ಗುರುವಾರ, ಡಿಸೆಂಬರ್ 9, 2010

ಅಮರ ಪ್ರೇಮದ ಕಥೆ.

ಇದು, ಅಮರ ಪ್ರೇಮದ ಕಥೆ. ಮಧುರ ಪ್ರೇಮದ ಕಥೆ. ಮರೆಯಲಾಗದ ಕಥೆ ಮತ್ತು ಮರೆಯಬಾರದಂಥ
ಕಥೆ. `ಪ್ರೀತಿ' ಎಂಬ ಎರಡಕ್ಷರಕ್ಕೆ ಇರುವ ತಾಕತ್ತು ಎಂಥದೆಂಬುದಕ್ಕೆ ಸಾಕ್ಷಿಯಾಗುವಂಥ
ಕಥೆ.
ನಮ್ಮ ಕಥಾನಾಯಕಿ, ಒಂದಿಡೀ ತಲೆಮಾರಿಗೇ ಆದರ್ಶವಾಗುವಂಥವಳು. ಅವಳ ಹೆಸರು ರೀನೀ ಕ್ಲೈನ್. ಥೇಟ್ ಅಪ್ಸರೆಯಂತಿರುವ ಆಕೆ, ತನ್ನ ಬಹುಕಾಲದ ಗೆಳೆಯ ಟೈ ಜೀಗೆಲ್‌ನನ್ನು
ಮದುವೆಯಾಗಿದ್ದಾಳೆ. ಅರೆ, ಪ್ರಿಯತಮನನ್ನು ಮದುವೆಯಾದರೆ, ಅದರಲ್ಲಿ ವಿಶೇಷವೇನು ಬಂತು
ಎಂದಿರಾ? ಕೇಳಿ, ವಿಶೇಷ ಇರುವುದೇ ಅಲ್ಲಿ. ಏನೆಂದರೆ, ಟೈ ಜೀಗೆಲ್‌ಗೆ ಒಂದು
ಕಣ್ಣಿಲ್ಲ. ಒಂದು ಕೈ ಇಲ್ಲ. ಎರಡೂ ಕಿವಿಗಳಿಲ್ಲ. ಮೂಗು, ಇರಬೇಕಾದ ಸ್ಥಿತಿಯಲ್ಲಿಲ್ಲ.
ಹಲ್ಲುಗಳಿಗೆ ಒಂದು ಆಕಾರವಿಲ್ಲ. ತಲೆಯಲ್ಲಿ ಕೂದಲೂ ಇಲ್ಲ. ಹತ್ತು ವರ್ಷಗಳ ನಂತರ
ಜೇಗೆಲ್ ಬದುಕಿರುತ್ತಾನಾ ಎಂಬ ವಿಷಯವಾಗಿ ಯಾವ ಡಾಕ್ಟರೂ ಗ್ಯಾರಂಟಿ ಕೊಡುತ್ತಿಲ್ಲ.
ಇದೆಲ್ಲ ಗೊತ್ತಿದ್ದರೂ, ನಂಗೇ ಅವನೇ ಬೇಕು ಎಂದು ರೀನೀ ಕ್ಲೈನ್ ಪಟ್ಟು
ಹಿಡಿದಿದ್ದಾಳೆ. ಅವನನ್ನು ದಕ್ಕಿಸಿಕೊಂಡಿದ್ದಾಳೆ ಮತ್ತು ನೂರಾರು ಜನರ ಸಮ್ಮುಖದಲ್ಲಿ
ಅವನನ್ನು ಮದುವೆಯಾಗಿದ್ದಾಳೆ.

ನಿಜ ಹೇಳಬೇಕೆಂದರೆ, ಒಂದು ಕಾಲದಲ್ಲಿ ರೀನೀ ಕ್ಲೈನ್‌ಗಿಂತ ನಾಲ್ಕು ಪಟ್ಟು
ಚೆಂದಕ್ಕಿದ್ದವನು ಟೈ ಜೀಗೆಲ್. ಅವನ ಕಟ್ಟುಮಸ್ತಾಗಿದ್ದ `ಬಾಡಿ' ನೋಡಿಯೇ ನಾನು ಮೊದಲ
ನೋಟದಲ್ಲೇ ಕ್ಲೀನ್‌ಬೋಲ್ಡ್ ಆಗಿಬಿಟ್ಟೆ ಎಂದವಳು ರೀನಿ. ಹಾಗೆ, ಸುರಸುಂದರಾಂಗನಂತಿದ್ದ
ಟೈ ಜೀಗೆಲ್, ಕೈ ಇಲ್ಲದ, ಕಿವಿಯಿಲ್ಲದ, ಕೆನ್ನೆಯ ನೈಸ್‌ನೈಸ್ ಎಂಬಂಥ ಭಾಗವೂ ಇಲ್ಲದ,
ಮೂಗೇ ಇಲ್ಲದ ಕುರೂಪಿಯಾದದ್ದು ಏಕೆ ಮತ್ತು ಹೇಗೆ? ಇಂಥ ಕುರೂಪಿಯನ್ನೂ ಮದುವೆಯಾಗಲು
ರೀನೀ ಕ್ಲೈನ್‌ಗಿದ್ದ ಕಾರಣವಾದರೂ ಏನು? ಇಂಥ ಕುತೂಹಲದ ಪ್ರಶ್ನೆಗೆ ಉತ್ತರವಾಗಿ
ಬಿಚ್ಚಿ ಕೊಳ್ಳುವುದೇ ಜೀಗೆಲ್-ರೀನೀಯ ಅಮರ ಪ್ರೇಮದ ಕಥೆ.

