BREKING NEWS

ಮಂಗಳವಾರ, ಡಿಸೆಂಬರ್ 18, 2018

16-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಎಲ್ಲಿರುವೆ ನೀ ಚಲುವೆ...?


ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್
ತುಮಕೂರು



ವಿಪರ್ಯಾಸ
ನನ್ನ ಕಾವ್ಯಕ್ಕೆ ಸ್ಫೂರ್ತಿಯಾದ ಹುಡುಗಿ
ನನ್ನ ಬಾಳಿಗೆ ವರವಾಗಲಿಲ್ಲ,
ನನ್ನ ಹಾಡಿಗೆ ದನಿಗೂಡಿಸಿದ ಬೆಡಗಿ
ಕೈಗೆ ಸಿಗುವ ನಕ್ಷತ್ರವಾಗಲಿಲ್ಲ...
ಅವಳ ನಗುವಿನಲ್ಲೇ ಬರೆಸಿದಳು ನೂರಾರು ಕವಿತೆ
ಅವಳ ಪ್ರೀತಿಯ ನೋಟಕ್ಕೆ ಇದೆಯೇ ಸರಿಯಾದ ಅಳತೆ,
ಅವಳ ಮಾತಿನಲ್ಲಿದೆ ನೂರಾರು ಕವಿತೆ ಕವನಗಳ ಸಿಂಚನ
ಅರ್ಧ ಪಡೆಯಿತು ಇನ್ನರ್ಧ ಪಡೆಯಲು ಸೋತಿತು ಈ ಮನ...
ಜೀವನದಲ್ಲಿ ಏನೂ ಮಾಡಲಾಗದು ಎಂದು ಕುಳಿತವನಿಗೆ
ಕವಿ ಹೃದಯ ತುಂಬಿದಳು ಆದರೆ ಹೃದಯ ತುಂಬಲಿಲ್ಲ,
ಅವಳಾಗಿದ್ದಳು ಮೈಸೂರಿನ ಬಿಳಿಯ ಮಲ್ಲಿಗೆ
ಆದರೆ ಆ ಮಲ್ಲಿಗೆ ಒಲಿಯಲಿಲ್ಲ ಅರೆಯೂರಿನ ಈ ಕವಿಗೆ...


