಾಗೂ ಜೀವನವಿಡೀ ದ್ವೇಷ, ಅಸೂಯೆ ಎಂಬ ಮಂತ್ರಗಳನ್ನೇ ಉಲಿವ ಹಕ್ಕಿ ಶಕುನಿ, ಕೌರವರ ಪಾಲಿಗೆ. ಪ್ರತಿ ಘಳಿಗೆಯೂ ಇಂತಹ ನುಡಿಗಳೇ ಕೇಳುತ್ತಿದ್ದರೆ, ನನ್ನ ಮನದಲ್ಲಿ ಒಳಿತು ಎಂಬುದಕ್ಕೆ ಸ್ಥಾನವೇ ಇಲ್ಲದಂತಾಗುವುದಿಲ್ಲವೇ?

ನಂತರದ ನಮ್ಮ ಜೀವನವನ್ನು ಹೊಕ್ಕು, ತಾರತಮ್ಯವನ್ನು ಮತ್ತಷ್ಟು ಬೆಳೆಸಲು ಕಾರಣರಾದವರು ಆಚಾರ್ಯ ದ್ರೋಣ. ಗುರುಗಳಾಗಿ ಶಿಷ್ಯರ ನಡುವೆ ತಾರತಮ್ಯ ತೋರಿದ್ದು ಸರಿಯೇ? ಪಾಂಡವರೆಂದರೆ ಅವರಿಗೇಕೆ ಅಷ್ಟು ಒಲವು ? ತಮ್ಮ ಶಿಷ್ಯ ಅರ್ಜುನನ ಉನ್ನತಿಗೆ ಅಡ್ಡವಾಗಬಾರದೆಂದು ಪಾಪ ಏಕಲವ್ಯನ ಹೆಬ್ಬರಳನ್ನೇ ಮುರಿದುಕೊಂಡದ್ದು ಸರಿಯೇ? ಅಷ್ಟೊಂದು ಅಂಧ ಮಮತೆಯೇ ಅರ್ಜುನನನ ಮೇಲೆ? ವಿಧಿಯಾಟದ ಇನ್ನೊಂದು ಕೈಗೊಂಬೆ ಈ ಆಚಾರ್ಯರು. ಇರಲಿ ಆಚಾರ್ಯ ನಿಂದನೆ ಮಾಡಲಾರೆ. ಉಪ್ಪುಂಡ ಋಣಕ್ಕೆ ನನ್ನೊಂದಿಗೆ ಕೊನೆ ತನಕ ಇದ್ದವರು.

ಮದುವೆಗೆ ಮುನ್ನ ತಾಯಿಯಾದವಳೆಂಬ ಅಪವಾದಕ್ಕೆ ಗುರಿಯಾಗುವೆನೆಂದು ಹೆದರಿ, ಹೆತ್ತ ಮಗನನ್ನೇ ನದಿಗೆ ನೂಕಿದ ತಾಯಿ ಕುಂತಿಯ ಬಗ್ಗೆ ಏನ ಹೇಳಲಿ? ನಿನ್ನೆದುರಿಗೇ ಲೋಕವು ಅವನನ್ನು ಸೂತಪುತ್ರನೆಂದು ಜರಿಯುತ್ತಿದ್ದರೂ ಸುಮ್ಮನಿದ್ದೆಯಲ್ಲ ತಾಯಿ? ಇದು ಸರಿಯೇ? ಅದು ಹೋಗಲಿ, ನಾನು ಆ ರಾಧೇಯನ ಪರವಾಗಿ ನಿಂತು ಅಂಗ ದೇಶದ ರಾಜನನ್ನಾಗಿ ಮಾಡಿ ಅವನ ಅವಮಾನವನ್ನು ತಡೆಗಟ್ಟಿದಾಗ್ಯೂ ನನ್ನ ಬಗ್ಗೆ ಒಂದು ಒಳ್ಳೆಯ ಮಾತನ್ನೂ ಆಡದೆ ಹೋದೆಯಾ ತಾಯಿ? ಆದರೆ ನಾ ಮಾಡಿದ ಕಾರ್ಯಕ್ಕೆ ಲೋಕ ನನ್ನ ಬಗ್ಗೆ ಆಡಿದ ಮಾತೇನು ಗೊತ್ತೆ? ಅರ್ಜುನನ ವಿರುದ್ದ ಹೋರಾಡಲು ಕರ್ಣನೆಂಬ ಅಸ್ತ್ರವನ್ನು ಕಾಪಾಡಿದೆ ಎಂದು. ಅಂದರೆ, ಅಂದು ಈ ಮಾತನ್ನು ಆಡಿದ ಜನರಿಗೆ, ಕುರುಕ್ಷೇತ್ರ ಯುದ್ದ ನೆಡೆಯುತ್ತದೆ ಎಂದು ಗೊತ್ತಿತ್ತೇ?