***
ಅಮೆರಿಕದ ನೌಕಾಪಡೆಯಲ್ಲಿ ಸಾರ್ಜೆಂಟ್ ಆಗಿದ್ದವನು ಟೈ ಜೀಗೆಲ್. ಹೇಳಿ ಕೇಳಿ ಮಿಲಿಟರಿ
ಅಸಾಮಿಯಲ್ಲವೆ? ಹುಡುಗ ಕಟ್ಟುಮಸ್ತಾಗಿದ್ದ. 21ನೇ ವಯಸ್ಸಿಗೇ ಸಾರ್ಜೆಂಟ್
ಪದವಿಗೇರಿದ್ದರೂ ಅಹಮಿಕೆಯಿಂದ ದೂರವೇ ಉಳಿದಿದ್ದ. ಟೂ ಸಿಂಪಲ್ ಎಂಬಂತೆ
ಬದುಕುತ್ತಿದ್ದ. ಈ ಸರಳತೆಯೇ ರೇನೀ ಕ್ಲೈನ್‌ಳನ್ನು ಅವನ ಹತ್ತಿರ ತಂದಿತು. ಅವಳಾದರೂ
ದೂರದವಳಲ್ಲ. ಅವನದೇ ಸ್ಕೂಲಿನಲ್ಲಿ ಓದಿದವಳು. ಅವನಿಗಿಂತ ಮೂರು ವರ್ಷ ಚಿಕ್ಕವಳು.
ಒಂದು ಸಂತೋಷವೆಂದರೆ, ಈ ಜೋಡಿಯ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿಲ್ಲ.
ಅಂತಸ್ತುಗಳ ಅಂತರ ಅಡ್ಡಬರಲಿಲ್ಲ. ಖಳನಾಯಕರ ಕಾಟವೂ ಇರಲಿಲ್ಲ.

ಈ ಕಾರಣದಿಂದಲೇ ನಾವುಂಟು, ಮೂರು ಲೋಕವುಂಟು ಎಂದು ಮೆರೆದಾಡಿದರು ಜೀಗೆಲ್-ರೀನೀ.
ಹೀಗಿದ್ದಾಗಲೇ ರೀನೀಯ ತಂದೆ ಅಪಘಾತವೊಂದರಲ್ಲಿ ಸತ್ತುಹೋದ. ಆ ನಂತರದಲ್ಲಿ ಗೆಳತಿಯ
ಬಗ್ಗೆ ಜೀಗೆಲ್ ಅದೆಷ್ಟು ಕಾಳಜಿ ತಗೊಂಡನೆಂದರೆ -ಏಕಕಾಲಕ್ಕೆ ಅವಳಿಗೆ ಫ್ರೆಂಡ್,
ಲವರ್, ಫಿಲಾಸಫರ್, ಫಾದರ್, ಗೈಡ್.... ಹೀಗೆ ಎಲ್ಲವೂ ಆಗಿಬಿಟ್ಟ. ತಂದೆಯ ನೆನಪಲ್ಲಿ
ಅವಳು ಡಿಪ್ರೆಷನ್‌ಗೆ ಈಡಾಗಲಿಕ್ಕೆ, ಅಪ್ಪನನ್ನು ನೆನಪು ಮಾಡಿಕೊಂಡು ಕಂಬನಿ
ಸುರಿಸುವುದಕ್ಕೆ ಈತ ಅವಕಾಶವನ್ನೇ ಕೊಡಲಿಲ್ಲ. ಅಷ್ಟೊಂದು ಮುತುವರ್ಜಿಯಿಂದ ನೋಡಿಕೊಂಡ.
ಹೀಗಿದ್ದಾಗಲೇ ಅಮೆರಿಕಾ-ಇರಾಕ್ ಮಧ್ಯೆ ಯುದ್ಧ ಶುರುವಾಯಿತು. ಈತ ನಿಂತ ನಿಲುವಲ್ಲಿಯೆ
ಯುದ್ಧಕ್ಕೆ ಹೊರಟು ನಿಂತ. ಹೋಗೋನು ಹೋಗ್ತಾ ಇದೀಯ. ಅದಕ್ಕಿಂತ ಮುಂಚೆ ನನ್ನನ್ನು
ಮದುವೆಯಾಗಿಬಿಡು. ನಾಲ್ಕು ಜನ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿ. ಅವರೆಲ್ಲರ ಮುಂದೆ ಇವಳೇ
ನನ್ನ ಹೆಂಡ್ತಿ ಎಂದು ಹೇಳಿ ಹೋಗಿಬಿಡು ಎಂದು ರೀನೀ ದುಂಬಾಲು ಬಿದ್ದಳು. ಹೀಗೆಂದಾಗ
ಅವಳಿಗೆ 19 ವರ್ಷವಾಗಿತ್ತು. ಜೀಗೆಲ್‌ಗೆ 21.