-ಅರೆಯೂರು ಶ್ರೀವೈದ್ಯಸುತ
ಅರೆಯೂರು ವೈದ್ಯನಾಥಪುರ






ಭಾನುವಾರ, ಡಿಸೆಂಬರ್ 9, 2018

9-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು





ಸಂಜೆಯ ಸೂರ್ಯ


ಮುಳುಗುತಿರುವ ಸೂರ್ಯ, ಮತ್ತೆ ಎದ್ದು ಬರುವ,
ಇಂದು ಸಂಜೆ ಕತ್ತಲಾದರು, ನಾಳೆ ಹೊಂಗಿರಣ ತರುವ…
ನಡೆಯುವ ಪಯಣದಲಿ, ಎಲ್ಲೆಲ್ಲಿಯೂ ಜೊತೆಯಲಿರುವ,
ಸುಖ, ದುಃಖ ಎಲ್ಲವನು ಒಂದೆ ಪ್ರಕಾಶದಿ ಸಮನಾಗಿ ತೋರುವ…
ದೂರಾತಿ ದೂರದಲಿ 
ಅಂಬರ ದಿಗಂತಗಳು 
ಕೂಡುವೆಡೆಯಲ್ಲಿ ಸಾಗರ 
ಭುವಿಯ ಸಂಗಮದಲ್ಲಿ 
ಮೂಡಿರುವ 
ಬೆಳ್ಳಿ ಕಡಲಂಚು 
ನೀಲಿ ಬಟ್ಟಲನು 
ಬೋರಲಿಟ್ಟಂತೆ
ಅವ್ಯಕ್ತ ಅನಂತ ದಿಗಂತ
ಪಡುವಣದ ದಿಶೆಗೆ 
ಸರಿದ ನೇಸರ
ಕೆಂಪಾದ ರಂಗಾದ 
ಸುವರ್ಣ ವರ್ಣದಳೆದ 
ದಿನಕರನ ವಿಧ ವಿಧದ 
ರೂಪಗಳ ಅನಾವರಣ 
ಸಂಜೆಯ ಸೂರ್ಯ 
ಬೋರಲಾಗಿಟ್ಟ ಕುಂಭ
ಗಗನದಂಗಣದಲ್ಲಿ 
ತಿರುಗುವ ಬುಗುರಿ 
ಅಂಡಾಕಾರ
ಸಣ್ಣಾತಿ ಸಣ್ಣ ಗೆರೆಯಾಗಿ 
ಕಡಲಲ್ಲಿ ಲೀನ
ಗಗನದ ತುಂಬೆಲ್ಲ 
ಆವರಿಸಿದೆ  
ಬಂಗಾರ ಬಣ್ಣದ ಛಾಯೆ
ಮೋಡಗಳ ಅಂಚಿಗೆ 
ಸುವರ್ಣ ರೇಖೆ
ಸೂರ್ಯಬಿಂಬ ಕಣ್ಮರೆಯಾಗಿ 
ಊದು ಬಣ್ಣದ ಛಾಯೆ 
ನೀಲ ವರ್ಣದ ಮಬ್ಬು 
ಮಬ್ಬಾದ ಅವಕುಂಠನ 
ದೂರದ ಬಾನಿನಲಿ 
ಚುಕ್ಕಿಗಳು ಅರಳಿ 
ನಿಶೆಯು ಆವರಿಸಿದಳು 
ಜಗದ ತುಂಬ
ಮೂಕ ವಿಸ್ಮಿತನಿಲ್ಲಿ 
ಭಾವುಕ ನೋಡುಗ 
ದೇವನ ವಿಸ್ಮಯ ಸೃಷ್ಟಿಗೆ

-ಅರೆಯೂರು ಚಿ.ಸುರೇಶ್
ತುಮಕೂರು



ಸೂರ್ಯಾಸ್ತ
Imageಪಡುವಣ  ಬಾನಲಿ  ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ
ಕಾದೊಡಲಿನ ಕಾತುರಕೆ  ಉಣಿಸಿರೆ, ಎಲೆ ಮೇಘ
ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ
ಬರಡು ರೆಂಬೆ  ಕೊಂಬೆಯಲಿ ಹರಡಲಿ  ಕೊರಳ ರವ

ಕಪ್ಪಿನಲ್ಲಿ  ಅಚ್ಚಾಗಿಹ  ಹಚ್ಚ ಹಸಿರು
ಒಣಮೈಯ  ಕಾಷ್ಟದಲು ಬಸಿರಾಗಲು ಬಿಸಿಯುಸಿರು
ಅಸ್ತಮದ ಕಣ್ಣಂಚಿನಲಿ ಒಪ್ಪಿಗೆಯ  ಶುಭ
ಬೆಳಗಾಗುವ ಮುನ್ನ, ಹೊಸತಾಗಲು ಭವ!

ಕರೆಯುಲಿಯ ಬಟ್ಟಲ ಮೇಲ್ಚಾಚಿ ನೀಡಿ
ಮುಳುಗುತಿಹ ಸೂರ್ಯನಿಗೆ ವಿದಾಯ ಹಾಡಿ
ಧರೆಯಾಗಿ ತಟಸ್ಥ ಚಿತ್ರ, ಕೋಡಿ
ಹರಿಸಿದೆ ನಸುಗೆಂಪು, ಬಾನ ವೈಚಿತ್ರ್ಯ !

