BREKING NEWS

ಶನಿವಾರ, ಏಪ್ರಿಲ್ 4, 2009

ಕಥೆ: ದುರ್ಯೋಧನನ ಸ್ವಗತ

ಕಥೆ

 ದುರ್ಯೋಧನನ ಸ್ವಗತ

ಸಮಂತಪಂಚಕ ನದೀ ತೀರದಲ್ಲಿ ನಿರ್ಜೀವವಾಗಿ ಬಿದ್ದಿದ್ದಾನೆ ದುರ್ಯೋಧನ. ಹುಟ್ಟಿನಿಂದ ಸಾವಿನವರೆಗೂ ನೆಡೆದಿದ್ದ ದಾಯಾದಿ ಹಗೆತನಕ್ಕೆ ತೆರೆಬಿದ್ದಿದೆ. ತನ್ನ ಗುರುಹಿರಿಯರು, ಬಂಧುಗಳು, ಸಕಲ ಸಹೋದರರೂ, ಪ್ರಿಯಮಿತ್ರ ಹೀಗೆ ಎಲ್ಲರನ್ನೂ ಕಳೆದುಕೊಂಡು ಯುದ್ದದಲ್ಲಿ ಪರಾಜಿತನಾಗಿ, ಸತ್ತು ಬಿದ್ದಿದ್ದಾನೆ. ಆದರೆ ಅವನ ಆತ್ಮ ಮಾತ್ರ ಯಾಕೋ ಏನೋ, ಇನ್ನೂ ಅವನ ಮುಂದೆಯೇ ಕುಳಿತಿಹುದೇ ಹೊರತು ಹೊರಡಲು ಸಿದ್ದವಿಲ್ಲ. ಕುರುಕುಲಕ್ಕೆ ಶಾಪವೆಂಬಂತಾಗಿ, ಕೆಟ್ಟತನಕ್ಕೆ ಉದಾಹರಣೆಯಾಗಿ ಲೋಕತ್ಯಜಿಸಿದವನ ಜೀವನ ವಿಶ್ಲೇಷಣೆ ಮಾಡುವುದಕ್ಕಾಗಿ ಸ್ವಲ್ಪ ಕಾಲ ನಿಂತು ಮುಂದೆ ಹೋಗುವುದಾಗಿ ನಿಶ್ಚಯಿಸಿದೆ. ದೇಹದೊಂದಿಗೆ ಕಲಿತನವೂ ಹೋಗಿದ್ದುದರಿಂದಲೇ ಈ ಅವಲೋಕನ ಮಾಡಿಕೊಳ್ಳುವ ಅವಕಾಶ ದೊರೆತಂತಿದೆ.

***

ಇತಿಹಾಸದ ಪುಟಗಳಲ್ಲಿ, ನನ್ನ ಹೆಸರು ದುಷ್ಟರ ಸಾಲಿನಲ್ಲಿ ಸೇರಿಹೋಗಿದೆ. ಕೆಡುಕಿಗೆ ಉದಾಹರಣೆ ಕೊಡುವ ಸಂದರ್ಭದಲ್ಲಿ ನನ್ನ ಹೆಸರೂ ಬರುವುದರಲ್ಲಿ ಸಂಶಯವಿಲ್ಲ. ನಾನು ತಪ್ಪು ಮಾಡಿದ್ದೇನೆ ನಿಜ ಆದರೆ ಮಾಡಿದ್ದೆಲ್ಲಾ ತಪ್ಪಲ್ಲ. ಇಷ್ಟಕ್ಕೂ ನಾನು ಮಾಡಿದ ತಪ್ಪೇನು? ಮೊದಲೇ ಕಲಿಪುರುಷನನ್ನು ಹೊತ್ತಿದ್ದೆ ನಾನು. ಕಲಿಯ ಅವತಾರಿಯೇ ಆದ ಮೇಲೆ ಕೆಟ್ಟತನವಲ್ಲದೆ ಒಳ್ಳೆಯತನ ಬರಲು ಹೇಗೆ ಸಾಧ್ಯ. ಅದೂ ಅಲ್ಲದೇ, ನಾನು ಕೆಟ್ಟವನಾದ್ದರಿಂದ ತಾನೇ ಆ ಪಾಂಡವರು ಜನರ ಕಣ್ಣಿಗೆ ಒಳ್ಳೆಯವರಾಗಿ ಕಂಡಿದ್ದು?