ಆದರೆ, ರೀನಿಯ ಆಹ್ವಾನವನ್ನು ನಯವಾಗಿ ತಳ್ಳಿಹಾಕಿದ ಜೀಗೆಲ್ ಹೇಳಿದನಂತೆ; `ಅಂಥ ಅವಸರ
ಏನಿದೆ? ಯುದ್ಧ ಬೇಗ ಮುಗಿಯುತ್ತೆ, ರಜೆಗೆ ಬರ್‍ತೀನಲ್ಲ? ಆಗ ಮದುವೆಯಾಗೋಣ. ಸಾವಿರಾರು
ಮಂದಿಯ ಸಮ್ಮುಖದಲ್ಲಿ ದಂಪತಿಯರಾಗೋಣ. ಆಮೇಲೆ ನಮ್ಮಿಷ್ಟದ ತಾಣಕ್ಕೆ ಹನಿಮೂನ್‌ಗೆ
ಹೋಗೋಣ...' ಇಷ್ಟು ಹೇಳಿದವನೇ ಕಡಗದಂತಿದ್ದ ಒಂದು ದೊಡ್ಡ ರಿಂಗ್ ತಂದು ರೀನಿಯ
ಮೊಣಕಾಲಿಗೆ ಹಾಕಿ ಹೇಳಿದನಂತೆ: `ನಿಂಗೇ ಗೊತ್ತಲ್ಲ? ನಮ್ದು ಸ್ಪೆಷಲ್ ಲವ್, ಅದೇ
ಕಾರಣಕ್ಕೆ ನಿನ್ನ ಕಾಲಿಗೆ ರಿಂಗ್ ಹಾಕಿದೀನಿ. ಇವತ್ತು ನಮ್ಮ ಎಂಗೇಜ್‌ಮೆಂಟ್
ಆಗಿಹೋಯ್ತು ಅಂತ ತಿಳ್ಕೊ. ಮುಂದಿನ ವರ್ಷ ಮದುವೆಯಾಗೋಣ. ಈಗ ನಾನು ಹೋಗಿಬರ್‍ತೀನಿ.
ಒಂದು ಬೆಸ್ಟ್ ಆಫ್ ಲಕ್ ಹೇಳಿ ಕಳಿಸು...' ಇಷ್ಟು ಹೇಳಿ, ಜೀಗೆಲ್ ಯುದ್ಧಭೂಮಿಗೆ
ಹೊರಟೇಹೋದ. ಅವತ್ತು ಆಗಸ್ಟ್ 13, 2003. ಅದು, ರೀನೀಯ ಹುಟ್ಟುಹಬ್ಬದ ದಿನ.

ಆನಂತರದಲ್ಲಿ ಇರಾಕ್‌ನ ಯುದ್ಧಭೂಮಿಯಿಂದ ಅಮೆರಿಕದಲ್ಲಿದ್ದ ಅಮ್ಮನ ಮನೆಗೆ
ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಜೀಗೆಲ್. ಆಗೆಲ್ಲ ಈ ಬೆಡಗಿ ರೀನೀ ತಾನೂ ಅವನ
ಮನೆಗೆ ಹೋಗಿಬಿಡುತ್ತಿದ್ದಳು. ತಾನೂ ಒಂದಷ್ಟು ಮಾತಾಡುತ್ತಿದ್ದಳು. ಜೋಕು ಹೊಡೆದು
ಗೆಳೆಯನನ್ನು ನಗಿಸುತ್ತಿದ್ದಳು. ಏನೋ ಸುಳ್ಳು ಹೇಳಿ ಹೆದರಿಸುತ್ತಿದ್ದಳು. ಅಲ್ಲಿಂದ
ಯಾವಾಗ ಬರ್‍ತೀಯ? ನಂಗೆ ಏನು ತರ್‍ತೀಯ ಎಂದೆಲ್ಲ ವಿಚಾರಿಸಿಕೊಂಡು, ಭಾವಿ
ಅತ್ತೆಯೊಂದಿಗೆ ಒಂದಿಷ್ಟು ಹರಟಿ ಎದ್ದು ಬರುತ್ತಿದ್ದಳು. ಈ ವೇಳೆಗೆ, ಜೀಗೆಲ್
ಅಮೆರಿಕಕ್ಕೆ ಬರುವ ದಿನ ಯಾವುದೆಂದು ಅವಳಿಗೆ ತಿಳಿದುಹೋಗಿತ್ತು. ಆತ ತಾಯ್ನಾಡಿಗೆ ಬಂದ
ಹದಿನೈದನೇ ದಿನವೇ ಮದುವೆಯಾಗುವುದೆಂದು ಆಕೆ ನಿಶ್ಚಯಿಸಿದ್ದಳು. ಇದಕ್ಕಾಗಿ ಸಕಲ
ಸಿದ್ಧತೆಯಲ್ಲಿ ತೊಡಗಿದ್ದಳು. ಹೀಗಿದ್ದಾಗಲೇ,ಜೀಗೆಲ್‌ನ ಆಗಮನಕ್ಕೆ ಇನ್ನೂ ಎರಡು
ತಿಂಗಳು ಬಾಕಿಯಿದ್ದಾಗಲೇ, ಅದೊಂದು ಬೆಳಗ್ಗೆ ಜೀಗೆಲ್‌ನ ಮನೆಯಿಂದ ಫೋನ್ ಬಂತು:
`ತಕ್ಷಣವೇ ಮನೆಗೆ ಬಂದು ಹೋಗು' ಎಂಬುದು ಫೋನ್ ಕರೆಯ ಸಾರಾಂಶ.