ಇಷ್ಟಕ್ಕೂ ಆ ಸಂದರ್ಭದಲ್ಲಿ ಕರ್ಣನ ಪರವಾಗಿ ನಾನೇಕೆ ನಿಂತೆ ಎಂಬುದಕ್ಕೆ ಕಾರಣವಾದರೂ ನಿಮಗೆ ಗೊತ್ತೇ? ದಿನ ನಿತ್ಯ ತಾರತಮ್ಯವೆಂಬ ಬೇಗೆಯಲ್ಲೇ ಬೇಯುತ್ತ, ಒಂದಲ್ಲ ಒಂದು ರೀತಿ ಅವಮಾನಿತನಾಗಿಯೇ ಜೀವನ ಕಳೆಯುತ್ತಿದ್ದ ನನಗೆ, ಕರ್ಣನು ಎಲ್ಲರೆದುರಿಗೆ ಅವಮಾನಿತನಾಗಿ ಪಡುತ್ತಿದ್ದ ನೋವು ಚೆನ್ನಾಗಿ ಅರಿವಾಗಿತ್ತು. ನನ್ನನ್ನಂತೂ ಯಾರೂ ಕೈಹಿಡಿದು ಕಾಪಾಡಲಿಲ್ಲ. ನಾನಾದರೂ ಈ ಪುಣ್ಯ ಕೆಲಸ ಮಾಡಿದಲ್ಲಿ ಸಾಯುವ ಕಾಲಕ್ಕಾದರೂ ಒಳಿತಾಗುವುದೇನೋ ಎಂಬ ಹಂಬಲ.

ಕೃಪಾಚಾರ್ಯರೇ, ಅಂದು ನೀವು ಎಲ್ಲರ ಸಮ್ಮುಖದಲ್ಲಿ ಕರ್ಣನ ಜಾತಿಯ ಬಗ್ಗೆ ಪ್ರಶ್ನೆ ಮಾಡಿ ಬಹಳ ದೊಡ್ಡ ತಪ್ಪು ಮಾಡಿಬಿಟ್ಟಿರಿ. ನಿಮಗೇ ಅರಿವಿಲ್ಲದಂತೆ ಒಂದು ದೊಡ್ಡ ಅನಾಹುತಕ್ಕೆ ನಾಂದಿಯಾಗಿಬಿಟ್ಟಿರಿ. ಮುಂದಿನ ಯುಗದಲ್ಲಿ, ಕಲಿ ತಾಂಡವವಾಡುವ ಆ ಯುಗದಲ್ಲಿ, ನೀವು ಬಿತ್ತಿದ ’ಜಾತಿ’ ಎಂಬ ಬೀಜ ಹೆಮ್ಮರವಾಗಿ ಬೆಳೆದು, ಮನುಷ್ಯರ ನಡುವೆ ವೈಷಮ್ಯ ಬೆಳೆಸುವಲ್ಲಿ ಹಿರಿದಾದ ಪಾತ್ರವಹಿಸುತ್ತದೆ. ಇದು ಸತ್ಯ ! ಇದು ಸತ್ಯ !! ಇದು ಸತ್ಯ !!!