ಇರಲಿ, ಇಷ್ಟಕ್ಕೂ ನೆಡೆದದ್ದಾದರೂ ಏನು?

ನಾ ಹುಟ್ಟಿದಾಗ ಅಪಶಕುನಗಳು ಕಾಣಿಸಿಕೊಂಡಿತಂತೆ. ಅಂದೇ ಜಗತ್ತಿಗೆ, ದುಷ್ಟನೊಬ್ಬನ ಜನ್ಮವಾಗುತ್ತಿದೆ ಅಂತ ಅರಿವಾಯಿತಂತೆ. ನಾ ಹೇಳುವುದು ಏನೆಂದರೆ, ಕಲಿಯ ಅವತಾರವಾಗುತ್ತಿದೆ ಎಂಬುದಕ್ಕೆ ಹಾಗೆ ನೆಡೆದಿರಬಹುದೋ ಏನೋ ಆದರೆ ದುರ್ಯೋಧನನ ಹುಟ್ಟಿಗಾಗಿ ಖಂಡಿತ ಅಲ್ಲ. ಹುಟ್ಟುತ್ತಲೇ ಯಾರಾದರೂ ದುಷ್ಟರಾಗಿ ಹುಟ್ಟುವರೇ? ಇಷ್ಟಕ್ಕೂ, ಹುಟ್ಟಿದ ಕೂಸಿನ ಮೇಲೆ ಈ ರೀತಿ ಅಪವಾದ ಹೊರಿಸುವುದು ಸರಿಯೇ? ನನಗರಿಯದೇ ನೆಡೆದ ಈ ವೈಚಿತ್ರ್ಯಕ್ಕೆ ನಾನು ಹೊಣೆಯೇ? ಈ ರೀತಿ ಅಪಪ್ರಚಾರ ನೆಡೆದುದ್ದರಿಂದಲೇ, ಇಡೀ ಜೀವನ, ನಾನು ಮಾಡಿದ ಪ್ರತಿ ಕಾರ್ಯವೂ ಎಲ್ಲರಿಗೂ ತಪ್ಪಾಗಿಯೇ ಕಂಡದ್ದು. ಇದೊಂದು ದುರಂತವಲ್ಲದೇ ಮತ್ತೇನು?

ಮತ್ತೊಂದು ವಿಷಯ. ನನ್ನ ಹೆಸರಿನ ಆರಂಭದಲ್ಲೇ ’ದು’ ಕಾರವಿದೆ ಹಾಗಾಗಿ ದುಷ್ಕ್ರುತ್ಯಗಳು ನೆಡೆದವು ಎನ್ನುವ ಜನರಿಗೆ ನಾನು ಕೇಳುವುದು ಏನೆಂದರೆ, ಪಂಡಿತ ಪಾಮರರು ಎನಿಸಿಕೊಂಡವರು ಅಂದು ನನಗೆ ಹೆಸರಿಡುವಾಗ ಈ ಸಣ್ಣ ವಿಷಯ ಯೋಚಿಸಲಿಲ್ಲವೇ? ಅದಲ್ಲದೇ ನನಗೆ ಸುಯೋಧನ ಎಂಬ ಹೆಸರೂ ಇತ್ತಲ್ಲಾ? ಕೇವಲ ಹೆಸರಿನಿಂದ ನಾನು ಕೆಟ್ಟವನಾದೆನೆಂದರೆ ಅದು ನಂಬತಕ್ಕ ಮಾತೇ? ಈ ಆರೋಪಕ್ಕೆ ನಗಲೇ ? ಅಳಲೇ?