ಓಹ್, ಯುದ್ಧ ಬೇಗ ಮುಗಿದಿರಬೇಕು. ಗೆದ್ದ ಖುಷಿ ದೊಡ್ಡದಿದೆ. ಹಾಗಾಗಿ ಜೀಗೆಲ್ ಬೇಗ
ಬಂದಿದಾನೆ ಅನ್ಸುತ್ತೆ. ನನಗೆ ಸರ್‌ಫ್ರೈಜ್ ಕೊಡಲಿಕ್ಕೆಂದೇ ಬೇರೆಯವರಿಂದ ಫೋನ್
ಮಾಡಿಸಿದ್ದಾನೆ ಕಳ್ಳ... ಎಂದುಕೊಂಡು ದೊಡ್ಡ ಸಂಭ್ರಮದಿಂದಲೇ ಭಾವೀ ಗಂಡನ ಮನೆಗೆ
ಹೋದಳು ರೀನಿ. ಅಲ್ಲಿ ಸ್ಮಶಾನ ಮೌನವಿತ್ತು. ಏನಾಯ್ತೆಂದು ಈಕೆ ಕೇಳುವುದರೊಳಗೇ,
ಇವಳನ್ನು ಕಂಡದ್ದೇ ಜೀಗೆಲ್‌ನ ಮನೆಮಂದಿ ಜೋರಾಗಿ ಅತ್ತರು. ಈ ಮಧ್ಯೆಯೇ ಒಬ್ಬರು
ಸುದ್ದಿ ಹೇಳಿದರು. ಇರಾಕ್‌ನ ಆತ್ಮಹತ್ಯಾ ದಳದ ಉಗ್ರರು ಜೀಗೆಲ್‌ನ ತಂಡದವರ ಮೇಲೆ
ಬಾಂಬ್ ಎಸೆದಿದ್ದಾರೆ. ಈ ದುರಂತದಲ್ಲಿ ಜೀಗೆಲ್‌ಗೆ ತುಂಬಾ ಪೆಟ್ಟು ಬಿದ್ದಿದೆಯಂತೆ.
ಬದುಕೋದು ಕಷ್ಟ ಎಂದು ಡಾಕ್ಟರೇ ಹೇಳಿದ್ದಾರಂತೆ. ಅವನೀಗ ಸ್ಯಾನ್ ಆಂಟೋನಿಯೋದ ಮಿಲಿಟರಿ
ಆಸ್ಪತ್ರೇಲಿ ಇದಾನಂತೆ... ಮುಂದಿನದೇನನ್ನೂ ಕೇಳಿಸಿಕೊಳ್ಳುವ ತಾಳ್ಮೆ ರೀನೀಗೆ
ಇರಲಿಲ್ಲ. ಕಣ್ಣೀರು ಹಾಕಲಿಕ್ಕೆ ಇದು ಸಮಯವಲ್ಲ ಎಂದು ನಿರ್ಧರಿಸಿದವಳೇ ಚಿಕ್ಕದೊಂದು
ಲಗೇಜು ಜತೆ ಮಾಡಿಕೊಂಡು ಸ್ಯಾನ್ ಆಂಟೋನಿಯಾದ ಮಿಲಿಟರಿ ಆಸ್ಪತ್ರೆಗೆ ಬಂದೇಬಿಟ್ಟಳು.

ಅವಳು ನೀಡಿದ ವಿವರ ಗಮನಿಸಿದ ವೈದ್ಯರು- `ಈ ಪೇಷಂಟ್ ಐಸಿಯುನಲ್ಲಿ ಇದ್ದಾನೆ' ಎಂದರು.
ಉಸಿರು ಬಿಗಿಹಿಡಿದು ವೈದ್ಯರೊಂದಿಗೆ ಹೆಜ್ಜೆಹಾಕಿದ ರೀನೀಗೆ ಎದುರಾದದ್ದು -ಮೈ ಪೂರಾ
ಬ್ಯಾಂಡೇಜು ಮೆತ್ತಿಕೊಂಡಿದ್ದ ಒಂದು ದೇಹ. ಅದನ್ನು ಕಂಡು ರೀನೀ ಬೆರಗಿನಿಂದ
ಹೇಳಿದಳಂತೆ; ಡಾಕ್ಟರ್, ನಾನು ಕೇಳಿದ್ದು ಸಾರ್ಜೆಂಟ್ ಟೈ ಜೀಗೆಲ್ ಅವರನ್ನು. ನೀವು
ಇದ್ಯಾರೋ ಬೇರೆ ಆಸಾಮಿಯನ್ನು ತೋರಿಸ್ತಾ ಇದೀರ. ಅವನು ಹೀಗಿರಲಿಲ್ಲ. ಟಾಲ್, ಸ್ವೀಟ್
ಅಂಡ್ ಹ್ಯಾಂಡ್‌ಸಮ್. ಹಾಗಿದ್ದ ನನ್ನ ಹುಡುಗ. ಅವನನ್ನು ತೋರಿಸಿ ಪ್ಲೀಸ್...'
ಡಾಕ್ಟರು ಮಾತಾಡದೆ ಸುಮ್ಮನೆ ನಿಂತರು.

ಅಷ್ಟೆ. ಪರಮ ವಿಕಾರವಾಗಿದ್ದ ಆ ದೇಹದ ಒಡೆಯನೇ ಜೀಗೆಲ್ ಎಂದು ರೀನೀಗೆ
ಅರ್ಥವಾಗಿಹೋಯಿತು. ಆತನಿಗೆ ಆಗಿರುವ ಗಾಯದ ಪೆಟ್ಟಿನ ತೀವ್ರತೆ ಎಂಥದೆಂದು ವೈದ್ಯರು
ನಿಧಾನವಾಗಿ ವಿವರಿಸಿದರು. ನಂತರ ನಿರ್ಧಾರದ ಧ್ವನಿಯಲ್ಲಿ ಹೇಳಿದರು. `ಬಾಂಬ್ ಸೋಟದ
ತೀವ್ರತೆಗೆ ಜೀಗೆಲ್‌ನ ಎಡಭುಜದ ನರ-ಮೂಳೆಗಳೆಲ್ಲ ನುಜ್ಜುಗುಜ್ಜಾಗಿವೆ. ಹೀಗಾಗಿ ಅವನ
ಎಡಗೈನ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಿದೀವಿ. ಬಲಗೈನಿಂದ ಮೂರು ಬೆರಳುಗಳೇ
ಹಾರಿಹೋಗಿವೆ. ತಲೆಯ ಎಡಭಾಗಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಎರಡೂ ಕಿವಿಗಳು ತುಂಡಾಗಿ
ಬಿದ್ದೇ ಹೋಗಿವೆ. ಒಂದು ಕಣ್ಣೂ ಹೋಗಿದೆ. ದವಡೆಯ ಹಲ್ಲುಗಳು ಉದುರಿವೆ. ಕೆನ್ನೆಯ
ಮಾಂಸಖಂಡಗಳೂ ನುಜ್ಜುಗುಜ್ಜಾಗಿವೆ. ಇಷ್ಟೆಲ್ಲ ಪೆಟ್ಟಾಗಿದ್ರೂ ಜೀಗೆಲ್ ಬದುಕಿದ್ದಾನೆ.
ಈಗ ಅವನಿಗೆ ಮಿದುಳಿನ ಆಪರೇಷನ್ ಮಾಡ್ತೇವೆ. ಒಂದರ್ಥದಲ್ಲಿ ಅವನಿಗೆ ಮುಖವೇ ಇಲ್ಲ ನಿಜ.
ಆದರೆ, ತೊಡೆಸಂದಿನ ಮಾಂಸವನ್ನು ಕತ್ತರಿಸಿ ಅವನ್ನು ತುಟಿಗಳ ಜಾಗಕ್ಕೆ ಸೇರಿಸಿ, ಒಂದು
ಶೇಪ್ ಕೊಡ್ತೇವೆ. ಅಷ್ಟು ಮಾತ್ರ ನಮ್ಮಿಂದ ಸಾಧ್ಯ. ನಮ್ಮ ಪ್ರಯತ್ನವನ್ನು ನಾವು
ಮಾಡ್ತೇವೆ. ಉಳಿದದ್ದು ಜೀಸಸ್‌ಗೆ ಬಿಟ್ಟದ್ದು...'