ಇನ್ನು ಧರ್ಮರಾಯನ ಅರಮನೆಯಲ್ಲಿ ನಾನು ಜಾರಿ ಬಿದ್ದ ಪ್ರಸಂಗ. ನನ್ನ ಸುತ್ತಲೂ ಒಂದು ಷಡ್ಯಂತ್ರವನ್ನೇ ರಚಿಸಿದ್ದರೋ ಎನ್ನಿಸುತ್ತಿದೆ ಈಗ. ಕುರುಕುಲದ ಸೊಸೆಯಾಗಿ ತನ್ನ ಹಿರಿಮೆಯನ್ನೇ ಮರೆತು ಮಹಾರಾಜ ದೃತರಾಷ್ಟ್ರ, ಅಂದರೆ, ನನ್ನ ಪೂಜ್ಯ ತಂದೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ, ಮಗನಾದ ನಾನು ಸಿಡಿದೆದ್ದಿದ್ದು ತಪ್ಪೇ? ಕುರುಕುಲದ ಸೊಸೆ ಎಂಬ ಒಂದೇ ಕಾರಣಕ್ಕೆ ನಾನು ಸುಮ್ಮನಿದ್ದಿದ್ದರೆ ನಾನೊಬ್ಬ ಕ್ಷತ್ರಿಯನಾಗಿದ್ದೂ ವ್ಯರ್ಥವಲ್ಲವೇ? ತಮಗಾದ ಅನ್ಯಾಯಕ್ಕೆ ಪಾಂಡವರು ಶಪಥಗಳನ್ನುಗೈದು ಸೇಡು ತೀರಿಸಿಕೊಳ್ಳಬಹುದು, ಆದರೆ ಕೌರವರು ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬೇಕೇ? ಇದು ಯಾವ ನ್ಯಾಯ ?

ಸಭೆಯಲ್ಲಿ ದ್ರೌಪದಿಯನ್ನು ಕರೆಸಿ ಅವಮಾನ ಮಾಡಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ಆದರೆ ದ್ಯೂತದಲ್ಲಿ ಸೋತು ತಲೆಬಾಗಿ ಕುಳಿತವರನ್ನು ಕಂಡು ನನ್ನ ಮನ ಹುಚ್ಚೆದ್ದು ಕುಣಿದು ನಾನೇನು ಮಾಡುತ್ತಿದ್ದೆನೋ ನನಗೇ ಅರಿವಾಗಲಿಲ್ಲ. ನನ್ನ ಇಡೀ ಜೀವನದಲ್ಲಿ ಪಾಂಡವರನ್ನು ಮೀರಿ ನಿಂತ ಮಹಾಸಂತೋಷದ ಘಳಿಗೆಯದು. ತೀರಾ ಸಂತಸದಲ್ಲಿದ್ದಾಗ ನಾವೇನು ಮಾಡುತ್ತೇವೆ ಎಂಬುದು ನಮಗೇ ಅರಿವಾಗುವುದಿಲ್ಲ ಅಲ್ಲವೇ? ಆ ಸಮಯದಲ್ಲಿ, ಭೀಮನು ಗುಡುಗಿದಾಗ, ಥಟ್ಟನೆ ನನ್ನ ಮನ ಮತ್ತೆ ಮೊದಲಿನ ಸ್ಥಿತಿಗೆ ಬಂದಿತು, ನಿಜ. ಆದರೆ ಕಾಲ ಮಿಂಚಿಹೋಗಿತ್ತಲ್ಲ? ಆಳುವ ದೊರೆ ಮಾಡಬಾರದ ಕೆಲಸವನ್ನು ನಾನು ಮಾಡಿದ್ದಕ್ಕೆ ಈಗಲೂ ನನಗೆ ಪಶ್ಚಾತ್ತಾಪವಿದೆ.