ಹುಟ್ಟಿದ ದಿನದಿಂದಲೂ ಇವರು ಪಾಂಡವರು, ಇವರು ಕೌರವರು ಎಂದು ಭೇದ ತೋರಿಸುವ ಬದಲು, ಇವರೆಲ್ಲ ಕುರು ವಂಶದವರು ಎಂದೇ ಬೆಳಸಿದ್ದರೆ, ಇಷ್ಟೆಲ್ಲ ಅನಾಹುತವಾಗುತ್ತಿತ್ತೆ ? ಪಾಂಡವರು ಮಾಡಿದ್ದೆಲ್ಲ ಸರಿ, ಕೌರವರು ಮಾಡಿದ್ದೆಲ್ಲ ತಪ್ಪು ಎಂದು ಪದೇ ಪದೇ ಒಂದಲ್ಲ ಒಂದು ಕಾರಣಕ್ಕೆ ದೂರುತ್ತಿದ್ದರೆ, ಎಷ್ಟು ದಿನ ಸುಮ್ಮನಿರಲು ಸಾಧ್ಯ. ಈ ತಾರತಮ್ಯವೇ, ಮುಂದೆ, ಪಾಂಡವರ ಮೇಲೆ ದ್ವೇಷವಾಗಿ ತಿರುಗಲು ಕಾರಣವಾಯಿತು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ? ಇದಕ್ಕೆ ಕಾರಣರಾರು? ಎಲ್ಲಕ್ಕೂ ಧರ್ಮ ಹೆಸರನ್ನು ಹೇಳಿ ನಮ್ಮದು ತಪ್ಪು ಎಂದೇ ಸಾಧಿಸುವಾಗ, ದಿನ ನಿತ್ಯದ ಅವಮಾನ ಹೊರಗೆ ಬರುವುದಾದರೂ ಹೇಗೆ ?

ಚಿಕ್ಕಂದಿನಲ್ಲಿ, ತಾತ ಭೀಷ್ಮರು ತಮ್ಮ ತೊಡೆಯ ಮೇಲೆ ಅರ್ಜುನನನ್ನು ಕುಳ್ಳರಿಸಿಕೊಂಡು ಕಥೆ ಹೇಳುತ್ತ ಊಟ ಮಾಡಿಸುವುದನ್ನು ಕಂಡು ನನಗೂ ಹಾಗೇ ಕುಳಿತುಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಆದರೆ ಹುಟ್ಟಿನಿಂದಲೇ ಬಂದಿದ್ದ ಅಹಂ ನನ್ನನ್ನು ತಡೆದಿತ್ತು. ತಾತನಾದರೂ ನನ್ನನ್ನು ತಾವೇ ಕರೆಯಬಹುದಿತ್ತಲ್ಲವೇ? ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ಈ ತಾರತಮ್ಯವೇಕೆ?

ಪಾಂಡವರು ತಂದೆ ಇಲ್ಲದ ಮಕ್ಕಳಾದರೂ, ಆಟ-ಪಾಟ ನೋಡಿ ನಲಿವ ತಾಯಿ ಇದ್ದಳು. ಆದರೆ ನಮಗೆ ? ತಂದೆಯು ಹುಟ್ಟು ಕುರುಡರಾದರೆ, ತಾಯಿಯು ಸ್ವಯಂಕೃತ ಕುರುಡು. ಲೋಕವು ಗಾಂಧಾರಿ ಮಾಡಿದ ತ್ಯಾಗವನ್ನು ಹೊಗಳುತ್ತಿದ್ದರೇ ವಿನಹ, ಇನ್ನೊಬ್ಬರ ಅಡಿಯಲ್ಲೇ ಬೆಳೆದ ನಮ್ಮ ಅಳಲು ಯಾರಿಗೂ ಕಾಣಲೇ ಇಲ್ಲವೇ? ತಂದೆ-ತಾಯಿ ಇದ್ದೂ ಅನಾಥರಾಗಿದ್ದೆವು ಎಂದರೆ ಅದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನು?