ಇಷ್ಟು ಹೇಳಿ ವೈದ್ಯರು ಚಿಕಿತ್ಸೆ ಆರಂಭಿಸಿದಾಗ, ಹೊಸದೊಂದು ಪ್ರಶ್ನೆ ರೀನೀಗೆ
ಎದುರಾಯಿತು. ಮಿದುಳು ಆಪರೇಷನ್ ಮಾಡಿದ ನಂತರ ಬೈಛಾನ್ಸ್ ಜೀಗೆಲ್‌ಗೆ ನೆನಪಿನ ಶಕ್ತಿಯೂ
ಕಳೆದುಹೋದರೆ ಗತಿ ಏನು? ಅಥವಾ ತನ್ನ ಈಗಿನ ಸ್ಥಿತಿ ಕಂಡು ಆತನಿಗೆ ಹುಚ್ಚು ಹಿಡಿದರೆ
ಮಾಡುವುದೇನು? ಆಸ್ಪತ್ರೆಯ ವಾರ್ಡ್‌ನಲ್ಲಿ ಕೂತು, ಹೀಗೆ ಯೋಚಿಸಿ ಯೋಚಿಸಿ ಹಣ್ಣಾದಳು
ರೀನೀ. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ. ಜೀಗೆಲ್ ಎಲ್ಲ ಚಿಕಿತ್ಸೆಗೆ ಸಕಾರಾತ್ಮಕವಾಗಿ
ಸ್ಪಂದಿಸಿದ. ಒಂದೂವರೆ ವರ್ಷದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಕೂಡ
ಆದ. ಆದರೆ, ಮನೆಗೆ ಹೊರಟವನಿಗೆ ಒಂದು ಕೈ ಇರಲಿಲ್ಲ. ಕಿವಿಗಳೂ ಇರಲಿಲ್ಲ. ಬಲಗೈನ ಮೂರು
ಬೆರಳಿರಲಿಲ್ಲ. ಒಂದು ಕಣ್ಣಿರಲಿಲ್ಲ. ತಲೆಯಲ್ಲಿ ಕೂದಲಿರಲಿಲ್ಲ. ನಿಲ್ಲಲು ತ್ರಾಣವೂ
ಇರಲಿಲ್ಲ. ಇಂಥ ಸಂದರ್ಭದಲ್ಲಿ ಅವನನ್ನು ಪುಟ್ಟ ಮಗುವಿನಂತೆ ನೋಡಿಕೊಂಡಳು ರೀನೀ.
ಆದರೂ, ತನ್ನ ಗಾಯದ ಕಲೆ ನೋಡಿಕೊಂಡಾಗ ಜೇಗೆಲ್ ಬಿಕ್ಕಳಿಸಿ ಅಳುತ್ತಿದ್ದ.
ಅಂತರ್ಮುಖಿಯಂತೆ ಕೂತುಬಿಡುತ್ತಿದ್ದ. ಅಂಥ ಸಂದರ್ಭದಲ್ಲೆಲ್ಲ ರೀನೀ ಅವನಿಗೆ
ಅಮ್ಮನಾಗುತ್ತಿದ್ದಳು. ತಂದೆಯಂತೆ ಸಮಾಧಾನ ಹೇಳುತ್ತಿದ್ದಳು. ದಿನದ ಹೆಚ್ಚು ಸಮಯವನ್ನು
ಮನೆಯೊಳಗೇ ಕಳೆದರೆ ಅವನಿಗೂ ಡಿಪ್ರೆಶನ್ ಕಾಡಬಹುದು ಅನ್ನಿಸಿದಾಗ ವಾಕಿಂಗ್
ಕರೆದೊಯ್ಯಲು ನಿರ್ಧರಿಸಿದಳು ರೀನೀ. ಆಗ ಜೀಗೆಲ್ ಹೊಸದೊಂದು ಬೇಡಿಕೆ ಇಟ್ಟ. `ನಾನು
ಸನ್‌ಗ್ಲಾಸ್ ಹಾಕ್ಕೊಂಡು ಹೊರಗೆ ಬರ್‍ತೇನೆ..'

