Breking News


BREKING NEWS

ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ.....

       ಇತರ ಪಕ್ಷಿಗಳಿಗಿಂತ ಗುಬ್ಬಿ ನಮಗೆ ಹೆಚ್ಚು ಪರಿಚಿತ, ಹೆಚ್ಚು ಆತ್ಮೀಯ. ಅಮ್ಮ ಅಕ್ಕಿ ಆರಿಸುವಾಗ ಚೀಂವ್, ಚೀಂವ್ ಎಂದು ಒಂದಿನಿತೂ ಅಂಕೆ-ಶಂಕೆ-ಹೆದರದೆ, ಕಾಳುಗಳನ್ನು ಕಬಳಿಸುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಹತ್ತಿರ ಹೋದಲ್ಲಿ ಪುರ್ರನೆ ಹಾರುತ್ತಿತ್ತು ಪುಟಾಣಿ ಗುಬ್ಬಿ. ನಿರುಮ್ಮಳವಾಗಿ ದೇವರ ಹಿಂದಿನ ಪಟದಲ್ಲಿ, ಅಟ್ಟದಲ್ಲಿ ತಮ್ಮದೇ ಮನೆ ಮಾಡಿಕೊಂಡು ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಮನೆಯೊಳಗೆ ನುಗ್ಗಿ ಸಂಸಾರ ಮಾಡಿಕೊಂಡಿರುತ್ತಿದ್ದ ಛಲ ಬಿಡದ ತ್ರಿವಿಕ್ರಮರು. ಇಷ್ಟೇ ಅಲ್ಲ, ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತು ಮೀಟಿಂಗ್ ಮಾಡುತ್ತಿದ್ದ ಪರಿ ನೋಡಲು ಸೊಗಸಿತ್ತು. ಚಿಕ್, ಚಿಕ್ ಚೀಂವ್, ಚೀಂವ್ ಸಂವಾದ ನೋಡಲು ಕೇಳಲು ಇಂಪಿತ್ತು. ಎಲ್ಲಿ ನೀರು ಕಂಡರೂ ಪಟಪಟನೆ ರೆಕ್ಕೆ ಅರಳಿಸಿ ಮುಳುಗುಹಾಕಿ ಸ್ನಾನ ಮಾಡಿ ನಮಗೆ ಶುದ್ಧತೆಯ ಪಾಠ ಹೇಳಿಕೊಡುತ್ತಿದ್ದವು. ಮನೆಮನೆಯಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿ, ಬಾಲ್ಯದ ನಿತ್ಯ ಸಂಗತಿಯಾಗಿದ್ದ ಗುಬ್ಬಚ್ಚಿ ಇದೀಗ ನಮ್ಮ ಮಕ್ಕಳ ಕಾಲಕ್ಕೆ ಅಪರೂಪದ ಅತಿಥಿಗಳಾಗಿವೆ. ನಾವಿನ್ನೂ ಎಚ್ಚರಗೊಳ್ಳದಿದ್ದರೆ ಹೇಗೆ? ಗುಬ್ಬಚ್ಚಿಯದು ಪ್ಯಾಸರೀನ್ ಕುಟುಂಬ. ಇದು ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿ. ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತದೆ. ಅವುಗಳ ಬಣ್ಣ ಕಂದು. ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇವು ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ. ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ವರುಷದಲಿ ಮೂರ್ನಾಲ್ಕು ಬಾರಿ ಇಡುತ್ತದೆ. ಗುಬ್ಬಚ್ಚಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು. ಗುಬ್ಬಿಗಳು ಕೂಡ ವಿಶ್ವವ್ಯಾಪಿ. ಗುಬ್ಬಿ ಕಿಟಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, ಅಲ್ಮೇರಾ, ಮನೆಯ ಮೂಲೆಗಳು, ಗೋಡೆಗಳಲ್ಲಿನ ರಂಧ್ರಗಳು ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಮರಿ ಇಡುವ ಕಾಲ ಬಂದಾಗ ಒಟ್ಟಾಗಿಯೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡಿ ಆ ಮರಿಗಳಿಗೆ ಹಾರಲು ಕಲಿಸುವವರೆಗೆ ಆದರ್ಶ ದಂಪತಿಗಳಂತೆ ಜೊತೆಯಾಗಿರುತ್ತದೆ.

ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ದಿನಗಳಲ್ಲಿ ಪಕ್ಷಿಗಳೆಡೆಗಿನ ಪ್ರೀತಿ- ವಾತ್ಸಲ್ಯವನ್ನು ಕಾಪಾಡಡಲು ಪ್ರಯತ್ನಿಸುತ್ತಿರುವ ಇಂತಹ ಕೆಲವು ಪರಿಸರ ಪ್ರೇಮಿಗಳ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಲಿ. ಪರಿಸರ ಸಮತೋಲನ ಕಾಪಾಡಲು ಪ್ರಯತ್ನಿಸಿ, ಕಳೆದುಕೊಳ್ಳುತ್ತಿರುವ ಬಾಂಧವ್ಯ, ಪರಿಸರದ ಕೊಂಡಿಯನ್ನು ಮತ್ತೆ ಕೂಡಿಸಲು ಪ್ರಯತ್ನಿಸೋಣ. ಪಕ್ಷಿಗಳು ಮತ್ತೆ ನಮ್ಮ ನಮ್ಮ ಮನೆಯಂಗಳದಲಿ ಚಿಲಿಪಿಲಿಗುಟ್ಟಲಿ. ಅವುಗಳ ಅಳಿವು-ಉಳಿವಿನೊಂದಿಗೆ ನಮ್ಮ ಬದುಕೂ ಅಂಟಿದೆ- ಭಾವನಾತ್ಮಕ ನಂಟಿದೆ. ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು? ಎಂದು ಮತ್ತೆ ಹಾಡೋಣ. ನಮ್ಮ ಆತ್ಮೀಯ ಜನ-ಪ್ರಿಯ ಗುಬ್ಬಕ್ಕನನ್ನು ಮತ್ತೆ ನಮ್ಮ ಮನ-ಮನೆಯಂಗಳಕ್ಕೆ ತರಲು ಪ್ರಯತ್ನಿಸೋಣ.