ಸಂಜೆಗೆಂಪು  ತುಂಬಲು ಬಾನೊಡಲು
ಅಸ್ತಮಿಪ ರವಿಗೆ ಕಾಡು, ನಾಡಾದರೇನು
ಮೂಡಿದರು ಇರುಳು, ರವಿ  ಕಾಣದ್ದೇನು?
ಕಣ್ತೆರೆದಿದ್ದರು, ದಿಗಂತದಲಿ  ಮರೆಯಾಗುವನವನು!

-ಅರೆಯೂರು ಶ್ರೀವೈದ್ಯಸುತ 
ಅರೆಯೂರು ವೈದ್ಯನಾಥಪುರ




ಭಾನುವಾರ, ಡಿಸೆಂಬರ್ 2, 2018

2-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ




ಆಕ್ರಂದನ

ಅಗ್ನಿಯ ಮುನಿಸಿಗೆ ಬಲಿಯಾಗಿ
ಬದುಕಾಯಿತು ಮೂರಾಬಟ್ಟೆ
ಬದುಕಿನುದ್ದಕ್ಕೂ ಶ್ರಮ ಪಟ್ಟು ಗಳಿಸಿದ
ಆಸ್ತಿ ಪಾಸ್ತಿ ಅಂತಸ್ತು  ಸುಟ್ಟು ಕರಕಲಾಗಿದೆ 
ನಾನೂ ಕೂಡಾ ಒಬ್ಬ ನಿರ್ಗತಿಕಳಾದೆ

ತುಳಿದ ಹಾದಿ ಸುಗಮವೆಂದು ಎಣಿಸಿತಲ್ಲಿ ಜೀವ
ನೊಗವೇರಿದ ಕುದುರೆಯಂತೆ ಕತ೯ವ್ಯದ ಬೆನ್ನು ಹತ್ತಿ
ಆಸೆ ಹೊತ್ತು ಉರಿಯಿತಲ್ಲಿ ಕಣ್ಣು ಕುರುಡಾಗಿ
ಸಂಪ್ರದಾಯದ ಕುತ್ತಿಗೆಗೆ ನೇತು ಬಿದ್ದು.

ಗಟ್ಟಿಯಾಗಿ ಚೀರಿದೆ ಮನ ಬಹು ದಿನಗಳ ಕನಸಿಗೆ
ಇಷ್ಟವಾದಂತಿಲ್ಲವಲ್ಲ ಹೊಸತು ಬೆಂಡೋಲೆ
ಗರಿ ಬಿಚ್ಚಿ ತಾ ಹಾರಲಿಲ್ಲ ಅಷ್ಟ ದಿಕ್ಕಿನೆಡೆಗೆ
ಕರುಳು ಮಮ್ಮಲ ಮರುಗಿ ಜೀವ ಕುಗ್ಗಿತಲ್ಲಿ.
ಹಾಹಾಕಾರದ ಪ್ರತಿಧ್ವನಿ
ಜನರ ಬಾಯಿ ಬಾಯಿಗಳಲ್ಲಿ ಹರಿದಾಡುವ
ಅವರೆಲ್ಲ ಪರಿತಪಿಸಿ ಕಣ್ಣೀರಿಡುವ
ಕೆಲಸ ಕಾರ್ಯ ಬಿಟ್ಟು
ನನ್ನ ರಕ್ತದೋಕುಳಿಯಲ್ಲಿ ತಮ್ಮ ಚಿತ್ರ ಬರೆವ
ಸಿಕ್ಕಿದ್ದೇ ಅವಕಾಶವೆಂದು ಜೈ ಜೈಕಾರ ಹಾಕುವ
ಮುಖವಾಡ ಧರಿಸಿ ಅಟ್ಟಹಾಸದಿ ಮೆರೆವ
ಸನ್ನಿವೇಶ ನನ್ನ ಕಾಲಡಿಯಲ್ಲಿ ತಂದಿಡಬೇಡ


-ಅರೆಯೂರು ಚಿ.ಸುರೇಶ್ ತುಮಕೂರು