`ನಿಜವಾದ ಸಂಕಟ ಎದುರಾದದ್ದೇ ಆಗ. ಏಕೆಂದರೆ ಸನ್‌ಗ್ಲಾಸ್ ಹಾಕಿಕೊಳ್ಳಲು ಅಗತ್ಯವಿದ್ದ
ಕಿವಿಗಳೇ ಜೀಗೆಲ್‌ಗೆ ಇರಲಿಲ್ಲ. ಹಾಗೆಂದು ಹೇಳಿದರೆ ಅವನಿಗೆ ನೋವಾಗುತ್ತದೆ ಎಂದು
ಕಾರಣಕ್ಕೆ, ಅವನಿಗೆ ಏನೂ ಹೇಳಲಿಲ್ಲ ರೀನೀ. ಬದಲಿಗೆ, ಅವನ ತಲೆಯ ಸುತ್ತ ಎಲಾಸ್ಟಿಕ್
ಹಾಕಿ ಸನ್‌ಗ್ಲಾಸ್ ತೊಡಿಸಿಯೇ ಬಿಟ್ಟಳು. ಮುಂದೆ ನಿಧಾನವಾಗಿ ತನ್ನ ಪರಿಸ್ಥಿತಿ
ಹೇಗಿದೆ ದೇಹದ ಯಾವ್ಯಾವ ಭಾಗ ಅಸ್ತಿತ್ವ ಕಳೆದುಕೊಂಡಿದೆ ಎಂದು ಜೀಗೆಲ್‌ಗೆ
ಅರ್ಥವಾಯಿತು. ಆತ ಅದೊಂದು ದಿನ ರೀನೀ ಹಾಗೂ ತನ್ನ ಬಂಧುಗಳನ್ನು ಜತೆಯಲ್ಲಿ
ಕೂರಿಸಿಕೊಂಡು ಹೇಳಿಬಿಟ್ಟ `ಮುಂದೆ, ನನ್ನ ಹಣೇಲಿ ಬರೆದಂತಾಗಲಿ. ನಾನು ಇರುವಷ್ಟು ದಿನ
ಒಂಟಿಯಾಗಿ ಬದುಕ್ತೇನೆ. ರೀನೀ ಬೇರೆ ಯಾರನ್ನಾದ್ರೂ ಮದುವೆಯಾಗಲಿ. ನಾವೇ ಮುಂದೆ ನಿಂತು
ಅವಳ ಮದುವೆ ಮಾಡೋಣ... ಅವಳ ಭವಿಷ್ಯ ಹಾಳಾಗೋದು ಬೇಡ. ನನ್ನಂಥ ಕುರೂಪಿ ಅವಳ
ಜತೆಯಾಗೋದು ಬೇಡ...'

ಜೀಗೆಲ್‌ನ ಮಾತಿಗೆ ಎಲ್ಲರೂ ಒಪ್ಪಿದರು. ಆದರೆ ರೀನೀ ಒಪ್ಪಲಿಲ್ಲ. ಆಕೆ ಜೀಗೆಲ್‌ನ
ಎದುರು ನಿಂತು ಹೀಗೆಂದಳು: `ಹುಚ್ಚಾ, ನಾನು ಪ್ರೀತಿಸಿದ್ದು ನಿನ್ನ ದೇಹವನ್ನಲ್ಲ ಕಣೋ.
ನಿನ್ನ ಮನಸ್ಸನ್ನು ಪ್ರೀತಿಸ್ದೆ ನಾನು. ಈಗ ಇದೀಯ ನೋಡು, ಅದಕ್ಕಿಂತಲೂ
ಕುರೂಪಿಯಾಗಿದ್ದೆ ಆಸ್ಪತ್ರೇಲಿ. ಆಗ ನಿನ್ನ ದೇಹ ಕೊಳೆತು ವಾಸನೆ ಹೊಡೀತಿತ್ತು.
ಅದನ್ನು ನಗುತ್ತಲೇ ಸಹಿಸಿಕೊಂಡೆ. ಅಂಥ ನನಗೆ ನಿನ್ನನ್ನು ಈಗ ನಿನ್ನನ್ನು
ಒಪ್ಪಿಕೊಳ್ಳೋಕೆ ಕಷ್ಟವಾಗ್ತಿಲ್ಲ. ಬದುಕು ಅನ್ನೋದಿದ್ರೆ ಅದು ನಿನ್ನ ಜತೆ ಮಾತ್ರ.
ಮೊದಲು ಪ್ರೀತಿಸ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಈಗ ನಿನ್ನನ್ನು
ಪ್ರೀತಿಸ್ತಿದೀನಿ ಕಣೋ...' ರೀನೀಯ ನಿಷ್ಕಪಟ ಮಾತು ಕೇಳಿ ಜೇಗೆಲ್ ಮಾತೇ ಹೊರಡದೆ
ನಿಂತುಬಿಟ್ಟ. ಅವನ ತಾಯಿ ಧಾವಿಸಿ ಬಂದು ರೀನಿಯನ್ನು ತಬ್ಬಿಕೊಂಡು ಅಳತೊಡಗಿದಳು.
ಜೀಗೆಲ್‌ನ ತಂದೆ ಈ ಹುಡುಗಿಗೆ ನಿಂತಲ್ಲೇ, ಕೈಮುಗಿದು ಕಣ್ಣೊರಸಿಕೊಂಡ.

***
ಮುಂದೆ 2005ರ ಅಕ್ಟೋಬರ್ 7ರಂದು ತುಂಬಾ ಅದ್ಧೂರಿಯಾಗಿ ಜೀಗೆಲ್- ರೀನೀಯ ಮದುವೆ
ನಡೆಯಿತು. ಶುದ್ಧ ಪ್ರೀತಿಗೆ ಎಂದಿಗೂ ಸಾವಿಲ್ಲ, ಮಧುರ ಪ್ರೀತಿ ಎಂದಿಗೂ ಸೋಲಲ್ಲ ಎಂಬ
ಮಾತಿಗೆ ಸಾಕ್ಷಿಯೂ ಆಯಿತು. ಅಂದಹಾಗೆ, ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ.
ಮುಖವಿಲ್ಲದವನನ್ನೂ ಮುದ್ದಿನ ಗಂಡ ಎಂದು ಒಪ್ಪಿಕೊಂಡ ರೀನೀಗೆ ಜೈ ಹೋ.