ಉರಿಯುತ್ತಿದ್ದ ಬೆಂಕಿಯನ್ನು ಶಮನಗೊಳಿಸಲು ಭಗವಂತನು ಪಾಂಡವರಿಗೆ ಒಲಿದರೆ, ಬೆಂಕಿಗೆ ತುಪ್ಪವಾಗಿ ನಮಗೆ ದೊರಕಿದ್ದು ಸೋದರಮಾವ ಶಕುನಿ. ಕರ್ಣಗಳಿಗೆ ದಿವ್ಯಾಮೃತವನ್ನೇ ತುಂಬುತ್ತ ಸರಿ ದಾರಿಗೆ ನೆಡೆಸುವ ನಾವಿಕನು, ಪಾಂಡವರ ಪಾಲಿಗೆ. ಸೂರ್ಯನ ಹುಟ್ಟಿನಿಂದ ಆರಂಭವಾಗಿ ದಿನಪೂರ್ತಿ ಹಾಗೂ ಜೀವನವಿಡೀ ದ್ವೇಷ, ಅಸೂಯೆ ಎಂಬ ಮಂತ್ರಗಳನ್ನೇ ಉಲಿವ ಹಕ್ಕಿ ಶಕುನಿ, ಕೌರವರ ಪಾಲಿಗೆ. ಪ್ರತಿ ಘಳಿಗೆಯೂ ಇಂತಹ ನುಡಿಗಳೇ ಕೇಳುತ್ತಿದ್ದರೆ, ನನ್ನ ಮನದಲ್ಲಿ ಒಳಿತು ಎಂಬುದಕ್ಕೆ ಸ್ಥಾನವೇ ಇಲ್ಲದಂತಾಗುವುದಿಲ್ಲವೇ?

ನಂತರದ ನಮ್ಮ ಜೀವನವನ್ನು ಹೊಕ್ಕು, ತಾರತಮ್ಯವನ್ನು ಮತ್ತಷ್ಟು ಬೆಳೆಸಲು ಕಾರಣರಾದವರು ಆಚಾರ್ಯ ದ್ರೋಣ. ಗುರುಗಳಾಗಿ ಶಿಷ್ಯರ ನಡುವೆ ತಾರತಮ್ಯ ತೋರಿದ್ದು ಸರಿಯೇ? ಪಾಂಡವರೆಂದರೆ ಅವರಿಗೇಕೆ ಅಷ್ಟು ಒಲವು ? ತಮ್ಮ ಶಿಷ್ಯ ಅರ್ಜುನನ ಉನ್ನತಿಗೆ ಅಡ್ಡವಾಗಬಾರದೆಂದು ಪಾಪ ಏಕಲವ್ಯನ ಹೆಬ್ಬರಳನ್ನೇ ಮುರಿದುಕೊಂಡದ್ದು ಸರಿಯೇ? ಅಷ್ಟೊಂದು ಅಂಧ ಮಮತೆಯೇ ಅರ್ಜುನನನ ಮೇಲೆ? ವಿಧಿಯಾಟದ ಇನ್ನೊಂದು ಕೈಗೊಂಬೆ ಈ ಆಚಾರ್ಯರು. ಇರಲಿ ಆಚಾರ್ಯ ನಿಂದನೆ ಮಾಡಲಾರೆ. ಉಪ್ಪುಂಡ ಋಣಕ್ಕೆ ನನ್ನೊಂದಿಗೆ ಕೊನೆ ತನಕ ಇದ್ದವರು.

ಮದುವೆಗೆ ಮುನ್ನ ತಾಯಿಯಾದವಳೆಂಬ ಅಪವಾದಕ್ಕೆ ಗುರಿಯಾಗುವೆನೆಂದು ಹೆದರಿ, ಹೆತ್ತ ಮಗನನ್ನೇ ನದಿಗೆ ನೂಕಿದ ತಾಯಿ ಕುಂತಿಯ ಬಗ್ಗೆ ಏನ ಹೇಳಲಿ? ನಿನ್ನೆದುರಿಗೇ ಲೋಕವು ಅವನನ್ನು ಸೂತಪುತ್ರನೆಂದು ಜರಿಯುತ್ತಿದ್ದರೂ ಸುಮ್ಮನಿದ್ದೆಯಲ್ಲ ತಾಯಿ? ಇದು ಸರಿಯೇ? ಅದು ಹೋಗಲಿ, ನಾನು ಆ ರಾಧೇಯನ ಪರವಾಗಿ ನಿಂತು ಅಂಗ ದೇಶದ ರಾಜನನ್ನಾಗಿ ಮಾಡಿ ಅವನ ಅವಮಾನವನ್ನು ತಡೆಗಟ್ಟಿದಾಗ್ಯೂ ನನ್ನ ಬಗ್ಗೆ ಒಂದು ಒಳ್ಳೆಯ ಮಾತನ್ನೂ ಆಡದೆ ಹೋದೆಯಾ ತಾಯಿ? ಆದರೆ ನಾ ಮಾಡಿದ ಕಾರ್ಯಕ್ಕೆ ಲೋಕ ನನ್ನ ಬಗ್ಗೆ ಆಡಿದ ಮಾತೇನು ಗೊತ್ತೆ? ಅರ್ಜುನನ ವಿರುದ್ದ ಹೋರಾಡಲು ಕರ್ಣನೆಂಬ ಅಸ್ತ್ರವನ್ನು ಕಾಪಾಡಿದೆ ಎಂದು. ಅಂದರೆ, ಅಂದು ಈ ಮಾತನ್ನು ಆಡಿದ ಜನರಿಗೆ, ಕುರುಕ್ಷೇತ್ರ ಯುದ್ದ ನೆಡೆಯುತ್ತದೆ ಎಂದು ಗೊತ್ತಿತ್ತೇ?