ನನಗೆ ರಾಜ್ಯಾಕಾಂಕ್ಷೆ ಇತ್ತೆಂದು ಹೇಳಿದರಲ್ಲಾ ಜನ, ಪಾಂಡವರಿಗೆ ಇರಲಿಲ್ಲವೇ? ಅಧಿಕಾರದ ಆಸೆ ಇಲ್ಲದವನೂ ಒಬ್ಬ ಕ್ಷತ್ರಿಯನೇ? ನನ್ನದು ಉದ್ದಟತನ, ಅಹಂಕಾರ ಎಂದೆಲ್ಲ ಹೇಳುವಾಗ, ನಾಲ್ವರು ಪಾಂಡವರು ಆ ಸರೋವರದ ಬಳಿ ಯಕ್ಷನೊಡನೆ ತೋರಿದ್ದು ಉದ್ದಟತನ, ಅಹಂಕಾರವಲ್ಲವೇ? ಅಣ್ಣ ಧರ್ಮರಾಯನಿಲ್ಲದಿದ್ದಿದ್ದರೆ ಅತಿರಥ-ಮಹಾರಥ ಎನ್ನಿಸಿಕೊಂಡಿದ್ದವರು ಎಲ್ಲಿರುತ್ತಿದ್ದರು? ಧರ್ಮರಾಯನಿಗೆ ಕರ್ಣನ ಬಗ್ಗೆ ಸುಳಿವೇ ನೀಡಿದೆ ಇದ್ದುದೂ ಈ ಕಾರಣಕ್ಕಾಗಿಯೆ. ಕರ್ಣನು ಎಷ್ಟೇ ಆಗಲಿ ನನಗೆ ಪ್ರಿಯನಾದವನು. ಹಿರಿಯಣ್ಣ ಎಂದು ಅರಿವಾಗಿದ್ದರೆ ಅವನನ್ನೇ ಸಿಂಹಾಸನದ ಮೇಲೆ ಕುಳ್ಳರಿಸಿಬಿಡುತ್ತಿದ್ದ ಧರ್ಮರಾಯ. ಆಗ ಪಾಂಡವರಿಗಿಂತ ನನ್ನ ಕೈ ಮೇಲಾಗುತ್ತಿತ್ತು ಎಂದು ಮುಂದಾಲೋಚನೆ ಮಾಡಿ ಕರ್ಣ ಸಾಯುವವರೆಗೂ ಅವನ ಬಗ್ಗೆ ಧರ್ಮರಾಯನಿಗೆ ತಿಳಿಸಲೇ ಇಲ್ಲ. ಇದು ಮೋಸವಲ್ಲವೇ? ನನಗೀಗ ಇನ್ನೊಂದು ಅನುಮಾನವೂ ಬರುತ್ತಿದೆ. ಎಷ್ಟೇ ಆಗಲಿ ಕರ್ಣ ಧರ್ಮರಾಯನಿಗೇ ಅಣ್ಣ. ಅವನೇನಾದರೂ ತನ್ನ ಬಗ್ಗೆ ತನ್ನ ಪಾಂಡವ ಸಹೋದರರಿಗೆ ತಿಳಿಸಕೂಡದು ಎಂದು ಅವನ ಬಗ್ಗೆ ತಿಳಿದ ಹಿರಿಯರಿಂದ ಮಾತು ತೆಗೆದುಕೊಂಡಿದ್ದನೋ? ಈ ನನ್ನ ಅನುಮಾನ ಸತ್ಯವೇ ಆಗಿದ್ದರೆ, ಹೇ ಕರ್ಣ, ನಿನ್ನ ಕೀರ್ತಿ ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!

ಎಲ್ಲ ಕಾಲಕ್ಕೂ ನನ್ನ ಪರ ವಹಿಸಿದ ಮಹಾರಾಜ ದೃತರಾಷ್ಟ್ರರಿಗೆ ದೊರಕಿದ್ದು ’ಪುತ್ರವ್ಯಾಮೋಹ’ ಎಂಬ ಹಣೆಪಟ್ಟಿ. ಪುತ್ರವ್ಯಾಮೋಹ ಎಂಬುದಿಲ್ಲದಿದ್ದಿದ್ದರೆ ಅರ್ಜುನನನ್ನು ಕಾಪಾಡಲು ಇಂದ್ರನೇಕೆ ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬರಬೇಕಿತ್ತು ? ಇಂದ್ರನ ಆಣತಿ ಮೀರಿ ಸೂರ್ಯನು ತನ್ನ ಪುತ್ರನನ್ನು ರಕ್ಷಿಸಲು ಬರಲಾಗಲಿಲ್ಲ ಎಂಬುದಂತೂ ನಿಜ.