"ಜಾಹೀರಾತು ಪ್ರೇಮ" ಪತ್ರ !

ನನ್ನ ಪ್ರೀತಿಯ FAIR and LOVELY (ಏಕ್ ಚಾಂದ್ ಕಾ ಟುಕ್‌ಡಾ),
ನೀನೇ ನನ್ನ TVS SCOOTY (first love) ಮತ್ತು ನನ್ನ AIWA (pure passion). ನಾನು ಯಾವತ್ತೂ BPL (believe in the best) ಮತ್ತು ನೀನೇನಿದ್ದರೂ SANSUI (better
than the best).

ನೀನು ನನಗೆ DOMINO'S PIZZA (delivering a million smiles**) ಇದ್ದ ಹಾಗೆ.
ಇದು ನನ್ನಲ್ಲಿ COLGATE ENERGY GEL (seriously fresh) ಭಾವನೆ
ಉಂಟುಮಾಡುತ್ತಿದೆ.

ನೀನು ನನ್ನ ಜೀವನ ಸಂಗಾತಿಯಾಗಬೇಕೆಂದು ನಾನು ಬಯಸುತ್ತೇನೆ, ಆದರೆ ನೀನು KAWASAKI
BAJAJ CALIBER (The unshakable ) ಆಗಿರುವ ನಿನ್ನಪ್ಪನ ಬಗ್ಗೆ ಚಿಂತಿತಳಾಗಿದ್ದೀ
ಅಂತ ನನಗೆ ಗೊತ್ತು. ನನ್ನಪ್ಪನೂ CEAT (born tough ). ಆದರೆ ಚಿಂತಿಸದಿರು, ನಾನು
ಕೂಡ FORD ICON (the josh machine) ಮತ್ತು ನನ್ನ ಮನೆಯ ಇತರ ಮಂದಿ KELVINATORS
(the coolest ones).

ಅವರೆಲ್ಲಾದರೂ ಬೇಡ ಅಂತ ಹೇಳಿದರೆ, ನಾವು ಓಡಿ ಹೋಗಿ ಮದುವೆಯಾಗೋಣ ಮತ್ತು PHILIPS
(let's make things better) ಮಾಡೋಣ. ಆಗವರು MIRINDA (zor ka jhatka dhire
se lage) ಅಂತ ಭಾವಿಸುತ್ತಾರೆ. ಆದರೆ ನಾನು ಯಾವತ್ತೂ COCA COLA (Jo chahe ho
jaye)ದಲ್ಲಿ ನಂಬಿಕೆ ಇಟ್ಟಿರುವವ.

ನಮ್ಮ ಮದುವೆಗೆ SAMSUNG DIGITALL (everyone's invited) ಮತ್ತು ಮದುವೆಯ ಬಳಿಕ
ನಾವಿಬ್ಬರೂ WHIRLPOOL (U and me — the world's best homemakers).
ಯಾವತ್ತಿಗೂ NOKIA (connecting people) ದಂತಿರುವ, ಎಲ್ಲರನ್ನೂ ಪ್ರೀತಿಸುವ ದೇವರ
ಮೇಲೆ ನಂಬಿಕೆ ಇಡು. ಈಗ ಪ್ರೀತಿಯ ಗೀತೆಯನ್ನು HYUNDAI (we are listening).,
ಪ್ರೀತಿ ಎನ್ನುವುದು DAIRY MILK (real taste of life ) ಅಂತ ನೀನು ಯಾವತ್ತೂ
ತಿಳಿದಿರಬೇಕು. ಅಲ್ವೇ?

ಆದ್ದರಿಂದ ಯಾವತ್ತೂ ನನ್ನನ್ನು ಮರೆಯಬೇಡ. Ok bye!

ನಾನೀ ಪತ್ರದಲ್ಲಿ ಬರೆದದ್ದು ಸ್ವಲ್ಪ ಮಾತ್ರ, ಆದ್ರೆ... PEPSI (Yeh dil mange more)!!!

LG (digitally yours)
xyz

ಅಪರಿಚಿತೆಗೊಂದು ಪ್ರೇಮ ಪತ್ರ

ಹಾಯ್ ಅಪರಿಚಿತೆ,

ಇನ್ನೇನು ಕರಿಯಲಿಕ್ಕೆ ಸಾಧ್ಯ,ನಾನು ನಿನ್ನ ಒಂದು ದಿನ ನೋಡಿದ್ದಸ್ಟೇ ,ಅದೂ
ಕ್ಷಣವಸ್ಟೇ.ನಿನಗೆ ಗೊತ್ತಿಲ್ಲ ಬಿಡು, ನಾನಿನ್ನ ನೊಡಿದ್ದು, ನಿನ್ನನ್ನು ನನ್ನಲ್ಲಿ
ತುಂಬಿಕೊಂಡಿದ್ದು.
ಎಂದೋ ಅಪರೂಪಕ್ಕೆ ಸ್ವಲ್ಪ ತಡವಾಗಿಯೇ ಜಾಗಿಂಗ್ ಹೋಗುತ್ತಿದ್ದ ನಾನು, ಅಂದು ಮುಂಜಾನೆಯೇ ಚುಮು ಚುಮು ಚಳಿಯಲ್ಲಿ ಸಣ್ಣದೊಂದು ಮಫ್ಲರ್ ಸುತ್ತಿ ಹೊರಟಿದ್ದೆ.ಈ ಬೆಳಗು
ಅನ್ನೋದು ತುಂಬಾ ಆಶ್ಚರ್ಯ ಮತ್ತು ಸುಂದರ , ಯಾಕೆ ದಿನ ಪೂರ್ತಿ ಹೀಗೇ ಇರಬಾರದು ಅಂಥ
ಯೊಚಿಸ್ತಾ ಓಡುತ್ತಿದ್ದೆ, ಇಬ್ಬನಿಯ ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಕೇಳುತ್ತಾ.
ಇಷ್ಟು ದಿನವೂ ಏನೂ ಕಾಣಿಸದಿದ್ದ ಆ ಮನೆ ಮುಂದೆ ಅವೋತ್ತು ಮೊದಲು ನೀ ಕಂಡಿದ್ದು,
ಮಲ್ಲಿಗೆಯ ಘಮ ಮೂಗಿಗೆ ಅಡರಿದಾಗ ಜೊತೆಗೆ ಕೋಗಿಲೆ ಕಂಠದಿಂದ ಬಂದ ಆ ಹಾಡು ಕೇಳಿದಾಗ...
ಮೂಡಲ ಮನೆಯ