ಇಷ್ಟಕ್ಕೂ ಆ ಸಂದರ್ಭದಲ್ಲಿ ಕರ್ಣನ ಪರವಾಗಿ ನಾನೇಕೆ ನಿಂತೆ ಎಂಬುದಕ್ಕೆ ಕಾರಣವಾದರೂ ನಿಮಗೆ ಗೊತ್ತೇ? ದಿನ ನಿತ್ಯ ತಾರತಮ್ಯವೆಂಬ ಬೇಗೆಯಲ್ಲೇ ಬೇಯುತ್ತ, ಒಂದಲ್ಲ ಒಂದು ರೀತಿ ಅವಮಾನಿತನಾಗಿಯೇ ಜೀವನ ಕಳೆಯುತ್ತಿದ್ದ ನನಗೆ, ಕರ್ಣನು ಎಲ್ಲರೆದುರಿಗೆ ಅವಮಾನಿತನಾಗಿ ಪಡುತ್ತಿದ್ದ ನೋವು ಚೆನ್ನಾಗಿ ಅರಿವಾಗಿತ್ತು. ನನ್ನನ್ನಂತೂ ಯಾರೂ ಕೈಹಿಡಿದು ಕಾಪಾಡಲಿಲ್ಲ. ನಾನಾದರೂ ಈ ಪುಣ್ಯ ಕೆಲಸ ಮಾಡಿದಲ್ಲಿ ಸಾಯುವ ಕಾಲಕ್ಕಾದರೂ ಒಳಿತಾಗುವುದೇನೋ ಎಂಬ ಹಂಬಲ.

ಕೃಪಾಚಾರ್ಯರೇ, ಅಂದು ನೀವು ಎಲ್ಲರ ಸಮ್ಮುಖದಲ್ಲಿ ಕರ್ಣನ ಜಾತಿಯ ಬಗ್ಗೆ ಪ್ರಶ್ನೆ ಮಾಡಿ ಬಹಳ ದೊಡ್ಡ ತಪ್ಪು ಮಾಡಿಬಿಟ್ಟಿರಿ. ನಿಮಗೇ ಅರಿವಿಲ್ಲದಂತೆ ಒಂದು ದೊಡ್ಡ ಅನಾಹುತಕ್ಕೆ ನಾಂದಿಯಾಗಿಬಿಟ್ಟಿರಿ. ಮುಂದಿನ ಯುಗದಲ್ಲಿ, ಕಲಿ ತಾಂಡವವಾಡುವ ಆ ಯುಗದಲ್ಲಿ, ನೀವು ಬಿತ್ತಿದ ’ಜಾತಿ’ ಎಂಬ ಬೀಜ ಹೆಮ್ಮರವಾಗಿ ಬೆಳೆದು, ಮನುಷ್ಯರ ನಡುವೆ ವೈಷಮ್ಯ ಬೆಳೆಸುವಲ್ಲಿ ಹಿರಿದಾದ ಪಾತ್ರವಹಿಸುತ್ತದೆ. ಇದು ಸತ್ಯ ! ಇದು ಸತ್ಯ !! ಇದು ಸತ್ಯ !!!