ರಣರಂಗದಲ್ಲಿ ನೆಡೆದದ್ದು ಒಂದೇ ಎರಡೇ? ತಾತ ಭೀಷ್ಮರ ಸಾವು, ದ್ರೋಣರ ಶಸ್ತ್ರತ್ಯಾಗ, ಕರ್ಣನ ಸಾವು. ಎರಡೂ ಕಡೆ ಮೋಸಗಳು ನೆಡೆದವು ಆದರೆ ಎತ್ತಾಡಿದ್ದು ಮಾತ್ರ ಕೌರವರ ತಪ್ಪುಗಳು.

ನನ್ನ ಹಗೆತನ ಏನಿದ್ದರೂ ಪಾಂಡವರ, ಅದರಲ್ಲೂ ಭೀಮನ ಬಗ್ಗೆ ಮಾತ್ರ. ನನ್ನ ಪ್ರಜೆಗಳಿಗೆ ನಾನು ಎಂದಾದರೂ ಅನ್ಯಾಯ ಮಾಡಿದ್ದೇನೆಯೆ? ಧರ್ಮರಾಯನು ಈ ಕಡೆಯ ದಿನದ ಯುದ್ದದಲ್ಲಿ ಯಾರೊಂದಿಗಾದರೂ ಹೋರಾಡು ಎಂಬ ಉದಾರತನ ತೋರಿದರೂ, ನಾನು ಸೆಣಿಸಿದ್ದು ಭೀಮನೊಡನೆ ಮಾತ್ರ. ನಾನು ದುಷ್ಟಬುದ್ದಿ ಉಳ್ಳವನಾಗಿದ್ದಿದ್ದರೆ ಭೀಮನನ್ನು ಬಿಟ್ಟು ಇನ್ಯಾರೊಂದಿಗಾದರೂ ಯುದ್ದ ಮಾಡಬಹುದಿತ್ತು. ಜಯ ಖಂಡಿತ ನನಗೇ ಆಗುತ್ತಿತ್ತು. ಅಲ್ಲವೇ?

ಯಾರೂ ಹುಟ್ಟಿನಿಂದ ದುಷ್ಟರಾಗಿರುವುದಿಲ್ಲ. ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತದೆ.

ನನ್ನ ಸಮಯವಾಯಿತು. ನಾ ಮಾಡಿದ ಕಿಂಚಿತ್ ಉಪಕಾರದ ಫಲದಿಂದ ಆತ್ಮಶುದ್ದಿ ಮಾಡಿಕೊಳ್ಳಲು ಸಮಯ ದೊರೆಯಿತು. ಮುಂಬರುವ ಯುಗದಲ್ಲಿ ನನ್ನಂತಹ ದುರ್ಯೋಧನರು ಎಲ್ಲೆಲ್ಲೂ ಕಂಡುಬರುತ್ತಾರೆ. ಜೀವನವಿಡೀ ಕಲಿಯನ್ನು ಹೊತ್ತ ನನಗಲ್ಲದೇ ಇನ್ಯಾರಿಗೆ ತಿಳಿದಿರುತ್ತದೆ ಇಂತಹ ವಿಷಯ.

ನಾನಿನ್ನು ಬರುತ್ತೇನೆ. ಎಲ್ಲ ಮುಗಿದ ಈಗ ದು:ಖಿಸಿದರೆ ಫಲವೇನು ? ದುಷ್ಕೃತ್ಯಗಳನ್ನು ಮಾಡಿದೆನೆಂಬ ಹಣೆಪಟ್ಟಿಯಂತೂ ಬದಲಾಗುವುದಿಲ್ಲ. ನನ್ನ ದುರ್ವಿಧಿಗೆ ಯಾರು ಹೊಣೆ ? ಅಯ್ಯೋ, ಈ ’ದು’ ಕಾರಗಳ ಪಟ್ಟಿಗೆ ಕೊನೆಯೇ ಇಲ್ಲವೇ?
ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.