ಮುತ್ತಿನ ನೀರಿನ

ಎರಕವ ಹೊಯ್ದ,ನುಣ್ಣನೇ ಎರಕವ ಹೊಯ್ದ

ಬಾಗಿಲು ತೆರೆದು

ಬೆಳಕು ಹರಿದು

ಜಗವೆಲ್ಲಾ ತೋಯ್ದ,ಹೊಯ್ತೋ ಜಗವೆಲ್ಲಾ ತೋಯ್ದು
ಸೂರ್ಯೋದಯಕ್ಕೆ ಅರಳಲು ಕಾದಿರುವ ಮಲ್ಲಿಗೆಯನ್ನು ಬಿಡಿಸುತ್ತಾ, ಹಾಡನ್ನು ಹೇಳುತ್ತಾ,
ಮಲ್ಲಿಗೆಯಂತೆಯೇ ಇರುವ ನಿನ್ನನ್ನು ಎವೆಯಿಕ್ಕದೇ ನೋಡಿದ್ದೆ ಮತ್ತು ನನ್ನೇ ನಾನು
ಮರೆತಿದ್ದೆ. ನೀನು ಮಾತ್ರ ನನ್ನನ್ನು ಕಿರುಗಣ್ಣಿನಲ್ಲಿಯೂ ನೋಡಲಿಲ್ಲ. ಹಾಡು
ಮುಗಿಯಿತೋ , ಮಲ್ಲಿಗೆ ಮುಗಿಯಿತೋ ನೀನು ಒಳಗೆ ಹೋಗಿದ್ದೆ, ನಿನ್ನ ಬಿಂಬವನ್ನು ನನ್ನ
ಕಣ್ಣಲ್ಲಿ ಬಿಟ್ಟು, ಹೃದಯಕ್ಕೆ ಲಗ್ಗೆಯಿಟ್ಟು, ನಾಳೆ ಮತ್ತೆ ಸಿಗುವೆಯೆಂಬ ನಿರೀಕ್ಷೆಯ
ಹುಟ್ಟಿಸಿ.
ಕೇಳು ಗೆಳತಿ..

ಅಂದಿನಿಂದ ಇಂದಿನವರೆಗೆ ನಾನು ಒಂದು ದಿನವೂ ಜಾಗಿಂಗ್ ತಪ್ಪಿಸಲಿಲ್ಲ. ಆ ಮನೆಯ ಮುಂದೆ
ಹತ್ತು ನಿಮಿಷ ಕಾಯದೇ ಹೋಗುವುದಿಲ್ಲ. ಆದರೆ ಪ್ರತಿದಿನವೂ ನಿರಾಸೆ, ಕಾಣುವುದು
ಕಂಪೋಂಡ್ ಮತ್ತು ಹೂವೇ ಇಲ್ಲದ ಮಲ್ಲಿಗೆ ಬಳ್ಳಿ ಮಾತ್ರ.


ಆದರೆ ನನ್ನ ಹೃದಯ ಹೇಳುತಿದೆ ನೀನು ಸಿಕ್ಕೇ ಸಿಗುತ್ತೀಯ ಎಂದು. ನಮ್ಮ ಮನೆಯ ಎಲ್ಲಾ
ಪಾಟಿನಲ್ಲಿ ಈಗ ಮಲ್ಲಿಗೆ ಬಳ್ಳಿ ಮಾತ್ರ, ದಿನಾ ಅದಕ್ಕೆ ನೀರು ಗೊಬ್ಬರ ಹಾಕಲು
ಮರೆಯುವುದಿಲ್ಲ. ಹೂವು ಬಿಡುವ ಸಮಯ ಸನ್ನಿಹಿತವಾಗಿದೆ ಗೆಳತಿ, ನಿರಾಸೆ ಮಾಡದೇ
ಬರುತ್ತೀಯಲ್ಲಾ?

ನಿನಗೆ ಬೇಕಾದಷ್ಟು ಹೂವು ಕೊಯ್ದುಕೋ, ಎಲ್ಲಾ ಹೂವು ನಿಂದೇ.. ಆದರೆ ಆ ಘಮ, ಆ ಹಾಡು..
ಗಿಡಗಂಟಿಯ ಕೊರಳೊಳಗಿಂದ

ಹಕ್ಕಿಗಳಾ ಹಾಡು, ಹೊರಟಿತು ಹಕ್ಕಿಗಳಾ ಹಾಡು..


ಮತ್ತು ನೀನು, ಇವೆಲ್ಲಾ ನಂದೇ..


ಒಪ್ಪುತ್ತೀಯಲ್ಲಾ?