ಇನ್ನು ಧರ್ಮರಾಯನ ಅರಮನೆಯಲ್ಲಿ ನಾನು ಜಾರಿ ಬಿದ್ದ ಪ್ರಸಂಗ. ನನ್ನ ಸುತ್ತಲೂ ಒಂದು ಷಡ್ಯಂತ್ರವನ್ನೇ ರಚಿಸಿದ್ದರೋ ಎನ್ನಿಸುತ್ತಿದೆ ಈಗ. ಕುರುಕುಲದ ಸೊಸೆಯಾಗಿ ತನ್ನ ಹಿರಿಮೆಯನ್ನೇ ಮರೆತು ಮಹಾರಾಜ ದೃತರಾಷ್ಟ್ರ, ಅಂದರೆ, ನನ್ನ ಪೂಜ್ಯ ತಂದೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ, ಮಗನಾದ ನಾನು ಸಿಡಿದೆದ್ದಿದ್ದು ತಪ್ಪೇ? ಕುರುಕುಲದ ಸೊಸೆ ಎಂಬ ಒಂದೇ ಕಾರಣಕ್ಕೆ ನಾನು ಸುಮ್ಮನಿದ್ದಿದ್ದರೆ ನಾನೊಬ್ಬ ಕ್ಷತ್ರಿಯನಾಗಿದ್ದೂ ವ್ಯರ್ಥವಲ್ಲವೇ? ತಮಗಾದ ಅನ್ಯಾಯಕ್ಕೆ ಪಾಂಡವರು ಶಪಥಗಳನ್ನುಗೈದು ಸೇಡು ತೀರಿಸಿಕೊಳ್ಳಬಹುದು, ಆದರೆ ಕೌರವರು ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬೇಕೇ? ಇದು ಯಾವ ನ್ಯಾಯ ?

ಸಭೆಯಲ್ಲಿ ದ್ರೌಪದಿಯನ್ನು ಕರೆಸಿ ಅವಮಾನ ಮಾಡಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ಆದರೆ ದ್ಯೂತದಲ್ಲಿ ಸೋತು ತಲೆಬಾಗಿ ಕುಳಿತವರನ್ನು ಕಂಡು ನನ್ನ ಮನ ಹುಚ್ಚೆದ್ದು ಕುಣಿದು ನಾನೇನು ಮಾಡುತ್ತಿದ್ದೆನೋ ನನಗೇ ಅರಿವಾಗಲಿಲ್ಲ. ನನ್ನ ಇಡೀ ಜೀವನದಲ್ಲಿ ಪಾಂಡವರನ್ನು ಮೀರಿ ನಿಂತ ಮಹಾಸಂತೋಷದ ಘಳಿಗೆಯದು. ತೀರಾ ಸಂತಸದಲ್ಲಿದ್ದಾಗ ನಾವೇನು ಮಾಡುತ್ತೇವೆ ಎಂಬುದು ನಮಗೇ ಅರಿವಾಗುವುದಿಲ್ಲ ಅಲ್ಲವೇ? ಆ ಸಮಯದಲ್ಲಿ, ಭೀಮನು ಗುಡುಗಿದಾಗ, ಥಟ್ಟನೆ ನನ್ನ ಮನ ಮತ್ತೆ ಮೊದಲಿನ ಸ್ಥಿತಿಗೆ ಬಂದಿತು, ನಿಜ. ಆದರೆ ಕಾಲ ಮಿಂಚಿಹೋಗಿತ್ತಲ್ಲ? ಆಳುವ ದೊರೆ ಮಾಡಬಾರದ ಕೆಲಸವನ್ನು ನಾನು ಮಾಡಿದ್ದಕ್ಕೆ ಈಗಲೂ ನನಗೆ ಪಶ್ಚಾತ್ತಾಪವಿದೆ.

ನನಗೆ ರಾಜ್ಯಾಕಾಂಕ್ಷೆ ಇತ್ತೆಂದು ಹೇಳಿದರಲ್ಲಾ ಜನ, ಪಾಂಡವರಿಗೆ ಇರಲಿಲ್ಲವೇ? ಅಧಿಕಾರದ ಆಸೆ ಇಲ್ಲದವನೂ ಒಬ್ಬ ಕ್ಷತ್ರಿಯನೇ? ನನ್ನದು ಉದ್ದಟತನ, ಅಹಂಕಾರ ಎಂದೆಲ್ಲ ಹೇಳುವಾಗ, ನಾಲ್ವರು ಪಾಂಡವರು ಆ ಸರೋವರದ ಬಳಿ ಯಕ್ಷನೊಡನೆ ತೋರಿದ್ದು ಉದ್ದಟತನ, ಅಹಂಕಾರವಲ್ಲವೇ? ಅಣ್ಣ ಧರ್ಮರಾಯನಿಲ್ಲದಿದ್ದಿದ್ದರೆ ಅತಿರಥ-ಮಹಾರಥ ಎನ್ನಿಸಿಕೊಂಡಿದ್ದವರು ಎಲ್ಲಿರುತ್ತಿದ್ದರು? ಧರ್ಮರಾಯನಿಗೆ ಕರ್ಣನ ಬಗ್ಗೆ ಸುಳಿವೇ ನೀಡಿದೆ ಇದ್ದುದೂ ಈ ಕಾರಣಕ್ಕಾಗಿಯೆ. ಕರ್ಣನು ಎಷ್ಟೇ ಆಗಲಿ ನನಗೆ ಪ್ರಿಯನಾದವನು. ಹಿರಿಯಣ್ಣ ಎಂದು ಅರಿವಾಗಿದ್ದರೆ ಅವನನ್ನೇ ಸಿಂಹಾಸನದ ಮೇಲೆ ಕುಳ್ಳರಿಸಿಬಿಡುತ್ತಿದ್ದ ಧರ್ಮರಾಯ. ಆಗ ಪಾಂಡವರಿಗಿಂತ ನನ್ನ ಕೈ ಮೇಲಾಗುತ್ತಿತ್ತು ಎಂದು ಮುಂದಾಲೋಚನೆ ಮಾಡಿ ಕರ್ಣ ಸಾಯುವವರೆಗೂ ಅವನ ಬಗ್ಗೆ ಧರ್ಮರಾಯನಿಗೆ ತಿಳಿಸಲೇ ಇಲ್ಲ. ಇದು ಮೋಸವಲ್ಲವೇ? ನನಗೀಗ ಇನ್ನೊಂದು ಅನುಮಾನವೂ ಬರುತ್ತಿದೆ. ಎಷ್ಟೇ ಆಗಲಿ ಕರ್ಣ ಧರ್ಮರಾಯನಿಗೇ ಅಣ್ಣ. ಅವನೇನಾದರೂ ತನ್ನ ಬಗ್ಗೆ ತನ್ನ ಪಾಂಡವ ಸಹೋದರರಿಗೆ ತಿಳಿಸಕೂಡದು ಎಂದು ಅವನ ಬಗ್ಗೆ ತಿಳಿದ ಹಿರಿಯರಿಂದ ಮಾತು ತೆಗೆದುಕೊಂಡಿದ್ದನೋ? ಈ ನನ್ನ ಅನುಮಾನ ಸತ್ಯವೇ ಆಗಿದ್ದರೆ, ಹೇ ಕರ್ಣ, ನಿನ್ನ ಕೀರ್ತಿ ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!

ಎಲ್ಲ ಕಾಲಕ್ಕೂ ನನ್ನ ಪರ ವಹಿಸಿದ ಮಹಾರಾಜ ದೃತರಾಷ್ಟ್ರರಿಗೆ ದೊರಕಿದ್ದು ’ಪುತ್ರವ್ಯಾಮೋಹ’ ಎಂಬ ಹಣೆಪಟ್ಟಿ. ಪುತ್ರವ್ಯಾಮೋಹ ಎಂಬುದಿಲ್ಲದಿದ್ದಿದ್ದರೆ ಅರ್ಜುನನನ್ನು ಕಾಪಾಡಲು ಇಂದ್ರನೇಕೆ ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬರಬೇಕಿತ್ತು ? ಇಂದ್ರನ ಆಣತಿ ಮೀರಿ ಸೂರ್ಯನು ತನ್ನ ಪುತ್ರನನ್ನು ರಕ್ಷಿಸಲು ಬರಲಾಗಲಿಲ್ಲ ಎಂಬುದಂತೂ ನಿಜ.

ರಣರಂಗದಲ್ಲಿ ನೆಡೆದದ್ದು ಒಂದೇ ಎರಡೇ? ತಾತ ಭೀಷ್ಮರ ಸಾವು, ದ್ರೋಣರ ಶಸ್ತ್ರತ್ಯಾಗ, ಕರ್ಣನ ಸಾವು. ಎರಡೂ ಕಡೆ ಮೋಸಗಳು ನೆಡೆದವು ಆದರೆ ಎತ್ತಾಡಿದ್ದು ಮಾತ್ರ ಕೌರವರ ತಪ್ಪುಗಳು.

ನನ್ನ ಹಗೆತನ ಏನಿದ್ದರೂ ಪಾಂಡವರ, ಅದರಲ್ಲೂ ಭೀಮನ ಬಗ್ಗೆ ಮಾತ್ರ. ನನ್ನ ಪ್ರಜೆಗಳಿಗೆ ನಾನು ಎಂದಾದರೂ ಅನ್ಯಾಯ ಮಾಡಿದ್ದೇನೆಯೆ? ಧರ್ಮರಾಯನು ಈ ಕಡೆಯ ದಿನದ ಯುದ್ದದಲ್ಲಿ ಯಾರೊಂದಿಗಾದರೂ ಹೋರಾಡು ಎಂಬ ಉದಾರತನ ತೋರಿದರೂ, ನಾನು ಸೆಣಿಸಿದ್ದು ಭೀಮನೊಡನೆ ಮಾತ್ರ. ನಾನು ದುಷ್ಟಬುದ್ದಿ ಉಳ್ಳವನಾಗಿದ್ದಿದ್ದರೆ ಭೀಮನನ್ನು ಬಿಟ್ಟು ಇನ್ಯಾರೊಂದಿಗಾದರೂ ಯುದ್ದ ಮಾಡಬಹುದಿತ್ತು. ಜಯ ಖಂಡಿತ ನನಗೇ ಆಗುತ್ತಿತ್ತು. ಅಲ್ಲವೇ?

ಯಾರೂ ಹುಟ್ಟಿನಿಂದ ದುಷ್ಟರಾಗಿರುವುದಿಲ್ಲ. ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತದೆ.

ನನ್ನ ಸಮಯವಾಯಿತು. ನಾ ಮಾಡಿದ ಕಿಂಚಿತ್ ಉಪಕಾರದ ಫಲದಿಂದ ಆತ್ಮಶುದ್ದಿ ಮಾಡಿಕೊಳ್ಳಲು ಸಮಯ ದೊರೆಯಿತು. ಮುಂಬರುವ ಯುಗದಲ್ಲಿ ನನ್ನಂತಹ ದುರ್ಯೋಧನರು ಎಲ್ಲೆಲ್ಲೂ ಕಂಡುಬರುತ್ತಾರೆ. ಜೀವನವಿಡೀ ಕಲಿಯನ್ನು ಹೊತ್ತ ನನಗಲ್ಲದೇ ಇನ್ಯಾರಿಗೆ ತಿಳಿದಿರುತ್ತದೆ ಇಂತಹ ವಿಷಯ.

ನಾನಿನ್ನು ಬರುತ್ತೇನೆ. ಎಲ್ಲ ಮುಗಿದ ಈಗ ದು:ಖಿಸಿದರೆ ಫಲವೇನು ? ದುಷ್ಕೃತ್ಯಗಳನ್ನು ಮಾಡಿದೆನೆಂಬ ಹಣೆಪಟ್ಟಿಯಂತೂ ಬದಲಾಗುವುದಿಲ್ಲ. ನನ್ನ ದುರ್ವಿಧಿಗೆ ಯಾರು ಹೊಣೆ ? ಅಯ್ಯೋ, ಈ ’ದು’ ಕಾರಗಳ ಪಟ್ಟಿಗೆ ಕೊನೆಯೇ ಇಲ್ಲವೇ?
ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.